×
Ad

ಆಸ್ಕರ್ ಪ್ರಶಸ್ತಿಯ ಕದ ತಟ್ಟುತ್ತಿರುವ ‘ರಿಯಲ್’ ಸಿನೆಮಾ

Update: 2017-02-10 17:57 IST

ಇದೊಂದು ನೈಜ ಕಥೆಯಾಗಿರುವುದು ಅದನ್ನು ಅತ್ಯಂತ ಬಲಿಷ್ಠ ಹಾಗೂ ಅತ್ಯದ್ಭುತವನ್ನಾಗಿಸಿದೆ. ಪ್ರತಿಯೊಂದು ಪಾತ್ರಗಳೂ ಪರಸ್ಪರಿಗಾಗಿ ವ್ಯಕ್ತಪಡಿಸುವ ಪ್ರೀತಿ ಹಾಗೂ ಅವರೆಲ್ಲರೂ ಹೊಂದಿರುವ ಅಧ್ಯಾತ್ಮಿಕ ದೃಷ್ಟಿಕೋನವು ಈ ಕಥೆಯನ್ನು ಪವಾಡ ಸದೃಶವನ್ನಾಗಿಸಿದೆ.

1987ರಲ್ಲಿ, ಆರು ವರ್ಷ ವಯಸ್ಸಿನ ಸರೂ ರೈಲ್ಲಿನಲ್ಲೇ ನಿದ್ರಾ ಪರವಶವಾಗಿದ್ದರಿಂದ ಮಧ್ಯಪ್ರದೇಶದ ಖಾಂಡ್ವಾದಲ್ಲಿರುವ ತನ್ನ ಮನೆಯಿಂದ ನೂರಾರು ಕಿ.ಮೀ. ದೂರದವರೆಗೆ ತನಗೆ ಅರಿವಿಲ್ಲದೆ ಪ್ರಯಾಣಿಸಿ, ಕೊನೆಗೆ ದೂರದ ಕೋಲ್ಕತಾ ನಗರವನ್ನು ತಲುಪಿದ. ಎಳೆಯ ಬಾಲಕನಾದ ಆತ ತನ್ನ ಸ್ವಂತ ಊರನ್ನು ಗುರುತಿಸಲು ಸಾಧ್ಯವಾಗದ ಕಾರಣ, ಆತ ಕೋಲ್ಕತಾದ ಬೀದಿಗಳಲ್ಲಿ ದಿಕ್ಕುತೋಚದೆ ಅಲೆದಾಡಿದ. ಕೊನೆಗೊಬ್ಬ ದಾರಿಹೋಕ, ಆತನನ್ನು ಸ್ಥಳೀಯ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ. ಪೊಲೀಸರು ಆತನನ್ನು ಅನಾಥಾಶ್ರಮಕ್ಕೆ ವರ್ಗಾಯಿಸಿದರು. ಇಂಟರ್‌ನೆಟ್ ವ್ಯವಸ್ಥೆ ಇಲ್ಲದ ಕಾಲವದು. ಅನಾಥಾಶ್ರಮದವರಿಗೂ ಈ ಬಾಲಕನ ತಾಯಿಯನ್ನು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ.ಇದಾದ ಬಳಿಕ ಸರೂವನ್ನು ಆಸ್ಟ್ರೇಲಿಯ ದಂಪತಿ ದತ್ತು ಸ್ವೀಕರಿಸಿದರು. ಇಪ್ಪತ್ತಾರು ವರ್ಷಗಳ ಆನಂತರ ‘ಗೂಗ್ಲ್ ಅರ್ಥ್’ (ಅಂತರ್ಜಾಲದಲ್ಲಿ ಸ್ಥಳವನ್ನು ಶೋಧಿಸುವ ಸಾಫ್ಟ್‌ವೇರ್)ನ ಮೂಲಕ ಸರೂ ತನ್ನ ಊರಿಗೆ ಮರಳಲು ಶಕ್ತನಾದ.

ಈ ಅಸಾಧಾರಣ ಕಥೆಯನ್ನು ಬ್ರಿರ್ಲಿ ತನ್ನ 2012ರ ಅನುಭವ ಕಥನ ‘ಎ ಲಾಂಗ್ ವೇ ಹೋಮ್’ ಆಸ್ಟ್ರೇಲಿಯನ್ ಚಿತ್ರನಿರ್ದೇಶಕ ಗಾರ್ತ್ ಡೇವಿಸ್ ಅವರ ಚೊಚ್ಚಲ ಚಿತ್ರ ‘ಲಯನ್’ಗೆ ಆಧಾರಕತೆಯಾಯಿತು. ಈ ಚಿತ್ರದಲ್ಲಿ ಬಾಲಕ ಸರೂ ಪಾತ್ರದಲ್ಲಿ ಸನ್ನಿ ಪವಾರ್, ಯುವ ಪಾತ್ರದಲ್ಲಿ ದೇವ್‌ಪಟೇಲ್, ಆತನನ್ನು ದತ್ತುತೆಗೆದುಕೊಂಡ ತಾಯಿಯಾಗಿ ನಿಕೊಲೆ ಕಿಡ್‌ಮ್ಯಾನ್ ಹಾಗೂ ಆತನ ತಾಯಿಯಾಗಿ ಪ್ರಿಯಾಂಕಾ ಬೋಸ್ ನಟಿಸಿದ್ದಾರೆ. ರೂನಿ ಮಾರಾ, ದೀಪ್ತಿ ನವಲ್, ನವಾಝುದ್ದೀನ್ ಸಿದ್ದೀಕಿ ಹಾಗೂ ತನಿಶಾ ಚಟರ್ಜಿ ಪೋಷಕ ತಾರೆಯರಾಗಿ ಅಭಿನಯಿಸಿದ್ದಾರೆ.

ಈ ಸಲದ ಆಸ್ಕರ್ ಸ್ಪರ್ಧೆಯಲ್ಲಿ ‘ಲಯನ್’ ಶ್ರೇಷ್ಠ ಚಿತ್ರ ಸೇರಿದಂತೆ ಆರು ವಿಭಾಗಗಳಿಗೆ ನಾಮಕರಣ ಗೊಂಡಿದೆ. ಪೋಷಕ ನಟ, ನಟಿ ಪ್ರಶಸ್ತಿ ವಿಭಾಗಗಳಿಗೂ ಪಟೇಲ್ ಹಾಗೂ ಕಿಡ್‌ಮ್ಯಾನ್ ನಾಮಕರಣ ಗೊಂಡಿದ್ದಾರೆ.

ಡೇವಿಸ್, ಈ ಮೊದಲು ಜೇನ್ ಕ್ಯಾಂಪಿಯೊನ್ ಅವರ ಕಿರು ಸರಣಿ ಚಿತ್ರ ‘ಟಾಪ್ ಆಫ್ ದಿ ಲೇಕ್’ (2013)ನ ಕೆಲವು ಎಪಿಸೋಡ್‌ಗಳನ್ನು ನಿರ್ದೇಶಿಸಿದ್ದರು. ಗೂಗ್ಲ್ ಅರ್ಥ್‌ನ ದೃಶ್ಯಾವಳಿಗಳನ್ನು ಸಿನೆಮಾ ರೂಪಕ್ಕಿಳಿಸುವಲ್ಲಿ ಎದುರಾದ ಸವಾಲುಗಳನ್ನು ಈ ಆಸ್ಟ್ರೇಲಿಯನ್ ನಿರ್ದೇಶಕ ಆನ್‌ಲೈನ್ ಪತ್ರಿಕೆ ಸ್ಕ್ರಾಲ್.ಇನ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ದೇವ್‌ಪಟೇಲ್‌ನಿಂದ ಅತ್ಯುತ್ತಮ ಅಭಿನಯವನ್ನು ತೆಗೆಸಿಕೊಳ್ಳಲು ತಾನು ಪಟ್ಟ ಶ್ರಮ ಹಾಗೂ ತನಗೆ ಅಪರಿಚವಾದ ವಿದೇಶಿ ಭಾಷೆಯಲ್ಲಿ, ಕಲಾವಿದರಿಗೆ ನಿರ್ದೇಶನ ನೀಡುವಲ್ಲಿ ಎದುರಾಗುವ ಸವಾಲುಗಳು ಇವೆಲ್ಲವನ್ನೂ ರಸವತ್ತಾಗಿ ವಿವರಿಸಿದ್ದ್ದಾರೆ.

ಈ ಕಥೆಯು ನಿಮ್ಮನ್ನು ಯಾವ ರೀತಿ ಸೆಳೆಯಿತು?

 ಉ: ಇದೊಂದು ನೈಜ ಕಥೆಯಾಗಿರುವುದು ಅದನ್ನು ಅತ್ಯಂತ ಬಲಿಷ್ಠ ಹಾಗೂ ಅತ್ಯದ್ಭುತವನ್ನಾಗಿಸಿದೆ. ಪ್ರತಿಯೊಂದು ಪಾತ್ರಗಳೂ ಪರಸ್ಪರರಿಗಾಗಿ ವ್ಯಕ್ತಪಡಿಸುವ ಪ್ರೀತಿ ಹಾಗೂ ಅವರೆಲ್ಲರೂ ಹೊಂದಿರುವ ಅಧ್ಯಾತ್ಮಿಕ ದೃಷ್ಟಿಕೋನವು ಈ ಕಥೆಯನ್ನು ಪವಾಡ ಸದೃಶವನ್ನಾಗಿಸಿದೆ.

 ಇದು ನೈಜಕತೆಯಾಗಿದ್ದರೂ, ನಾಟಕೀಯ ತಿರುವುಗಳಿಂದ ತುಂಬಿದೆ. ಸಾಕ್ಷಚಿತ್ರವೆನಿಸಬಹುದಾಗಿದ್ದ ಈ ಚಿತ್ರಕ್ಕೆ ಕಾಲ್ಪನಿಕ ಸ್ಪರ್ಶವನ್ನು ಆಯ್ಕೆ ಮಾಡುವಲ್ಲಿ ಯಾವುದಾದರೂ ನಿರ್ದಿಷ್ಟ ಕಾರಣವಿದೆಯೇ?

ಉ: ಈ ಚಿತ್ರದೊಂದಿಗೆ ನೀವು ಸರೂವಿನ ಮನಸ್ಸನ್ನು ಪ್ರವೇಶಿಸುವಿರಿ, ಹೌದು. ಈ ಚಿತ್ರ ವೀಕ್ಷಿಸುವಾಗ ನಿಮಗೆ ಅಂತಹ ಅನುಭವವಾಗಬಹುದು. ನೀವು ನೀವಾಗಿಯೇ ಆ ಪಾತ್ರದೊಂದಿಗೆ ಲೀನವಾಗುವಿರಿ. ಎಳೆಯ ಬಾಲಕನೊಬ್ಬ ರೈಲಿನಲ್ಲಿ ಸಿಕ್ಕಿಹಾಕಿಕೊಳ್ಳುವಾಗ ಆತನಿಗಾಗುವ ಭಯ, ಆಘಾತದ ತೀವ್ರತೆಯನ್ನು ಸಾಕ್ಷಚಿತ್ರದಲ್ಲಿ ತೋರಿಸಲು ಸಾಧ್ಯವಾಗಲಾರದು. ಹೌರಾದಲ್ಲಿ ಜನಜಂಗುಳಿಯ ಮಧ್ಯೆ ಕಳದುಹೋಗುವ ಬಾಲಕನ ಒಂಟಿತನ ಹಾಗೂ ಆತನ ನೆರವಿಗೆ ಬರುವವರು ಯಾರೂ ಇಲ್ಲದಂತಹ ಸನ್ನಿವೇಶಗಳನ್ನು ಸಾಕ್ಷಚಿತ್ರದಲ್ಲಿ ತೋರಿಸಲು ಸಾಧ್ಯವೆಂದು ನಾನು ಭಾವಿಸಲಾರೆ. ಅವೆಲ್ಲವನ್ನೂ ಪದಗಳಲ್ಲಿ ಬಣ್ಣಿಸಲು ಸಾಧ್ಯವಿದೆ. ಆದರೆ ಇದೊಂದು ದೃಶ್ಯಾನುಭವವಾಗಿದೆ. ಹೀಗಾಗಿ ಚಿತ್ರದ ಕಥೆಯು ಹೆಚ್ಚು ಪ್ರಯೋಗಶೀಲವಾಗಿದೆ.

ನಿಮ್ಮ ಸಂಶೋಧನೆಯು ಯಾವುದೆಲ್ಲವನ್ನು ಒಳಗೊಂಡಿದೆ?

ಉ:  ಚಿತ್ರಕಥೆಯನ್ನು ಬರೆಯುವ ಮುನ್ನ ನಾನು ಭಾರತಕ್ಕೆ ಬಂದು, ಸರೂ ನಡೆದಾಡಿದ ಪ್ರದೇಶಗಳ ಜಾಡು ಹಿಡಿದುಹೋದೆ. ಭಾರತ ಹಾಗೂ ಆಸ್ಟ್ರೇಲಿಯದಲ್ಲಿರುವ ಆತನ ಕುಟುಂಬವನ್ನು ಭೇಟಿಯಾಗಿ ಅವರ ಜಗತ್ತಿನಲ್ಲಿ ನಾನು ಕೂಡಾ ಮುಳುಗಿಹೋಗಲು ಬಯಸಿದೆ ಹಾಗೂ ಸರೂವಿನ ಭಾವನೆಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡಿದೆ.

ಕಥೆಯ ಬಹುತೇಕ ಭಾಗವು ಗೂಗ್ಲ್ ಅರ್ಥ್ ಮೂಲಕ ಅನಾವರಣಗೊಳ್ಳುವಂತಹ ಪುಸ್ತಕ ಕೃತಿಯನ್ನು ಚಿತ್ರಕ್ಕೆ ಅಳವಡಿಸುವುದು ನಿಮಗೆ ಹೇಗೆ ಸಾಧ್ಯವಾಯಿತು.

 ಉ: ಇದೊಂದು ಅತ್ಯಂತ ಸವಾಲುದಾಯಕವಾಗಿತ್ತು. ಯಾಕೆಂದರೆ ಕಥೆಯ ಗಣನೀಯ ಭಾಗವನ್ನು ಕಂಪ್ಯೂಟರ್ ಪರದೆಯಲ್ಲಿ ತೋರಿಸು ವುದರಿಂದ ಸಿನೆಮಾ ವೀಕ್ಷಿಸುವ ಅನುಭವವನ್ನು ಮೂಡಿಸದೆ ಇರುವ ಅಪಾಯವಿರುತ್ತದೆ. ಗೂಗ್ಲ್ ಅರ್ಥ್ ಹಾಗೂ ನಕ್ಷೆಗಳ ಹಳೆಯ ಆವೃತ್ತಿಗಳ ರಿಸೊಲ್ಯೂಶನ್ (ಸ್ಪಷ್ಟತೆ) ಚೆನ್ನಾಗಿಲ್ಲ. ಸರೂ ಈ ಅಸ್ಪಷ್ಟವಾದ ಚಿತ್ರಗಳಲ್ಲಿ ತನ್ನ ಹುಟ್ಟೂರನ್ನು ಹುಡುಕಲು ಯತ್ನಿಸುತ್ತಾನೆ. ಹೀಗಾಗಿ, ನೀವು ಈ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ತೋರಿಸಿದಲ್ಲಿ, ಖಂಡಿತವಾಗಿಯೂ ಇದು ನಿಮ್ಮನ್ನು ಕಾಡುತ್ತದೆ. ಒಮ್ಮೆ ಈ ಕಥೆಗೆ ಪೂರಕವಾಗಿ ನಾನು ಈ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬಹುದೆಂಬುದನ್ನು ಅರಿತುಕೊಂಡಾಗ ಅದೊಂದು ಅತ್ಯಂತ ಶಕ್ತಿಶಾಲಿಯಾದ ಅಂಶವೆನಿಸಿತು. ಕೂಡಲೇ ನಾನು ಅದನ್ನು ಚಿತ್ರದಲ್ಲಿ ಅಳವಡಿಸಲು ಒಪ್ಪಿಕೊಂಡೆ.

ಸರೂವಿನಲ್ಲಿ ಹುಟ್ಟೂರಿನ ಅನ್ವೇಷಣೆಯು ಎಷ್ಟು ಉತ್ಕಟವಾಗಿತ್ತೆಂದರೆ, ಆತ ಪ್ರತೀ ರಾತ್ರಿಯೂ ತನ್ನ ದೇಹವನ್ನು ತೊರೆದು, ಭಾರತದಲ್ಲಿರುವ ತನ್ನ ತಾಯಿಯೆಡೆಗೆ ಹಾರಿಬಿಡಬೇಕೆಂಬ ಹಂಬಲ ವ್ಯಕ್ತಪಡಿಸುತ್ತಿದ್ದನು. ಹೀಗಾಗಿ, ನನ್ನ ಪಾಲಿಗೆ ಗೂಗ್ಲ್ ಆರ್ಥ್ ಕೂಡಾ ಒಂದು ರೀತಿಯಲ್ಲಿ ಆತನ ತಾಯಿಯೆಡೆಗೆ ಆಧ್ಯಾತ್ಮಿಕ ಪ್ರವಾಸವಾಗಿತ್ತು.

‘ಲಯನ್’ನಲ್ಲಿ ದೇವ್‌ಪಟೇಲ್ ನಟಿಸಿರುವುದರಿಂದ, ಚಿತ್ರವು ‘ಸ್ಲಮ್‌ಡಾಗ್ ಮಿಲಿಯನೇರ್’ ಜೊತೆ ಸಾಮ್ಯತೆಯನ್ನು ಹೊಂದಿದೆಯೇ. ಅದು ನಿಮ್ಮ ಮೇಲೆ ಪ್ರಭಾವ ಬೀರಿದೆಯೇ?

ಉ: ‘ಸ್ಲಮ್‌ಡಾಗ್ ಮಿಲಿಯನೇರ್’ನ ಯಾವುದೇ ಅಂಶಗಳನ್ನು ನಾನಿಲ್ಲಿ ಎತ್ತಿಕೊಂಡಿಲ್ಲ. ನಾವಿಬ್ಬರೂ ಸಂಪೂರ್ಣವಾಗಿ ವಿಭಿನ್ನವಾದ ನಿರ್ದೇಶಕರಾಗಿದ್ದೇವೆ. ಹೀಗಾಗಿ ನಾನು ಆ ಬಗ್ಗೆ ಚಿಂತಿಸಿಲ್ಲ. ನನ್ನ ಜೊತೆಗಿರುವ ವ್ಯಕ್ತಿಗಳಿಂದ ಅತ್ಯುತ್ತಮವಾದ ಚಿತ್ರವೊಂದನ್ನು ನಿರ್ಮಿಸುವುದಕ್ಕಷ್ಟೇ ನಾನು ಹೆಚ್ಚಿನ ಗಮನಹರಿಸಿದೆ. ಹೀಗಾಗಿ ನಾನು ಸ್ಲಮ್‌ಡಾಗ್ ಚಿತ್ರದ ಕಡೆಗೆ ನೋಡಿಲ್ಲ.

‘ಸ್ಲಮ್‌ಡಾಗ್ ಮಿಲಿಯನೇರ್’ನಲ್ಲಿ ಬಹುತೇಕ ಪಾತ್ರಗಳು ಇಂಗ್ಲಿಷ್‌ನಲ್ಲಿ ಮಾತನಾಡುತ್ತವೆ. ಆದರೆ ‘ಲಯನ್’ನಲ್ಲಿ ಹಿಂದಿ ಹಾಗೂ ಬಂಗಾಳಿ ಭಾಷೆಗಳನ್ನು ಬಳಸಿಕೊಳ್ಳಲಾಗಿದೆ. ಇದು ಆತ್ಮಸಾಕ್ಷಿಯ ಆಯ್ಕೆಯೇ? ಅಥವಾ ಕಾಲ ಬದಲಾಗಿದೆಯೇ?.

ಉ: ದತ್ತು ಪಡೆಯಲ್ಪಟ್ಟ ಬಳಿಕ ಸರೂ ಇಂಗ್ಲಿಷ್ ಕಲಿಯುತ್ತಾನೆ. ಆತ ಮತ್ತೊಮ್ಮೆ ಹಿಂದಿಯನ್ನು ಕೇಳಿದಾಗ, ಆಗ ಅವನಿಗೆ ಏನೋ ಒಂದು ರೀತಿಯಲ್ಲಿ ಭೂತಕಾಲಕ್ಕೆ ಹೋದ ಅನುಭವವಾಗುತ್ತದೆ. ಹೀಗಾಗಿ ಭಾಷೆಯು, ಕಥಾನಿರೂಪಣೆಯ ಮುಖ್ಯಭಾಗವಾಗಿ ಬಿಡುತ್ತದೆ. ಬಹಳಷ್ಟು ಸಂಖ್ಯೆಯ ಜನರನ್ನು ತಲುಪಲು ಚಿತ್ರದಲ್ಲಿ ಸಬ್‌ಟೈಟಲ್‌ಗಳನ್ನು ಪ್ರದರ್ಶಿಸುವುದು ಅಸಾಮಾನ್ಯವೇನೂ ಅಲ್ಲ. ಆದರೆ ನಾವಿಲ್ಲಿ ಸತ್ಯನಿಷ್ಠರಾಗಿರಬೇಕಾಗುತ್ತದೆ.

ನಿಮಗೆ ಪರಿಚಿತವಲ್ಲದ ಭಾಷೆಯಲ್ಲಿ ಕಲಾವಿದರನ್ನು ನೀವು ಹೇಗೆ ನಿರ್ದೇಶಿಸಿದ್ದೀರಿ?

ಉ:  ಹೌದು. ಬಹುಮಟ್ಟಿಗೆ ಇದೊಂದು ಮೂಕ ಸಿನೆಮಾ. ಈ ಚಿತ್ರಕ್ಕಾಗಿ ನಾನು ಆಯ್ಕೆ ಮಾಡಿದ ಅನುವಾದಕರಲ್ಲಿ ಹಲವಾರು ಮಂದಿಗೆ ಹಿಂದೆಯೂ ಸಿನೆಮಾಜಗತ್ತಿನ ಅನುಭವವಿತ್ತು. ಬಾಲಕನಿಗೆ ಅನುವಾದಕನಾಗಿದ್ದ ದೇವಿ ಗುಪ್ತಾ ಎಂಬವರು ಚಿತ್ರ ನಟರಾಗಿದ್ದವರು. ಹೀಗಾಗಿ ಆ ಬಾಲಕನಿಗೆ ಮನದಟ್ಟಾಗುವಂತಹ ಭಾಷೆಯಲ್ಲಿ ಆತ ಅನುವಾದಿಸಬಲ್ಲನೆಂಬುದು ನಾನು ಅರಿತುಕೊಳ್ಳಬಲ್ಲೆ. ಸಂಭಾಷಣೆಯನ್ನು ಕೇಳುವ ಮೂಲಕ ಭಾಷೆ ಯಾವುದೇ ಇರಲಿ, ಕಲಾವಿದರು ತಮ್ಮ ಪಾತ್ರಕ್ಕೆ ಪ್ರಾಮಾಣಿಕತೆಯನ್ನು ತೋರಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಾನು ಹೇಳಬಲ್ಲೆ.

ಆದರೆ ಚಿತ್ರದಲ್ಲಿ ತೋರಿಸಲಾದ ಲೋಕೇಶನ್‌ಗಳು ಕಥೆಯಲ್ಲಿ ಉಲ್ಲೇಖಿಸಲ್ಪಟ್ಟ ನೈಜ ಸ್ಥಳಗಳಾಗಿವೆಯೇ?

ಉ:  ಹೌದು. ಬಹಳಷ್ಟು ಮಟ್ಟಿಗೆ. ಅವೆಲ್ಲವೂ ನೈಜವಾದ ಲೋಕೇಶನ್‌ಗಳಾಗಿವೆ. ಸರೂನ ತಾಯಿ ಈಗ ವಾಸವಾಗಿರುವ ಸ್ಥಳದಲ್ಲಿ ಚಿತ್ರೀಕರಣ ಮಾಡುವುದು ನನಗೆ ಬೇಕಾಗಿರಲಿಲ್ಲ. ಯಾಕೆಂದರೆ ಅದು ಆಕೆಯ ಬಗ್ಗೆ ವಿಪರೀತ ಗಮನವನ್ನು ಸೆಳೆದಿದೆ. ಆದರೆ ನಾವು ಖಾಂಡ್ವಾ, ಹೌರಾ ನಿಲ್ದಾಣದಲ್ಲಿರುವ ಗಣೇಶಾಷ್ಟಲಯದಲ್ಲಿ ಚಿತ್ರೀಕರಿಸಿದ್ದೇವೆ. ಚಿತ್ರದ ಬಹುತೇಕ ಲೋಕೇಶನ್‌ಗಳು ನೈಜ ಕಥೆಯಲ್ಲಿರುವಂತಹದ್ದೇ ಆಗಿದೆ.

ಹೊರಗಿನವರಾಗಿ ಭಾರತದಲ್ಲಿ ಚಿತ್ರೀಕರಣ ನಡೆಸಿರುವುದು ಸವಾಲುದಾಯಕವಾಗಿತ್ತೆ?

ಉ: ನೀವು ನೋಡೇ ಇರದಂತಹ ಸ್ಥಳದಲ್ಲಿ ಚಿತ್ರೀಕರಣ ನಡೆಸುವುದೊಂದು ಅದ್ಭುತವಾದ ಅನುಭವ. ಯಾಕೆಂದರೆ ಅದು ನೂತನವಾದುದಾಗಿದೆ ಹಾಗೂ ನೀವು ಅದಕ್ಕೆ ಅತ್ಯಂತ ವಸ್ತುನಿಷ್ಠವಾಗಿ ಸ್ಪಂದಿಸಬಹುದಾಗಿದೆ. ಆದರೆ ಆಸ್ಟ್ರೇಲಿಯಾ ನನಗೆ ಅತಿ ದೊಡ್ಡ ಸವಾಲಾಗಿತ್ತು. ಯಾಕೆಂದರೆ .ಯಾರೂ ಕೂಡಾ ಅವರವರ ಊರಿನ ವಿಷಯದಲ್ಲಿ ನೀವು ತೀರಾ ಕುರುಡರಾಗಿ ವರ್ತಿಸುತ್ತಾರೆ. ಅದನ್ನು ನೀವು ಹೊಸ ಕಂಗಳಲ್ಲಿ ನೋಡುವುದಿಲ್ಲ. ಹೀಗಾಗಿ ನನ್ನ ಊರಲ್ಲಿ ಚಿತ್ರೀಕರಣ ಮಾಡುವುದು ಅತ್ಯಂತ ಸವಾಲುದಾಯಕವಾಗಿದೆ. ಹೀಗಾಗಿ ನಾವು ಮೊದಲಿಗೆ ಭಾರತದಲ್ಲಿ ಚಿತ್ರೀಕರಿಸಿದೆವು. ಹೀಗಾಗಿ ನಮಗೆ ಆಸ್ಟ್ರೇಲಿಯವನ್ನು ಹೇಗೆ ಸೆರೆಹಿಡಿಯಬೇಕೆಂಬ ಸ್ಫೂರ್ತಿ ಹಾಗೂ ಮಾಹಿತಿಯನ್ನು ಪಡೆಯಲು ಸಹಾಯವಾಯಿತು.

ಕಿರಿಯರ ಪಾತ್ರಗಳನ್ನು ಹೇಗೆ ಆಯ್ಕೆ ಮಾಡಿದಿರಿ?

ಉ: ಹುಲ್ಲಿನ ಬಣವೆಯಲ್ಲಿ ಸೂಜಿಯನ್ನು ಹುಡುಕುವ ಕೆಲಸ ಅದಾಗಿತ್ತು. ನಾವು ಭಾರತದ ಮೂರು ನಗರಗಳಲ್ಲಿ ಬಾಲನಟನ ಪಾತ್ರಗಳಿಗಾಗಿ ಹುಡುಕಾಡಿದೆವು. ಸಾವಿರಾರು ಮಕ್ಕಳನ್ನು ಪರಿಶೀಲಿಸಿದೆವು. ಸನ್ನಿ ಪವಾರ್ ಸಿಗುವವರೆಗೂ ನಮ್ಮ ಹುಡುಕಾಟ ಮುಂದುವರಿದಿತ್ತು. 100-200 ಮಕ್ಕಳ ಅಂತಿಮ ಪಟ್ಟಿಯನ್ನು ಸಿದ್ದಪಡಿಸಿದೆವು ಹಾಗೂ ಬೃಹತ್ ನಟನಾತರಬೇತಿ ಕಾರ್ಯಾಗಾರವನ್ನು ಆಯೋಜಿಸಿದೆವು. ನಾವು ಚಿತ್ರಕ್ಕೆ ಮಕ್ಕಳನ್ನು ಕಂಡುಹಿಡಿದದ್ದು ಹೀಗೆ.

ದೇವ್‌ಪಟೇಲ್ ಅವರ ಆಡಿಶನಿಂಗ್ ನಡೆಸುವಾಗ ಅವರನ್ನು ನೀವು ನರಕಕ್ಕೆ ದೂಡಿದ್ದೀರಿ ಎಂದು ಹೇಳಿದ್ದೀರಿ....?

ಉ: ನಾನು ಹಾಗೆ ಮಾಡಿದೆ. ಅವರು ಸಾಮಾಜಿಕ ವಾಸ್ತವಿಕತೆಯ ಅಭಿನಯವನ್ನು ತರಲು ಸಾಧ್ಯವೇ ಎಂಬುದನ್ನು ನೋಡುವ ಅಗತ್ಯವಿತ್ತು. ಆತನನ್ನು ‘ಕರಾಳ’ ಸ್ಥಳಗಳ ಜೊತೆಗೆ ಸಾಧಾರಣವಾದ ಸ್ಥಳಗಳನ್ನು ಆತನಿಗೆ ಪರಿಚಯಿಸುವುದು ನನಗೆ ಬೇಕಾಗಿತ್ತು. ಹೀಗಾಗಿ ನಾನು ಇತರ ತಾರೆಯರ ಎದುರು ಆತನೊಂದಿಗೆ ವ್ಯಾಪಕವಾದ ಕಾರ್ಯಾಗಾರಗಳನ್ನು ನಡೆಸಿದೆ. ನಟನಾಗಿ ಆತ ಹೇಗೆ ನಿರ್ವಹಣೆ ತೋರಿದ್ದಾನೆ ಹಾಗೂ ಆತನಲ್ಲಿರುವ ಅಭಿನಯ ಸಾಮರ್ಥ್ಯವನ್ನು ಒರೆಗೆ ಹಚ್ಚುವ ಪ್ರಯತ್ನ ಇದಾಗಿತ್ತು.

ಚಿತ್ರದ ಶೂಟಿಂಗ್‌ಗೆ ಮೊದಲು ಆತ ಸಾಕಷ್ಟು ರಿಹರ್ಸಲ್‌ಗಳನ್ನು ಮಾಡಬೇಕಾಗಿತ್ತು. ಆತನನ್ನು ದೂರದ ರೈಲು ಪ್ರಯಾಣ ಮಾಡಿಸುವುದರ ಜೊತೆಗೆ ಅನಾಥಾಶ್ರಮಗಳಲ್ಲಿ ದುಡಿಮೆ ಹಾಗೂ ಪಶುಸಂಗೋಪನೆ ಸೇರಿದಂತೆ ವಿವಿಧ ಕೆಲಸಗಳನ್ನು ಮಾಡಿಸಿದೆ. ಆತನಲ್ಲಿ ಕಥೆಯ ಬಗ್ಗೆ ಆಳವಾದ ಭಾವನಾತ್ಮಕ ಅರಿವನ್ನು ಮೂಡಿಸುವುದೇ ಇದರ ಉದ್ದೇಶವಾಗಿತ್ತು. ಅತನ ದೇಹತೂಕವು ಹೆಚ್ಚುವಂತೆ ಮಾಡಲಾಗಿತ್ತು ಹಾಗೂ ಭಾಷಾ ಉಚ್ಚರಣೆ ಬಗ್ಗೆಯೂ ತರಬೇತಿ ನೀಡಲಾಗಿತ್ತು.

Writer - ಆಕಾಶ್ ಕರ್ಕರೆ

contributor

Editor - ಆಕಾಶ್ ಕರ್ಕರೆ

contributor

Similar News