×
Ad

ಎಐಎಡಿಎಂಕೆ ಖಜಾಂಚಿ ಹುದ್ದೆಯಿಂದ ಪನ್ನೀರ್ ಸೆಲ್ವಂ ಔಟ್

Update: 2017-02-08 23:35 IST

ಚೆನ್ನೈ, ಫೆ.8: ತಮಿಳುನಾಡು ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಅವರು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ವಿರುದ್ಧ ವಾಗ್ದಾಳಿ ನಡೆಸಿದ ಕೆಲವೇ ಗಂಟೆಗಳಲ್ಲಿ ಪಕ್ಷದ ಖಜಾಂಚಿ ಹುದ್ದೆಯಿಂದ ಅವರನ್ನು ವಜಾಗೊಳಿಸಲಾಗಿದೆ. ಡಿಂಡಿಗಲ್ ಸಿ.ಶ್ರೀನಿವಾಸನ್ ಅವರನ್ನು ಹೊಸ ಖಜಾಂಚಿಯಾಗಿ ನೇಮಕ ಮಾಡಲಾಗಿದೆ.

ಶ್ರೀನಿವಾಸನ್ ಈ ಹುದ್ದೆಯನ್ನು ಮೊದಲು ನಿರ್ವಹಿಸಿದ್ದರು. ಶಶಿಕಲಾ ಅವರು ಹಾಲಿ ವಾಸವಿರುವ, ಪೊಯೆಸ್ ಗಾರ್ಡನ್‌ನಲ್ಲಿ ತಡರಾತ್ರಿ ನಡೆದ ಪಕ್ಷದ ಸಚಿವರು ಮತ್ತು ಶಾಸಕರ ಸಭೆಯಲ್ಲಿ ಪನ್ನೀರ್‌ಸೆಲ್ವಂ ಅವರನ್ನು ಪದಚ್ಯುತಿಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು. ಮರೀನಾ ಬೀಚ್‌ನಲ್ಲಿ ಶಶಿಕಲಾ ವಿರುದ್ಧ ಹೇಳಿಕೆ ನೀಡಿದ ಬೆನ್ನಲ್ಲೇ, ಶಾಸಕರು ಹಾಗೂ ಸಚಿವರು ಪೊಯೆಸ್ ಗಾರ್ಡನ್‌ಗೆ ಧಾವಿಸಿದರು.
ತಡರಾತ್ರಿ 1 ಗಂಟೆಯ ವೇಳೆಗೆ ಶಶಿಕಲಾ ಮನೆಯಿಂದ ಹೊರಬಂದು, ಬೆಂಬಲಕ್ಕೆ ಧಾವಿಸಿ ಮನೆಯ ಹೊರಗೆ ನಿಂತಿದ್ದ ಶಾಸಕರನ್ನು ಸ್ವಾಗತಿಸಿದರು. ಖಂಡಿತವಾಗಿಯೂ ಪನ್ನೀರ್‌ಸೆಲ್ವಂ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾಗೊಳಿಸೋಣ ಎಂದು ಅವರು ಹೇಳಿದರು.
ಪನ್ನೀರ್‌ಸೆಲ್ವಂ ಅವರಿಗೆ ಡಿಎಂಕೆ ಬೆಂಬಲವಾಗಿ ನಿಂತಿದೆ. ನಮ್ಮೆಲ್ಲ ಶಾಸಕರೂ ಒಂದು ಕುಟುಂಬದಂತೆ ಒಗ್ಗಟ್ಟಿನಿಂದ ಇದ್ದಾರೆ. ಆದ್ದರಿಂದ ಯಾವ ಸಮಸ್ಯೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು. ವಿಧಾನಸಭೆ ಅಧಿವೇಶನ ನಡೆಯುತ್ತಿದ್ದ ಅವಧಿಯಲ್ಲಿ ಪನ್ನೀರ್‌ಸೆಲ್ವಂ ಮತ್ತು ವಿರೋಧ ಪಕ್ಷದ ನಾಯಕ ಎಂ.ಕೆ.ಸ್ಟಾಲಿನ್ ಪರಸ್ಪರ ನೋಡಿಕೊಂಡು ನಗೆ ವಿನಿಮಯ ಮಾಡಿಕೊಳ್ಳುತ್ತಿದ್ದರು ಎಂದು ಶಶಿಕಲಾ ಆಕ್ಷೇಪಿಸಿದರು.
ಇದಕ್ಕೆ ಎದುರೇಟು ನೀಡಿದ ಪನ್ನೀರ್‌ಸೆಲ್ವಂ, ಮಾನವರು ಮಾತ್ರ ನಗಬಲ್ಲರು. ನಗುವುದು ಅಪರಾಧವಲ್ಲ ಎಂದು ಹೇಳಿಕೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News