×
Ad

ಜೆಎನ್‌ಯು ದೇಶದ್ರೋಹ ಪ್ರಕರಣ : ಕನೈಯ್ಯಾ ,ಉಮರ್ ವಿರುದ್ಧ ಇನ್ನೂ ಆರೋಪ ಪಟ್ಟಿ ಸಲ್ಲಿಸದ ಪೊಲೀಸರು

Update: 2017-02-09 15:49 IST

ಹೊಸದಿಲ್ಲಿ,ಫೆ.9: ದಿಲ್ಲಿ ಪೊಲೀಸರು ಜೆಎನ್‌ಯು ವಿದ್ಯಾರ್ಥಿಗಳು ಮತ್ತು ದಿಲ್ಲಿ ವಿವಿ ಮಾಜಿ ಪ್ರೊಫೆಸರ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಒಂದು ವರ್ಷಕ್ಕೂ ಅಧಿಕ ಸಮಯ ಕಳೆದಿದೆ. ಆದರೆ ಅವರಿನ್ನೂ ಪ್ರಕರಣದಲ್ಲಿ ಆರೋಪ ಪಟ್ಟಿಯನ್ನು ದಾಖಲಿಸಬೇಕಿದೆ.

ಪೊಲೀಸರು ತಮ್ಮ ಎಫ್‌ಐಆರ್‌ನಲ್ಲಿ ಈಗ ಈಗ ಹೆಚ್ಚಿನವರಿಗೆ ಮರೆತೇ ಹೋಗಿರುವ ಓಬಿರಾಯನ ಕಾನೂನೊಂದನ್ನು ಬಳಸಿದ್ದಕ್ಕಾಗಿ ಕಳೆದ ವರ್ಷ ಅವರ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆದಿದ್ದವು. ತಮ್ಮನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಮತ್ತು ನಕಲಿ ವೀಡಿಯೊಗಳ ಆಧಾರದಲ್ಲಿ ಆರೋಪಗಳನ್ನು ಹೊರಿಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು.

ಕುತೂಹಲದ ವಿಷಯವೆಂದರೆ ದಿಲ್ಲಿ ಪೊಲೀಸರು 2016ರ ಫೆಬ್ರವರಿಯಲ್ಲಿ ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧ ಎರಡು ದೇಶದ್ರೋಹ ಪ್ರಕರಣಗಳನ್ನು ದಾಖಲಿಸಿದ ಬಳಿಕ ದಿಲ್ಲಿಯಾದ್ಯಂತ ಮತ್ತೆ ರಾಷ್ಟ್ರದ್ರೋಹ ಪ್ರಕರಣ ದಾಖಲಾಗಿಲ್ಲ. ಅದಕ್ಕೂ ಹಿಂದೆ 2013ರಲ್ಲಿ ಒಂದು ದೇಶದ್ರೋಹ ಪ್ರಕರಣ ದಾಖಲಾಗಿತ್ತು.

ಕನೈಯ್ಯ ಕುಮಾರ್,ಉಮರ್ ಖಾಲಿದ್,ಅನಿರ್ಬಾನ ಭಟ್ಟಾಚಾರ್ಯ ಸೇರಿದಂತೆ ಜೆಎನ್‌ಯು ವಿದ್ಯಾರ್ಥಿಗಳು ಮತ್ತು ದಿಲ್ಲಿ ವಿವಿಯ ಮಾಜಿ ಪ್ರೊಫೆಸರ್ ಎಸ್‌ಎಅರ್ ಗೀಲಾನಿ ವಿರುದ್ಧ ದೇಶದ್ರೋಹ ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ 2016,ಫೆ.9ರಂದು ಜೆಎನ್‌ಯು ಕ್ಯಾಂಪಸ್‌ಲ್ಲಿ ಸಂಸತ್ ಭವನದ ಮೇಲಿನ ದಾಳಿಯ ದೋಷಿ ಅಫ್ಝಲ್ ಗುರುವನ್ನು ಗಲ್ಲಿಗೇರಿಸಿದ್ದಕ್ಕೆ ಸಂಬಂಧಿಸಿದಂತೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಮೂವರು ಜೆಎನ್‌ಯು ವಿದ್ಯಾರ್ಥಿಗಳು ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿದ್ದರೆಂದು ಆರೋಪಿಸಲಾಗಿತ್ತು.

ಈ ಬಗ್ಗೆ ವಸಂತ ವಿಹಾರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಂತಹುದೇ ದೇಶವಿರೋಧಿ ಘೋಷಣೆಗಳು ಕೇಳಿ ಬಂದಿತ್ತೆನ್ನಲಾದ,ಪ್ರೆಸ್ ಕ್ಲಬ್‌ನೊಳಗೆ ನಡೆದಿದ್ದ ಕಾರ್ಯಕ್ರಮವನ್ನು ಸಂಘಟಿಸಿದ್ದಕ್ಕಾಗಿ ಗೀಲಾನಿ ವಿರುದ್ಧ ಎರಡನೇ ದೇಶದ್ರೋಹ ಪ್ರಕರಣ ಸಂಸತ್ ರಸ್ತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.

ಆಸಕ್ತಿಪೂರ್ಣ ವಿಷಯವೆಂದರೆ ಇವೆರಡೂ ಪ್ರಕರಣಗಳನ್ನು ಪೊಲೀಸರು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದರು. ಇಲ್ಲಿ ಪೊಲೀಸ್ ಅಧಿಕಾರಿಗಳೇ ದೂರುದಾರರಾಗಿದ್ದರು.

 ಆರೋಪಟ್ಟಿ ಸಲ್ಲಿಕೆಯಲ್ಲಿ ವಿಳಂಬ ಕುರಿತಂತೆ ದಿಲ್ಲಿ ಪೊಲೀಸ್ ವಕ್ತಾರ ದೀಪೇಂದ್ರ ಪಾಠಕ್ ಅವರು, ದಿಲ್ಲಿ ಪೊಲೀಸರು ಪ್ರಕರಣಗಳನ್ನು ಎಲ್ಲ ಕೋನಗಳಿಂದಲೂ ಪರಿಶೀಲಿಸುತ್ತಿದ್ದಾರೆ. ಕೆಲವೊಂದು ಪ್ರಕರಣಗಳಲ್ಲಿ ನಿರ್ಧಾರ ಕೈಗೊಳ್ಳಲು ಸಮಯಾವಕಾಶ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News