ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಶಿಕಲಾ ಉಚ್ಛಾಟನೆ
ಚೆನ್ನೈ, ಫೆ.11: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರನ್ನು ಅಧ್ಯಕ್ಷ ಡಿ. ಮಧುಸೂದನನ್ ಉಚ್ಛಾಟನೆ ಮಾಡುವ ಮೂಲಕ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಿಯಮಬದ್ಧವಾಗಿ ಚುನಾವಣೆ ನಡೆಸುವ ನಿರ್ಧಾರ ಕೈಗೊಂಡಿದ್ದಾರೆ.
ತಮಿಳುನಾಡಿನಲ್ಲಿ ರಾಜಕೀಯ ಹೈಡ್ರಾಮದಲ್ಲಿ ಉಸ್ತುವಾರಿ ಮುಖ್ಯ ಮಂತ್ರಿ ಓ.ಪನ್ನೀರ‍್ ಸೆಲ್ವಂ ಬೆಂಬಲಕ್ಕೆ ನಿಂತಿರುವ ಮಧುಸೂಧನ್ ಅವರು ಎಐಎಡಿಎಂಕೆಯ ಯಾವುದೇ ಶಾಸಕರು ಮತ್ತು ನಾಯಕರು ಸಂಪರ್ಕದಲ್ಲಿರದಂತೆ ನಿರ್ದೇಶನ ನೀಡಿದ್ದಾರೆ.
ಇತ್ತೀಚೆಗೆ ಶಶಿಕಲಾ ನಟರಾಜನ್ ಅವರು ಜಯಲಲಿತಾ ನಿಧನದಿಂದ ತೆರವಾಗಿದ್ದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕಗೊಂಡಿದ್ದರು. ಇದೀಗ ಪನ್ನೀರ್ ಸೆಲ್ವಂ ಅವರಿಂದ ಬಲವಂತವಾಗಿ ಮುಖ್ಯ ಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಿಸಿರುವ ಆರೋಪ ಹೊತ್ತಿರುವ ಶಶಿಕಲಾ ಅವರು ತಮಿಳುನಾಡಿನ ಮುಖ್ಯ ಮಂತ್ರಿ ಹುದ್ದೆಯನ್ನು ಪಡೆಯುವ ಯತ್ನದಲ್ಲಿರುವಾಗಲೇ ಅವರಿಗೆ ಅಧ್ಯಕ್ಷ ಡಿ ಮಧುಸೂದನ್ ಆಘಾತ ನೀಡಿದ್ದಾರೆ.
ಡಿ.ಮಧುಸೂದನ್ ಅವರನ್ನು ಅಧ್ಯಕ್ಷ ಹುದ್ದೆಯಿಂದ ಕಿತ್ತು ಹಾಕಲು ಶಶಿಕಲಾ ಆದೇಶಿಸಿದ ಬೆನ್ನಲ್ಲೆ ಮಧುಸೂಧನ್ ಅವರು ಶಶಿಕಲಾಗೆ ತಿರುಗೇಟು ನೀಡಿದ್ಧಾರೆ.
ತಮಿಳುನಾಡಿನಲ್ಲಿ ರಾಜಕೀಯ ವಾತಾವರಣ ದಿನದಿಂದ ದಿನಕ್ಕೆ ಬದಲಾಗುತ್ತಿದ್ದು, ಶಶಿಕಲಾ ವಿರುದ್ಧ ಹೋರಾಟಕ್ಕಿಳಿದರುವ ಉಸ್ತುವಾರಿ ಮುಖ್ಯ ಮಂತ್ರಿ ಸೆಲ್ವಂ ಅವರಿಗೆ ಡಿಎಂಕೆಯ ನಾಯಕ ಮತ್ತು ವಿಧಾನಸಭೆಯ ವಿಪಕ್ಷ ನಾಯಕ ಎಂಕೆ ಸ್ಟಾಲಿನ್ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ. ಎಂಕೆ ಸ್ಟಾಲಿನ್ ಅವರು ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರನ್ನು ಇಂದು ರಾತ್ರಿ ಭೇಟಿಯಾಗಿ ಮುಖ್ಯ ಮಂತ್ರಿ ಸೆಲ್ವಂ ಅವರಿಗೆ ಬೆಂಬಲ ಸೂಚಿಸಿದರು.