ವಿವಾದಿತ ವೀಡಿಯೊ ಪ್ರಸಾರ ಪ್ರಕರಣ : ತೇಜ್‌ಬಹಾದ್ದೂರ್ ಭೇಟಿಗೆ ಪತ್ನಿಗೆ ಅವಕಾಶ ನೀಡಿದ ದಿಲ್ಲಿ ಹೈಕೋರ್ಟ್

Update: 2017-02-10 15:12 GMT

ಹೊಸದಿಲ್ಲಿ, ಫೆ.10: ಗಡಿ ಕಾಯುವ ಯೋಧರಿಗೆ ಕಳಪೆ ಆಹಾರ ನೀಡಲಾಗುತ್ತಿದೆಯೆಂದು ಆರೋಪಿಸುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿ ವಿವಾದಕ್ಕೆ ಸಿಲುಕಿದ್ದ ಬಿಎಸ್‌ಎಫ್ ಯೋಧ ತೇಜ್ ಬಹದ್ದೂರ್ ಯಾದವ್‌ರನ್ನು ಭೇಟಿಯಾಗಲು ದಿಲ್ಲಿ ಹೈಕೋರ್ಟ್ ಅವರ ಪತ್ನಿಗೆ ಅವಕಾಶ ನೀಡಿದೆ. ತೇಜ್ ಬಹದ್ದೂರ್ ಬಂಧನದಲ್ಲಿಲ್ಲವೆಂದು ಕೇಂದ್ರ ಸರಕಾರ ಸ್ಪಷ್ಟೀಕರಣ ನೀಡಿದ್ದರೂ, ಅವರನ್ನು ಭೇಟಿಯಾಗಲು ಪತ್ನಿ ಶರ್ಮಿಳಾ ಯಾದವ್‌ಗೆ ಈತನಕ ಅನುಮತಿ ನೀಡಿರಲಿಲ್ಲ.

  ವಿವಾದಿತ ವಿಡಿಯೋ ಪ್ರಸಾರಗೊಂಡ ಬಳಿಕ ತನ್ನ ಪತಿಯ ಸುಳಿವಿಲ್ಲ ಹಾಗೂ ಅವರನ್ನು ಅಕ್ರಮಬಂಧನದಲ್ಲಿಡಲಾಗಿದೆಯೆಂದು ಆರೋಪಿಸಿ ಶರ್ಮಿಳಾ ಅವರು ಗುರವಾರ ದಿಲ್ಲಿ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ತನ್ನ ಪತಿಯನ್ನು ಕೂಡಲೇ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕೆದು ಅವರು ಅರ್ಜಿಯಲ್ಲಿ ಕೋರಿದ್ದರು.

 ಶುಕ್ರವಾರ ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಎಸ್.ಶಿಸ್ತಾನಿ ನೇತೃತ್ವದ ನ್ಯಾಯಪೀಠವು, ತನ್ನ ಪತಿಯ ಬಗ್ಗೆ ಶರ್ಮಿಳಾ ಅವರಿಗೆ ಆತಂಕಗಳಿದ್ದಲ್ಲಿ ಅವರನ್ನು ಭೇಟಿಯಾಗಲು ಆಕೆಗೆ ಯಾಕೆ ಅವಕಾಶ ನೀಡಕೂಡದು ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿತು.

    ಆದರೆ ಯಾದವ್‌ನನ್ನು ಯಾವುದೇ ಅಜ್ಞಾತ ಸ್ಥಳದಲ್ಲಿ ಬಂಧನದಲ್ಲಿರಿಸಿಲ್ಲವೆಂದು ಕೇಂದ್ರ ಸರಕಾರವು ದಿಲ್ಲಿ ಹೈಕೋರ್ಟ್‌ಗೆ ಸ್ಪಷ್ಟಪಡಿಸಿದೆ ಹಾಗೂ ಅವರನ್ನು ಬಿಎಸ್‌ಎಫ್‌ನ 80ನೆ ಬೆಟಾಲಿಯನ್‌ಗೆ ವರ್ಗಾಯಿಸಿರುವುದಾಗಿ ತಿಳಿಸಿದೆ.

   2017ರ ಫೆಬ್ರವರಿ 7ರ ತನಕ ತೇಜ್‌ಬಹಾದ್ದೂರ್ ಯಾದವ್ ತನ್ನ ಪತ್ನಿಯ ಜೊತೆ ದೂರವಾಣಿ ಸಂಪರ್ಕದಲ್ಲಿದ್ದರೆಂಬುದನ್ನು ತೋರಿಸುವ ಕರೆಪಟ್ಟಿಯನ್ನು ಹೆಚ್ಚುವರಿ ಸಾಲಿಸಿಟರ್ ಜನರಲ್ ಸಲ್ಲಿಸಿದರೂ, ನ್ಯಾಯಾಲಯ ಅದನ್ನು ಪುರಸ್ಕರಿಸಲಿಲ್ಲ. ಶರ್ಮಿಳಾ ಅವರ ವಕೀಲ ಮನೀಶ್ ತಿವಾರಿ ಅವರು ತೇಜ್‌ಬಹದ್ದೂರ್ ಗೃಹಬಂಧನದಲ್ಲಿಲ್ಲವೆಂಬುದನ್ನು ಕೇಂದ್ರ ಸರಕಾರವು ಮುಚ್ಚಳಿಕೆ ಬರೆದುಕೊಡಬೇಕೆಂದು ಆಗ್ರಹಿಸಿದರು. ಸ್ವಯಂ ನಿವೃತ್ತಿ ಕೋರಿ ತೇಜ್‌ಬಹಾದ್ದೂರ್ ಸಲ್ಲಿಸಿದ ಅರ್ಜಿಯನ್ನು ಕೂಡಾ ರದ್ದುಪಡಿಸಲಾಗಿದೆಯೆಂದು ಆರೋಪಿಸಿದರು.

ನ್ಯಾಯಾಲಯದ ಆದೇಶದ ಬಳಿಕ ತನ್ನ ಪತಿಯನ್ನು ಭೇಟಿಯಾಗಲು ಶರ್ಮಿಳಾ ಯಾದವ್ ಪೂಂಚ್‌ಗೆ ಪ್ರಯಾಣಿಸಲಿದ್ದು, ಅಲ್ಲಿ ಅವರ ಎರಡು ದಿನಗಳ ವಾಸ್ತವ್ಯಕ್ಕಾಗಿ ಎಲ್ಲಾ ರೀತಿಯ ಏರ್ಪಾಡುಗಳನ್ನು ಮಾಡಲಾಗಿದೆ.

  ಜಮ್ಮುಕಾಶ್ಮೀರ ಗಡಿಯಲ್ಲಿ ಬಿಎಸ್‌ಎಫ್ ಯೋಧನಾಗಿದ್ದ ತೇಜ್‌ಬಹದ್ದೂರ್ ಯಾದವ್ ಅವರು ಗಡಿಯಲ್ಲಿ ಅತ್ಯಂತ ಕಠಿಣವಾದ ಸನ್ನಿವೇಶಗಳಲ್ಲಿ ನಿಯೋಜಿತರಾಗಿರುವ ಯೋಧರಿಗೆ ಕಪೆ ಆಹಾರವನ್ನು ಪೂರೈಕೆ ಮಾಡಲಾಗುತ್ತಿದೆಯೆಂಬುದಾಗಿ ಆರೋಪಿಸುವ ಮೂರು ವಿಡಿಯೋಗಳನ್ನು ಪ್ರಸಾರ ಮಾಡಿದ್ದರು. ತಾನು ಹಲವು ಸಲ ಖಾಲಿಹೊಟ್ಟಯಲ್ಲಿಯೇ ಮಲಗಬೇಕಾದ ಪರಿಸ್ಥಿತಿಯಿತ್ತೆಂದು ತೇಜ್‌ಬಹಾದ್ದೂರ್ ವಿಡಿಯೋದಲ್ಲಿ ದೂರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News