ಗೃಹಿಣಿಯ ಆತ್ಮಹತ್ಯೆಗೆ ಕೋತಿಗಳು ಕಾರಣ ಎಂದ ಸಂಬಂಧಿಕರು !
ತಿರುವನಂತಪುರಂ, ಫೆ.10: ನೆಯ್ಯಟ್ಟಿಕರ ಕತ್ತಿಪಾರ ಎಂಬಲ್ಲಿ ಗೃಹಿಣಿಯೊಬ್ಬರ ಆತ್ಮಹತ್ಯೆಗೆ ಕೋತಿಗಳ ಭಾರೀ ಉಪಟಳವೇ ಕಾರಣವೆಂದು ಗೃಹಿಣಿಯ ಸಂಬಂಧಿಕರು ಹೇಳಿದ್ದಾರೆ. ಶುಕ್ರವಾರ ವೆಳ್ಳರಡ ಕತ್ತಿಪ್ಪಾರ ತೆಕ್ಕೆಕರ ಪುತ್ತನ್ ವೀಡ್ ದಿವಂಗತ ಮುತ್ತಯ್ಯ ಎಂಬವರ ಪತ್ನಿ ಪುಷ್ಪಾಬಾಯಿ(52) ಆಸಿಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅವರ ಆತ್ಮಹತ್ಯೆಗೆ ಕೋತಿಗಳ ಹಾವಳಿಯೇ ಕಾರಣವೆಂದು ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ.
ಕತ್ತಿಪ್ಪಾರ ಪ್ರದೇಶದಲ್ಲಿ ಕೋತಿಗಳ ಭಾರೀ ಉಪಟಳವಿದೆ. ಅಡಿಗೆಮನೆಯಲ್ಲಿಟ್ಟ ವಸ್ತುಗಳನ್ನು ಕೂಡಾ ಕೋತಿಗಳು ನಾಶಪಡಿಸುತ್ತಿವೆ. ಕೋತಿಗಳ ಉಪಟಳದಿಂದಾಗಿ ಇಲ್ಲಿಂದ ಹಲವು ಕುಟುಂಬಗಳು ಮನೆತೊರೆದು ಹೋಗಿವೆ.
ಒಂದುವರ್ಷದ ಹಿಂದೆ ನಡೆದಿದ್ದ ಅಪಘಾತದಲ್ಲಿ ಪುಷ್ಪಾಬಾಯಿಯ ಪತಿ ಮುತ್ತಯ್ಯ ನಿಧನರಾಗಿದ್ದರು. ನಂತರ ಮಗನ ಚಿಕ್ಕ ವರಮಾನದಿಂದ ಇವರು ಜೀವನ ನಡೆಸುತ್ತಿದ್ದರು. ಇತ್ತೀಚೆಗೆ ಕೋತಿಪಡೆ ಪುಷ್ಪಾಬಾಯಿಯ ಮನೆಯ ಛಾವಣಿಯನ್ನು ಹಾಳುಗೆಡವಿತ್ತು. ಶೀಟುಗಳನ್ನು ತುಂಡು ಮಾಡಿ ಹಾಕಿದ್ದವು.
ಆಹಾರವಸ್ತು ಮತ್ತು ಕೃಷಿಜಮೀನು ನಾಶಪಡಿಸುತ್ತಿರುವ ಕೋತಿಗಳ ಉಪಟಳದಿಂದ ಪುಷ್ಪಾಬಾಯಿ ತುಂಬಾ ನೊಂದಿದ್ದರು. ಇದುವೇ ಅವರ ಆತ್ಮಹತ್ಯೆಗೆ ಕಾರಣವೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಅವರ ಮೃತದೇಹವನ್ನು ಮನೆಯವರಿಗೆ ಬಿಟ್ಟು ಕೊಡಲಾಗಿದೆ ಎಂದು ವರದಿಯಾಗಿದೆ.