ಸರ್ಜರಿಗಾಗಿ ಈಜಿಪ್ಟ್‌ನಿಂದ ಮುಂಬೈಗೆ ಬಂದ ಗಜಗಾತ್ರದ ಮಹಿಳೆ
ಮುಂಬೈ, ಫೆ.11: ಕಳೆದ 25 ವರ್ಷಗಳಿಂದ ಗೃಹಬಂಧನದಲ್ಲಿದ್ದ, ವಿಶ್ವದ ಅತ್ಯಂತ ಭಾರದ ಮಹಿಳೆಯಾಗಿರುವ 500 ಕೆಜಿ ತೂಕದ ಈಜಿಪ್ಟ್‌ನ 36ರ ಹರೆಯದ ಇಮಾನ್ ಅಹ್ಮದ್‌ರನ್ನು ತೂಕ ಕಡಿಮೆ ಮಾಡುವ ಚಿಕಿತ್ಸೆಗಾಗಿ ಕೊನೆಗೂ ಭಾರತಕ್ಕೆ ಕರೆತರಲಾಗಿದೆ.
ಈಜಿಪ್ಟ್ ಏರ್ ಪ್ಲೇನ್‌ನಲ್ಲಿ ಭಾರತಕ್ಕೆ ಆಗಮಿಸಿದ ಇಮಾನ್ ಬೆಳಗ್ಗೆ 4 ಗಂಟೆಗೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು.
ಕಳೆದ 25 ವರ್ಷಗಳಿಂದ ಮನೆ ಬಿಟ್ಟು ಕದಲದ ಇಮಾನ್‌ಗೆ ಶಸ್ತ್ರಚಿಕಿತ್ಸೆ ನಡೆಸುವ ಮೊದಲು ಒಂದು ತಿಂಗಳಕಾಲ ನಿಗಾ ವಹಿಸಲಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಮುಂಬೈನ ಬರಿಯಾಟ್ರಿಕ್ ಸರ್ಜನ್ ಮುಫಝಲ್ ಲಕ್ಡಾವಾಲಾ ನೇತೃತ್ವದ ವೈದ್ಯರ ತಂಡ ಇಮಾನ್ ಅಹ್ಮದ್ ಚಿಕಿತ್ಸೆಯ ಜವಾಬ್ದಾರಿ ವಹಿಸಿಕೊಂಡಿದೆ.
ನಮ್ಮ ತಂಡ ಕಳೆದ ಮೂರು ತಿಂಗಳಿಂದ ಇಮಾನ್‌ಗೆ ಚಿಕಿತ್ಸೆ ನೀಡುತ್ತಿದ್ದು, ಈಜಿಪ್ಟ್‌ನ ಅಲೆಕ್ಸಾಂಡ್ರಿಯ ಸಿಟಿಯಿಂದ ಮುಂಬೈಗೆ ಕರೆತರುವ ಮೊದಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದೇವೆ. ಕಳೆದ 25 ವರ್ಷಗಳಿಂದ ಮನೆ ಬಿಟ್ಟು ಕದಲದ ಕಾರಣ ಅತ್ಯಂತ ಅಪಾಯಕಾರಿ ರೋಗಿಯಾಗಿರುವ ಇಮಾನ್‌ರನ್ನು ಈಜಿಪ್ಟ್‌ನಿಂದ ಮುಂಬೈಗೆ ಕರೆ ತಂದಿರುವುದು ದೊಡ್ಡ ಸವಾಲಿನ ಕೆಲಸವಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.
ಇಮಾಮ್ ಅಹ್ಮದ್ ಅವರು ತಮ್ಮ ಸಹೋದರಿಯೊಂದಿಗೆ ಶನಿವಾರ ಬೆಳಗ್ಗೆ ಮುಂಬೈಗೆ ಆಗಮಿಸಿದ್ದಾರೆ. ಕಳೆದ 10 ದಿನಗಳಿಂದ ಮುಂಬೈ ವೈದ್ಯರ ತಂಡ ಈಜಿಪ್ಟ್‌ನಲ್ಲಿತ್ತು. ಈಜಿಪ್ಟ್ ವಿಮಾನದಲ್ಲಿ ಸುರಕ್ಷಿತವಾಗಿ ಪ್ರಯಾಣಿಸುವ ಉದ್ದೇಶದಿಂದ ಸ್ಥಳೀಯ ಈಜಿಪ್ಟ್ ಕುಶಲಕರ್ಮಿಗಳು ವಿಶೇಷ ಬೆಡ್‌ನ್ನು ನಿರ್ಮಿಸಿದ್ದರು. ಮುಂಜಾಗ್ರತಾ ಕ್ರಮವಾಗಿ ವಿಮಾನದಲ್ಲಿ ಎಲ್ಲ ತುರ್ತು ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಲಾಗಿತ್ತು.
ಇಮಾನ್ ವಿಮಾನ ನಿಲ್ದಾಣಕ್ಕೆ ಬಂದ ಬಳಿಕ ಸಕಲ ಸೌಲಭ್ಯಗಳಿರುವ ಟ್ರಕ್‌ನಲ್ಲಿ ಸೈಫಿ ಆಸ್ಪತ್ರೆಗೆ ಕರೆ ತರಲಾಗಿದ್ದು, ಆ್ಯಂಬುಲೆನ್ಸ್ ಹಾಗೂ ಪೊಲೀಸ್ ಬೆಂಗಾವಲು ಪಡೆ ಟ್ರಕ್‌ನ್ನು ಹಿಂಬಾಲಿಸಿ ಬಂದವು. ಸೈಫೀ ಆಸ್ಪತ್ರೆಯಲ್ಲಿ ಇಮಾನ್‌ಗೋಸ್ಕರ 2 ಕೋಟಿ ರೂ. ವೆಚ್ಚದಲ್ಲಿ ವಿಶೇಷ, ಪ್ರತ್ಯೇಕ ಕೊಠಡಿಯನ್ನು ನಿರ್ಮಿಸಲಾಗಿದೆ