ಚಿಕ್ಕಮಗಳೂರು ಜಿಲ್ಲೆಯಾದ್ಯಂತ ನೀರಿಗಾಗಿ ಹಾಹಾಕಾರ : ಕಣ್ಣೀರಲ್ಲಿ ರೈತ ಸಮುದಾಯ

Update: 2017-02-11 05:58 GMT

ಚಿಕ್ಕಮಗಳೂರು, ಫೆ.10: ಮಲೆನಾಡು ಜಿಲ್ಲೆಯಾದ ಚಿಕ್ಕಮಗಳೂರಿಗೆ ಬರಗಾಲದ ತೀವ್ರ ಛಾಯೆ ಆವರಿಸುತ್ತಿದೆ. ಬರಗಾಲ ಪೀಡಿತ ತಾಲೂಕುಗಳಲ್ಲಿ ವ್ಯಾಪಕವಾಗಿ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಅಲ್ಲದೆ ನೀರಿಲ್ಲದೆ ತೆಂಗು ಮತ್ತು ಅಡಿಕೆ ತೋಟಗಳು ಒಣಗಿ ನೆಲಕಚ್ಚುತ್ತಿರುವುದು ರೈತ ಸಮುದಾಯವನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ.

ಹೇಳಿಕೇಳಿ ಚಿಕ್ಕಮಗಳೂರು ತುಂಗಾ, ಭದ್ರಾ, ಹೇಮಾವತಿ, ನೇತ್ರಾವತಿ, ಯಗಚಿ ಸಹಿತ ಪಂಚ ನದಿಗಳು ಹುಟ್ಟಿ ಹರಿಯುವ ಜಿಲ್ಲೆಯಾಗಿದೆ. ಆದರೆ, ಹಲವು ದಶಕಗಳಿಂದಲೂ ಈ ಜಿಲ್ಲೆಯ ನೂರಾರು ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಾಣದಂತಾಗಿದೆ. ಪಂಚನದಿಗಳ ತವರೂರಾದ ಈ ಜಿಲ್ಲೆಯಲ್ಲಿ ಬೇಸಿಗೆ ಬರುವ ಹೊತ್ತಿಗೆ ಜನರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ.

ಇತಿಹಾಸದಲ್ಲಿ ಪ್ರಥಮ ಬಾರಿಗೆ ಚಿಕ್ಕಮಗಳೂರು, ಕಡೂರು, ಎನ್.ಆರ್.ಪುರ, ಮೂಡಿಗೆರೆ ತಾಲೂಕುಗಳನ್ನು ಬರ ಪೀಡಿತ ಪಟ್ಟಿಗೆ ಸೇರಿಸಲಾಗಿದೆ.ಜಿಲ್ಲಾಡಳಿತ ತರೀಕೆರೆ ಮತ್ತು ಕೊಪ್ಪತಾಲೂಕುಗಳನ್ನು ಬರದ ಪಟ್ಟಿಗೆಸೇರಿಸಲು ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸಿಕೊಟ್ಟಿದೆ.

ಮಲೆನಾಡು, ಅರೆಮಲೆನಾಡು ಮತ್ತು ಬಯಲುಸೀಮೆ ಭಾಗಗಳನ್ನು ಒಳಗೊಂಡಿರುವ ಈ ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ವಾರ್ಷಿಕ ದಾಖಲೆ ಮಳೆ ಸುರಿಯುತ್ತಿತ್ತು. ಆದರೆ,ಇಂದು ಈ ಪ್ರದೇಶದಲ್ಲಿ ನೀರಿನ ಹಾಹಾಕಾರ ತೀವ್ರಗೊಂಡಿದೆ. ಚಿಕ್ಕಮಗಳೂರಿನ ಅನತಿ ದೂರದ ಲಕ್ಯಾ, ಬೆಳವಾಡಿ, ಕಳಸಾಪುರ ಸಹಿತ 125ಕ್ಕೂ ಅಧಿಕ ಹಳ್ಳಿಗಳಲ್ಲಿ ನೀರಿಗಾಗಿ ಪರದಾಡುತ್ತಾ ಖಾಲಿ ಕೊಡ ಹಿಡಿದು ಸರದಿ ಸಾಲಲ್ಲಿ ಕಾಯುವ ಜನರು ಕಂಡು ಬರುತ್ತಿದ್ದಾರೆ. ಇಂತಹ ಅನೇಕ ಹಳ್ಳಿಗಳಿಗೆ ನಲ್ಲಿ ನೀರು ಬರಲು 4/5 ದಿನಗಳು ಬೇಕಾಗುತ್ತವೆ.

ನೀರಿಗಾಗಿ ಜನ ಬೀದಿಗಿಳಿದಾಗ ಎಚ್ಚೆತ್ತುಕೊಳ್ಳುವ ಅಧಿಕಾರಿಗಳು ಟ್ಯಾಂಕರ್‌ಗಳಲ್ಲಿ ನೀರು ಕೊಡುವುದಾಗಿ ಹೇಳಿ ಒಂದೆರಡು ದಿನ ನೀಡಿ ಸುಮ್ಮನಾಗುತ್ತಿದ್ದಾರೆ. ಹಳ್ಳಿಗರು ದಿನನಿತ್ಯದ ನೀರಿಗೆ ತೀವ್ರ ಕಷ್ಟ ಪಡುವ ಸ್ಥಿತಿ ನಿರ್ಮಾಣವಾಗಿದೆ.

ಸರಕಾರ ಬೆಂಕಿ ಬಿದ್ದಾಗ ನೀರಿಗಾಗಿ ಬಾವಿ ತೋಡುವ ಬದಲು ಜಿಲ್ಲೆಯಲ್ಲಿ ನಾಲ್ಕೈದು ನೀರಾವರಿ ಯೋಜನೆಗಳಲ್ಲಿ ಯಾವುದಾದರೂ ಒಂದು ಯೋಜನೆಯಿಂದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬಹುದು. ಮಲೆನಾಡು ಜಿಲ್ಲೆಯಲ್ಲಿ ಕೇವಲ 3/4 ಟಿಎಂಸಿ ನೀರನ್ನು ಬಳಸಿಕೊಳ್ಳಲು ಯೋಜನೆ ರೂಪಿಸಿದರೆ ಬರಪೀಡಿತ ತಾಲೂಕುಗಳಿಗೆ ಸಮೃದ್ಧ ನೀರಾವರಿ ಸೌಲಭ್ಯವಾಗಲಿದ್ದು, ಸರಕಾರ ಮತ್ತು ಜನ ನಾಯಕರು ಯೋಚಿಸಬೇಕಾಗಿದೆ.

ನಮ್ಮಲ್ಲಿ ನಲ್ಲಿ ನೀರು ಕಾಣಲು 8 ರಿಂದ 10 ದಿನಗಳು ಕಾಯಬೇಕಾಗುತ್ತಿದೆ. ಕೂಲಿಗೆ ಹೋಗುವವರು ಟ್ಯಾಂಕ್ ಬಳಿ ಕೊಡವನ್ನಿಟ್ಟು ನೀರು ಬರುವ ಸಮಯವನ್ನು ನೋಡಿಕೊಂಡು ಹಿಂದಿರುಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ತಿನ್ನಲು ಮೇವು ಕೂಡ ಇಲ್ಲವಾಗುತ್ತಿದೆ. ಜಿಲ್ಲೆಯಲ್ಲಿ ಹುಟ್ಟಿ ಹರಿಯುವ ನದಿಗಳ ನೀರನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಲು ಸರಕಾರ ಯೋಜನೆಗಳನ್ನು ರೂಪಿಸಿದ್ದರೆ ಜಿಲ್ಲೆಗೆ ಈ ಸ್ಥಿತಿ ಬರುತ್ತಿರಲಿಲ್ಲ.

ಮಹೇಶ್, ಕಳಸಾಪುರ

ಕಡೂರು, ಬೀರೂರು, ತರೀಕೆರೆಯ ಅಜ್ಜಂಪುರ ಸುತ್ತಮುತ್ತ ಹಾಗೂ ಚಿಕ್ಕಮಗಳೂರಿನ ಲಕ್ಯಾ, ಅಂಬಳೆ ಹೋಬಳಿ ಸೇರಿದಂತೆ ಹತ್ತಾರು ಹಳ್ಳಿಗಳಿಗೆ ಟ್ಯಾಂಕರ್ ಗಳಲ್ಲಿ ಕುಡಿಯುವ ನೀರು ಪೂರೈಸಲಾಗುತ್ತಿದೆ. ಪಂಚಾಯತ್‌ಗಳು ಇತಿಮಿತಿಯಲ್ಲಿ ನೀರು ನೀಡುತ್ತಿದ್ದರೂ ನಮಗೆ ಸಾಕಾಗುತ್ತಿಲ್ಲ. ನಮ್ಮ ಕೆಲವು ಹಳ್ಳಿಗಳಲ್ಲಿ 1,200 ಅಡಿಗೂ ಮೀರಿ 150 ರಿಂದ 200 ಬೋರ್ ಕೊರೆಸಿದರೂ ಒಂದು ಬೋರಲ್ಲೂ ಒಂದು ಹನಿ ನೀರೂ ಬರುತ್ತಿಲ್ಲ. ಆಧುನಿಕತೆ ಇಷ್ಟೊಂದು ಮುಂದುವರಿದಿದ್ದರೂ ಇಂದಿಗೂ ರೈತರು ಕೈಪಂಪ್ ಬೋರ್‌ವೆಲ್‌ಗಳನ್ನು ಆಶ್ರಯಿಸಿಕೊಂಡಿದ್ದಾರೆ.

 ಗುರುಶಾಂತಪ್ಪ, ರೈತ ಮುಖಂಡರು

Writer - ಅಝೀಝ್ ಕಿರುಗುಂದ

contributor

Editor - ಅಝೀಝ್ ಕಿರುಗುಂದ

contributor

Similar News