ಮಧ್ಯಪ್ರದೇಶದ ಐಎಸ್‌ಐ ಏಜಂಟ್‌ಗಳಿಗೆ ಸಮಸ್ಯೆಯಾಗದ ನೋಟು ರದ್ದತಿ
ಭೋಪಾಲ,ಫೆ.11: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಮಧ್ಯಪ್ರದೇಶ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು ಬಂಧಿಸಿರುವ ಆರೋಪಿಗಳ ಐಎಸ್‌ಐ ನಿರ್ವಾಹಕರಿಗೂ ನೋಟು ರದ್ದತಿಯ ಪರಿಣಾಮದಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವುದು ಗೊತ್ತಿತ್ತು! ಆರೋಪಿಗಳ ಪೈಕಿ ಓರ್ವನಾಗಿರುವ ಬಲರಾಮ ಸಿಂಗ್ ನ.8ರ ನೋಟು ರದ್ದತಿಯ ಬಳಿಕ ನಗದು ಹಣದ ಕೊರತೆ ಕಾಡುತ್ತಿರುವ ಬಗ್ಗೆ ತನ್ನ ಪಾಕ್ ನಿರ್ವಾಹಕನ ಬಳಿ ಗೋಳು ತೋಡಿಕೊಂಡಿದ್ದಾಗ ಆತ,‘‘ ಸಣ್ಣ ಸಣ್ಣ ಅಂಗಡಿಗಳನ್ನು ತೆರೆಯುವಂತೆ ಮತ್ತು ಅಲ್ಲಿಂದ ಆದಾಯ ಬಂದಂತೆ ತೋರಿಸು ’’ಎಂದು ಸಲಹೆ ನೀಡಿದ್ದ.
ಕಳೆದ ಎರಡು ತಿಂಗಳುಗಳಲ್ಲಿ ಭದ್ರತಾ ಏಜನ್ಸಿಗಳು ಸಿಂಗ್ ಮತ್ತು ಆತನ ಪಾಕ್ ನಿರ್ವಾಹಕನ ನಡುವಿನ ದೂರವಾಣಿ ಸಂಭಾಷಣೆಗಳನ್ನು ಕದ್ದು ಆಲಿಸಿದ್ದವು ಮತ್ತು ಈ ಸಂದರ್ಭ ನೋಟು ರದ್ದತಿಯ ಸಂಕಷ್ಟದಿಂದ ಪಾರಾಗುವ ಮತ್ತು ಆದಾಯ ತೆರಿಗೆ ಇಲಾಖೆಗೆ ವಂಚಿಸುವ ಬಗ್ಗೆ ಸಿಂಗ್‌ಗೆ ಧಾರಾಳ ಸಲಹೆಗಳನ್ನು ನೀಡಿದ್ದು ಬೆಳಕಿಗೆ ಬಂದಿತ್ತು.
ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಸುಹಾಶ್ ಗ್ರಾಮದ ನಿವಾಸಿಯಾಗಿರುವ ಬಲರಾಮ ಸಿಂಗ್(26) ವಿದ್ಯಾಭ್ಯಾಸವನ್ನು ಅರ್ಧಕ್ಕೇ ತೊರೆದಿದ್ದು, ಸತ್ನಾದಲ್ಲಿ ಬಾಡಿಗೆ ಮನೆ ಯೊಂದರಲ್ಲಿ ವಾಸವಿದ್ದ. 18 ಎಕರೆ ಭೂಮಿಯ ಮಾಲಕನಾಗಿರುವ ತಂದೆಗೆ ಸಿಂಗ್ ಏನು ಮಾಡುತ್ತಿದ್ದಾನೆ ಮತ್ತು ಆತನ ಐಷಾರಾಮಿ ಜೀವನಕ್ಕೆ ಹಣದ ಮೂಲ ಯಾವುದು ಎನ್ನುವುದು ಗೊತ್ತಿರಲಿಲ್ಲ.
ಎರಡು ವರ್ಷಗಳ ಹಿಂದೆ ಗಡಿಯಾಚೆಯ ಲಾಟರಿ ವಂಚನೆಯ ಭಾಗವಾಗಿದ್ದ ಬಲರಾಮ ಸಿಂಗ್‌ನನ್ನು ಪಾಕಿಸ್ತಾನದ ಐಎಸ್‌ಐ ನಿರ್ವಾಹಕರು ಭಾರತದಲ್ಲಿರುವ ತಮ್ಮ ಏಜಂಟ್‌ಗಳಿಗೆ ಹಣವನ್ನು ತಲುಪಿಸುವ ಕಾರ್ಯಕ್ಕೆ ಬಳಸಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಕಳೆದ ವರ್ಷದ ನವಂಬರ್‌ನಲ್ಲಿ ಜಮ್ಮುವಿನಲ್ಲಿ ಇಬ್ಬರು ಶಂಕಿತ ಐಎಸ್‌ಐ ಏಜಂಟ್‌ಗಳಾದ ಸತ್ವಿಂದರ್ ಸಿಂಗ್ ಮತ್ತು ದಾದು ಅಲಿಯಾಸ್ ಲಕಿ ಅವರ ಬಂಧನ ಪ್ರಕರಣದ ತನಿಖೆ ಸಂದರ್ಭ ಬಲರಾಮ ಸಿಂಗ್ ಹೆಸರು ಮುನ್ನೆಲೆಗೆ ಬಂದಿತ್ತು. ಸತ್ವಿಂದರ್ ಸಿಂಗ್ ಮತ್ತು ಲಕಿ ಮಹತ್ವದ ಭದ್ರತಾ ಮಾಹಿತಿಗಳನ್ನು ವಾಟ್ಸಾಪ್ ಗುಂಪುಗಳ ಮೂಲಕ ಪಾಕಿಸ್ತಾನಕ್ಕೆ ರವಾನಿಸುತ್ತಿದ್ದರು ಎನ್ನುವುದು ತನಿಖೆಯಿಂದ ಬೆಳಕಿಗೆ ಬಂದಿತ್ತು.
ಬಂಧಿತರ ಬ್ಯಾಂಕ್ ವಹಿವಾಟುಗಳನ್ನು ಪರಿಶೀಲಿಸಿದಾಗ ಸತ್ವಿಂದರ್‌ನ ಬ್ಯಾಂಕ್ ಖಾತೆಗೆ ಸತ್ನಾದಲ್ಲಿ ಹಣ ಜಮೆಯಾಗುತ್ತಿರುವುದು ಬಹಿರಂಗಗೊಂಡಿತ್ತು. ಸತ್ನಾದ ಬ್ಯಾಂಕಿನಿಂದ ಡಿಪಾಸಿಟ್ ಸ್ಲಿಪ್ ಪಡೆದು ಪರಿಶೀಲಿಸಿದಾಗ ಅದರಲ್ಲಿದ್ದ ಬರಹ ಬಲರಾಮ ಸಿಂಗ್‌ನ ಕೈಬರಹಕ್ಕೆ ತಾಳೆಯಾಗಿತ್ತು. ಕೇಂದ್ರ ಗುಪ್ತಚರ ಇಲಾಖೆ ಮತ್ತು ಮಧ್ಯಪ್ರದೇಶ ಎಟಿಎಸ್ ಆಗಿನಿಂದಲೇ ಆತನ ಮೇಲೆ ನಿಗಾ ಇರಿಸಿದ್ದವು.
ಪಾಕಿಸ್ತಾನದ ತನ್ನ ನಿರ್ವಾಹಕನ ಸೂಚನೆಯಂತೆ ಬಲರಾಮ ಸಿಂಗ್ 3-4 ಕಂತುಗಳಲ್ಲಿ 20,000 ರೂ.ನಿಂದ 40,000 ರೂ.ವರೆಗಿನ ಹಣವನ್ನು ಸತ್ವಿಂದರ್‌ನ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದ ಎಟಿಎಸ್ ವಿಚಾರಣೆ ಸಂದರ್ಭ ಇದನ್ನು ಬಲರಾಮ ಒಪ್ಪಿಕೊಂಡಿದ್ದಾನೆ. ತಾನೆಂದೂ ಸತ್ವಿಂದರ್‌ನನ್ನು ಭೇಟಿಯಾಗಿಲ್ಲ. ತನಗೆ ಬ್ಯಾಂಕ್ ಖಾತೆಯ ಸಂಖ್ಯೆಯನ್ನು ನೀಡಲಾಗಿತ್ತು ಮತ್ತು ಅದರಲ್ಲಿ ಹಣವನ್ನು ಜಮಾ ಮಾಡುವಂತೆ ಸೂಚಿಸಲಾಗಿತ್ತು. ಹೀಗೆ ಜಮಾ ಮಾಡಲು ಹಣ ಪಾಕಿಸ್ತಾನದಿಂದ ಹವಾಲಾ ಜಾಲದ ಮೂಲಕ ತನಗೆ ತಲುಪುತ್ತಿತ್ತು ಎಂದು ಆತ ಬಾಯ್ಬಿಟ್ಟಿದ್ದಾನೆ.