×
Ad

ಎಡಿಎಂಕೆ ಶಾಸಕರು ಹಾಸ್ಟೆಲ್‌ನಲ್ಲಿದ್ದಾರೆಂಬ ಹೇಳಿಕೆಯನ್ನು ಹಿಂಪಡೆದ ತ.ನಾ.ಸರಕಾರ

Update: 2017-02-10 16:46 IST

ಚೆನ್ನೈ,ಫೆ.10: ತನ್ನ ಬೆಂಬಲಿಗರು ಎಂದು ಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಹೇಳಿಕೊಂಡಿರುವ ಪಕ್ಷದ 130 ಶಾಸಕರು ಇಲ್ಲಿಯ ಚೆಪಾಕ್‌ನಲ್ಲಿರುವ ಶಾಸಕರ ಭವನದಲ್ಲಿ ಸುರಕ್ಷಿತವಾಗಿದ್ದಾರೆ ಮತ್ತು ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂದು ಗುರುವಾರವಷ್ಟೇ ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದ ಹೆಚ್ಚುವರಿ ಸರಕಾರಿ ಅಭಿಯೋಜಕ ವಿ.ಎಂ.ರಾಜೇಂದ್ರನ್ ಅವರು ಶುಕ್ರವಾರ ತಿಪ್ಪರಲಾಗ ಹಾಕಿದ್ದಾರೆ. ತನ್ನ ಹೇಳಿಕೆಯನ್ನು ಹಿಂದೆಗೆದುಕೊಂಡಿರುವ ಅವರು, ಶಾಸಕರು ಅಕ್ರಮ ಬಂಧನದಲ್ಲಿಲ್ಲ, ಆದರೆ ಅವರು ನಿಜಕ್ಕೂ ಎಲ್ಲಿದ್ದಾರೆ ಎಂಬ ಬಗ್ಗೆ ಮಾಹಿತಿಗಳನ್ನು ಪಡೆಯಲು ತನಗೆ ಕಾಲಾವಕಾಶದ ಅಗತ್ಯವಿದೆ ಎಂದು ಹೇಳಿದರು.

  ವಕೀಲರಾದ ಎಂ.ಆರ್.ಇಳವರಸನ್ ಮತ್ತು ವಿ.ಪ್ರೀತಾ ಅವರು ಹೇಬಿಯಸ್ ಕಾರ್ಪಸ್ ಅರ್ಜಿಗಳನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ ಶಾಸಕರು ವಾಸ್ತವವಾಗಿ ಎಲ್ಲಿದ್ದಾರೆ ಎನ್ನುವುದನ್ನು ಪೀಠವು ತಿಳಿಯಲು ಬಯಸಿದಾಗ ರಾಜೇಂದ್ರನ್ ಅವರು ಗುರುವಾರ ನ್ಯಾಯಾಲಯದಲ್ಲಿ ನೀಡಿದ್ದ ತನ್ನ ಹೇಳಿಕೆಯನ್ನು ಹಿಂದೆಗೆದುಕೊಂಡರು.

ಫೆ.8ರಂದು ಎಡಿಎಂಕೆ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲು ಚೆನ್ನೈಗೆ ಭೇಟಿ ನೀಡಿದ್ದ ಕುನ್ನಂ ಶಾಸಕ ಆರ್.ಟಿ.ರಾಮಚಂದ್ರನ್ ಮತ್ತು ಕೃಷ್ಣರಾಯಪುರಂ ಶಾಸಕಿ ಎಂ.ಗೀತಾ ಅವರು ನಾಪತ್ತೆಯಾಗಿದ್ದಾರೆ. ಅವರನ್ನು ಪತ್ತೆ ಹಚ್ಚುವಂತೆ ಪೊಲೀಸರಿಗೆ ನಿರ್ದೇಶ ನೀಡುವಂತೆ ಅರ್ಜಿದಾರರು ಕೋರಿಕೊಂಡಿದ್ದಾರೆ.

  ಅರ್ಜಿದಾರರಲ್ಲೋರ್ವರ ಪರ ವಕೀಲರಾದ ಕೆ.ಬಾಲು ಅವರು,ಈಸ್ಟ್ ಕೋಸ್ಟ್ ರಸ್ತೆಯ ರೆಸಾರ್ಟ್‌ವೊಂದರಲ್ಲಿ ಶಾಸರನ್ನು ಅಕ್ರಮವಾಗಿ ಕೂಡಿಹಾಕಲಾಗಿದೆ. ಅವರಿಗೆ ಆಹಾರ ಮತ್ತು ನೀರನ್ನೂ ನೀಡಲಾಗುತ್ತಿಲ್ಲ. ಅವರು ತಮ್ಮ ಕುಟುಂಬಗಳನ್ನು ಸಂಪರ್ಕಿಸಲೂ ಅವಕಾಶ ನೀಡುತ್ತಿಲ್ಲ ಎಂದು ಮಾಹಿತಿಗಳು ತಿಳಿಸಿವೆ ಎಂದರು.

ಹೇಳಿಕೆಗಳನ್ನು ದಾಖಲಿಸಿಕೊಂಡ ಪೀಠವು ಎಲ್ಲ ಆರೋಪಗಳ ಕುರಿತು ಸೂಚನೆಗಳನ್ನು ಪಡೆದುಕೊಳ್ಳುವಂತೆ ರಾಜೇಂದ್ರನ್‌ಗೆ ತಿಳಿಸಿತು ಮತ್ತು ಮುಂದಿನ ವಿಚಾರಣೆಯನ್ನು ಫೆ.12ಕ್ಕೆ ನಿಗದಿಗೊಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News