ನೋಟು ರದ್ದತಿ, ನಗದು ರಹಿತ ವ್ಯವಸ್ಥೆಗಳ ಎರಡು ಅಲಗಿನ ಕತ್ತಿಯೊಳಗೆ ಗ್ರಾಹಕರು !

Update: 2017-02-11 06:52 GMT

ಹೊಸದಿಲ್ಲಿ, ಫೆ.11: ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲಿ ಮಾಡಲಾದ ನೋಟು ಅಮಾನ್ಯೀಕರಣದ ನಂತರ ಸರಕಾರ ಡಿಜಿಟಲೀಕರಣ ಹಾಗೂ ಕ್ಯಾಶ್ ಲೆಸ್ ವ್ಯವಹಾರಗಳಿಗೆ ಹೆಚ್ಚು ಒತ್ತು ನೀಡುತ್ತಿದೆ. ಆದರೆ ಅಂತಿಮವಾಗಿ ಇದರಿಂದ ಗ್ರಾಹಕರಿಗೆ ಎರಡೂ ವಿಧದಲ್ಲಿ ನಷ್ಟವಾಗುತ್ತಿದೆ. ನಗದು ವ್ಯವಹಾರಗಳ ಮೇಲೆ ಬ್ಯಾಂಕುಗಳು ಹಾಗೂ ಹಣಕಾಸು ಸಂಸ್ಥೆಗಳು ಶುಲ್ಕ ವಿಧಿಸುತ್ತಿದ್ದರೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಗೆ ಹಣ ಪಾವತಿ ಮಾಡಲಿಚ್ಛಿಸುವವರಿಂದ ವಾಣಿಜ್ಯ ಸಂಸ್ಥೆಗಳು ಶೇ.2ರಿಂದ 3ರ ತನಕ ಡಿಸ್ಕೌಂಟ್ ಕೈಬಿಡುವುದಾಗಿ ಹೇಳುತ್ತಿವೆಯೆಂಬ ಬಗ್ಗೆ ಮಾಹಿತಿಗಳು ಲಭ್ಯವಾಗುತ್ತಿವೆ.

ಇತ್ತೀಚೆಗೆ ದಿಲ್ಲಿಯ ವ್ಯಕ್ತಿಯೊಬ್ಬರು ತಮ್ಮ ಪತ್ನಿಯ ಔಷಧಿಗಳನ್ನು ಖರೀದಿಸಿದಾಗ ಅಂಗಡಿಯಾತ ಸಾಮಾನ್ಯವಾಗಿ ಒದಗಿಸುವ ಶೇ.10 ಡಿಸ್ಕೌಂಟ್ ಬದಲು ಶೇ.7 ಡಿಸ್ಕೌಂಟ್ ಒದಗಿಸುವುದಾಗಿ ಹೇಳಿದ. ಇದಕ್ಕೆ ಕಾರಣ ಅವರು ಡೆಬಿಟ್ ಕಾರ್ಡ್ ಮುಖಾಂತರ ಹಣ ವರ್ಗಾವಣೆ ಮಾಡುವುದಾಗಿ ಹೇಳಿದ್ದರು. ಇಂತಹ ಅನೇಕ ಪ್ರಕರಣಗಳು ವರದಿಯಾಗುತ್ತಿವೆ.
ಅತ್ತ ಎಂ-ವಾಲೆಟ್ ಗಳೂ ಸಂಪೂರ್ಣ ಉಚಿತವಲ್ಲ. ಕೆಲ ಕಂಪೆನಿಗಳು ತಮ್ಮ ವಾಲೆಟ್ ಗೆ ಹಣ ತುಂಬಿಸಲೂ ಶೇ 1ರಿಂದ ಶೇ 1.5ರಷ್ಟು ಶುಲ್ಕ ಸಂಗ್ರಹಿಸುತ್ತವೆ. ಇ-ವಾಲೆಟ್ ಮುಖಾಂತರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಾಗಲೂ ಕೆಲ ಸಂಸ್ಥೆಗಳ ಶುಲ್ಕ ವಿಧಿಸುತ್ತವೆ.

ನಗದು ವ್ಯವಹಾರಗಳೂ ದುಬಾರಿಯಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಕೆಲ ಬ್ಯಾಂಕುಗಳು ನಗದು ವ್ಯವಹಾರಗಳನ್ನು ನಿರುತ್ತೇಜಿಸುವ ಸಲುವಾಗಿ ಹಲವಾರು ನಗದು ವ್ಯವಹಾರಗಳ ಮೇಲೆ ಶುಲ್ಕ ವಿಧಿಸುತ್ತಿವೆ.

ವರದಿಯೊಂದರ ಪ್ರಕಾರ ಮುಂಬೈಯಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಚ್ ಡಿಎಫ್ ಸಿ ಬ್ಯಾಂಕ್ ಥರ್ಡ್ ಪಾರ್ಟಿ ಟ್ರಾನ್ಸಾಕ್ಷನ್ ಗಳ ಮಿತಿಯನ್ನು ರೂ. 25,000ಕ್ಕೆ ನಿಗದಿಪಡಿಸಿದೆ. ಶಾಖೆಗಳಲ್ಲಿ ಉಚಿತ ನಗದು ಟ್ರಾನ್ಸಾಕ್ಷನ್ ಗಳನ್ನು ಹಿಂದೆ ಐದು ಇದ್ದಲ್ಲಿ ಈಗ ಅದನ್ನು ಬ್ಯಾಂಕು ನಾಲ್ಕಕ್ಕೆ ಇಳಿಸಿದೆ.

ಇತ್ತೀಚೆಗೆ ಮಂಡನೆಯಾದ ಬಜೆಟ್ ನಲ್ಲಿ ಕೂಡ ರೂ.3 ಲಕ್ಷಕ್ಕಿಂತ ಹೆಚ್ಚಿನ ನಗದು ವ್ಯವಹಾರಗಳನ್ನು ನಿಷೇಧಿಸಲಾಗಿದೆ.

ಒಟ್ಟಾರೆಯಾಗಿ ನೋಟು ಅಮಾನ್ಯೀಕರಣದ ಸಮಸ್ಯೆಗಳು ಕೊನೆಗೊಳ್ಳುವ ಮೊದಲೇ ನಗದು ಹಾಗೂ ನಗದುರಹಿತ ವ್ಯವಹಾರಗಳ ಮೇಲೆ ಶುಲ್ಕ ವಿಧಿಸುವುದು ಎಷ್ಟು ಸಮಂಜಸ ಎಂದು ಜನರು ಪ್ರಶ್ನಿಸಲಾರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News