ತಾಯಿಯಾಗುವ ನಿರ್ಧಾರದ ಹಕ್ಕು ಮಹಿಳೆಯರಿಗೆ: ಸುಪ್ರೀಂಕೋರ್ಟ್
ಹೊಸದಿಲ್ಲಿ, ಫೆ.11: ಮಗು ಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವ ಆಯ್ಕೆ ಮಹಿಳೆಯರದ್ದು . ಇದು ಮಹಿಳೆಯರ ಹಕ್ಕು ಎಂದು ಸುಪ್ರೀಂಕೋರ್ಟ್ ನ್ಯಾಯಾಧೀಶರು ತಿಳಿಸಿದ್ದಾರೆ.
ಜಿಂದಾಲ್ ಗ್ಲೋಬಲ್ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆದ ಭಾರತದ ನ್ಯಾಯಾಲಯ ಮತ್ತು ಸಂತಾನೋತ್ಪತ್ತಿ ಹಕ್ಕು ವಿಷಯದ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ ಸುಪ್ರೀಂಕೋರ್ಟ್‌ನ ನ್ಯಾಯಾಧೀಶ ಎ.ಕೆ.ಸಿಕ್ರಿ ,
ಮಹಿಳೆಯರ ಸಂತಾನೋತ್ಪತ್ತಿ ಹಕ್ಕು ಮತ್ತು ಪುರುಷವರ್ಗ ಹಾಗೂ ಕುಟುಂಬದವರು ಈ ವಿಷಯದಲ್ಲಿ ತಮ್ಮ ನಿರ್ಧಾರಗಳನ್ನು ಬಲವಂತವಾಗಿ ಹೇರುತ್ತಿರುವ ವಿಷಯದ ಕುರಿತು ತಮ್ಮ ಅಭಿಪ್ರಾಯ ಮಂಡಿಸಿದರು.
ನಮ್ಮ ದೇಶದಲ್ಲಿ ಸಂತಾನೋತ್ಪತ್ತಿಯ ವಿಷಯಕ್ಕೆ ಬಂದಾಗ, ಮಹಿಳೆಯರಿಗೆ ಬಹುತೇಕ ಯಾವುದೇ ಆಯ್ಕೆ ಇರುವುದಿಲ್ಲ. ನಾವು ಮಾನವೀಯತೆ ಮರೆತಂತೆ ವರ್ತಿಸುತ್ತಿರುವುದು ಅಚ್ಚರಿ ತಂದಿದೆ. 21ನೇ ಶತಮಾನದಲ್ಲಿ ನಾವಿದ್ದೇವೆ. ಅತ್ಯಾಧುನಿಕ ತಂತ್ರಜ್ಞಾನದ ನೆರವಿದ್ದರೂ ಕೂಡಾ ಮಹಿಳೆಯರಿಗೆ ಸಂತಾನೋತ್ಪತ್ತಿಯ ವಿಷಯದಲ್ಲಿ ಯಾವುದೇ ಆಯ್ಕೆ ಇಲ್ಲದಿರುವುದು ನಿಜಕ್ಕೂ ಆಘಾತಕಾರಿ ಎಂದರು.
ಕೆಲಸದ ಸ್ಥಳದಲ್ಲಿ ಲೈಂಗಿಕ ದೌರ್ಜನ್ಯ ತಡೆಗಟ್ಟುವ ಉದ್ದೇಶದಿಂದ ರೂಪಿಸಲಾದ ‘ವಿಶಾಖಾ ಮಾರ್ಗದರ್ಶಿ ಸೂತ್ರ’ವನ್ನು ಉಲ್ಲೇಖಿಸಿದ ಅವರು, ನ್ಯಾಯಾಲಯವು ಬೌಂಡರಿ ಗೆರೆಯ ವ್ಯಾಪ್ತಿಯನ್ನು ಹಿರಿದಾಗಿಸಿದೆ ಎಂದರು.
ಕ್ರಿಮಿನಲ್ ಅಪರಾಧವಾಗಿರುವ ಹೆಣ್ಣು ಭ್ರೂಣಹತ್ಯೆಯ ವಿಷಯದ ಕುರಿತೂ ಅವರು ಕಳವಳ ವ್ಯಕ್ತಪಡಿಸಿದರು. ಸಂತಾನೋತ್ಪತ್ತಿ, ಗರ್ಭ ಧರಿಸದಂತೆ ತಡೆಗಟ್ಟುವುದು.. ಇವೆಲ್ಲಾ ಮಹಿಳೆಯರ ಹಕ್ಕು. ಯಾಕೆಂದರೆ ಇದು ಮಹಿಳೆಯರಿಗೆ ಸಂಬಂಧಿಸಿದ ವಿಷಯ. ಆಕೆಯ ದೇಹದ ಮೇಲೆ ಆಕೆಗೆ ಹಕ್ಕಿದೆ ಎಂದ ಅವರು, ಅಂತಿಮವಾಗಿ ನ್ಯಾಯಾಲಯವು ಈ ವಿಷಯದಲ್ಲಿ ಅಂತಿಮ ತೀರ್ಪು ನೀಡುತ್ತದೆ ಎಂದರು.