ಅತ್ಯಾಚಾರ ಆರೋಪಿಗಳಿಗೆ ಚಿತ್ರಹಿಂಸೆ ನೀಡಿಸಿದ್ದೆ ಎಂದ ಉಮಾಭಾರತಿ

Update: 2017-02-10 12:07 GMT

ಆಗ್ರಾ,ಫೆ.10 : ತಾನು ಮಧ್ಯ ಪ್ರದೇಶದ ಮುಖ್ಯಮಂತ್ರಿಯಾಗಿದ್ದಾಗ ಅತ್ಯಾಚಾರ ಆರೋಪಿಗಳಿಗೆ ಚಿತ್ರಹಿಂಸೆ ನೀಡಿಸಿ ಅದನ್ನು ಅತ್ಯಾಚಾರ ಸಂತ್ರಸ್ತರು ನೋಡುವಂತೆ ಮಾಡಿದ್ದೇನೆಂಬ ಆಶ್ಚರ್ಯಕರ ಮಾಹಿತಿಯನ್ನು ಕೇಂದ್ರ ಸಚಿವೆ ಹಾಗೂ ಹಿರಿಯ ಬಿಜೆಪಿ ನಾಯಕಿ ಉಮಾಭಾರತಿ ಹೊರಗೆಡಹಿದ್ದಾರೆ.

ಗುರುವಾರ ಆಗ್ರಾದಲ್ಲಿ ರ‍್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಅವರು, ಆಗಸ್ಟ್ 2016ರಲ್ಲಿ ಬುಲಂದ್ ಶೆಹರ್ ನಲ್ಲಿ ಮಹಿಳೆ ಮತ್ತಾಕೆಯ ಮಗಳ ಮೇಲೆ ಡಕಾಯಿತರು ನಡೆಸಿದ ಸಾಮೂಹಿಕ ಅತ್ಯಾಚಾರ ಘಟನೆಯನ್ನು ಉಲ್ಲೇಖಿಸುತ್ತಾ ‘‘ರೇಪಿಸ್ಟರನ್ನು ತಲೆಕೆಳಗಾಗಿ ನೇತಾಡಿಸಿ ಅವರ ಚರ್ಮ ಕಿತ್ತು ಬರುವವರೆಗೆ ಹೊಡೆಯಬೇಕು. ಅವರ ಗಾಯಗಳ ಮೇಲೆ ಉಪ್ಪು ಮತ್ತು ಮೆಣಸನ್ನು ಉಜ್ಜಿ ಅವರು ತಮ್ಮ ಪ್ರಾಣಕ್ಕಾಗಿ ಬೊಬ್ಬಿಡುವಂತೆ ಮಾಡಬೇಕು. ನಾನು ಮುಖ್ಯಮಂತ್ರಿಯಾಗಿದ್ದಾಗ ಇದನ್ನೇ ಮಾಡಿಸಿದ್ದೆ’’ ಎಂದರು.

‘‘ಆಗ ಪೊಲೀಸ್ ಅಧಿಕಾರಿಯೊಬ್ಬರು ಈ ವಿಧದ ಶಿಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿದಾಗ ‘ದಾನವರಂತೆ ವರ್ತಿಸಿದ ಜನರಿಗೆ ಮಾನವ ಹಕ್ಕುಗಳಿಲ್ಲ. ಅವರ ತಲೆಯನ್ನು ರಾವಣನ ತಲೆ ಕಡಿದಂತೆ ಕಡಿಯಬೇಕು’ ಎಂದು ಹೇಳಿದ್ದೆ’’ ಎಂದೂ ಸಚಿವೆ ತಿಳಿಸಿದರು. ‘‘ಅತ್ಯಾಚಾರಿಯೊಬ್ಬನಿಗೆ ನೀಡಲಾಗುತ್ತಿದ್ದ ಹಿಂಸೆಯನ್ನು ಸಂತ್ರಸ್ತೆ ಲಾಕ್-ಅಪ್ ನ ಸಣ್ಣ ಕಿಟಿಕಿಯೊಂದರಲ್ಲಿ ವೀಕ್ಷಿಸಲು ವ್ಯವಸ್ಥೆ ಕಲ್ಪಿಸಿ ಆಕೆಗೆ ಶಾಂತಿ ದೊರೆಯುವಂತೆ ಮಾಡಿದ್ದೆ’’ ಎಂದೂ ಸಚಿವೆ ರ‍್ಯಾಲಿಯಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News