ಜಾಲಿ ಎಲ್ ಎಲ್‌ಬಿ 2: ತಮಾಷೆಯ ಕುದುರೆಯ ಮೇಲೆ ನ್ಯಾಯದ ಜಾಲಿ ರೈಡ್

Update: 2017-02-11 18:28 GMT

2013ರಲ್ಲಿ ಬಾಲಿವುಡ್‌ನ ಕೋರ್ಟ್‌ನಲ್ಲಿ ಲವಲವಿಕೆಯ ಬಾಂಬ್ ಸಿಡಿಸಿದ ಜಾಲಿ ಎಲ್‌ಎಲ್‌ಬಿ ಚಿತ್ರವನ್ನು ಮರೆಯಲು ಸಾಧ್ಯವೇ? ವಕೀಲರು ಮತ್ತು ಕೋರ್ಟ್ ರೂಂನೊಳಗಿನ ವಾಸ್ತವಗಳನ್ನು ಹಾಸ್ಯಮಯ ನಿರೂಪಣೆಯೊಂದಿಗೆ ಕಟ್ಟಿಕೊಟ್ಟ ಸುಭಾಶ್ ಕಪೂರ್ ಚಿತ್ರ ಅದು. ಅರ್ಶದ್ ವರ್ಸಿ, ಬೊಮನ್ ಇರಾನಿ, ಸೌರಭ್ ಶುಕ್ಲ ಒಬ್ಬರಿಗೊಬ್ಬರು ಸಾಟಿ ಎನ್ನುವಂತೆ ನಟಿಸಿ, ಚಿತ್ರದ ಯಶಸ್ವಿಗೆ ಕಾರಣವಾಗಿದ್ದರು.

ಬಿಗಿಯಾದ ಚಿತ್ರಕತೆ, ಲವಲವಿಕೆಯ ನಿರೂಪಣೆ ಕಮರ್ಶಿಯಲ್ ಚಿತ್ರವಾಗಿದ್ದರೂ ವಾಸ್ತವಕ್ಕೆ ತುಂಬಾ ಹತ್ತಿರವಾಗುವಂತೆ ಕೋರ್ಟ್ ರೂಂನ್ನು ಕಟ್ಟಿಕೊಟ್ಟ ರೀತಿ ಚಿತ್ರವನ್ನು ಭಿನ್ನವಾಗಿಸಿತ್ತು. ಗ್ರಾಮೀಣ ಪ್ರದೇಶದಿಂದ ಬಂದ ಪಡ್ಡೆ ವಕೀಲನೊಬ್ಬ, ಅನಿರೀಕ್ಷಿತ ಸಂದರ್ಭವೊಂದರಲ್ಲಿ ಸುಪ್ರೀಂ ಕೋರ್ಟ್ ವಕೀಲನನ್ನು ಎದುರು ಹಾಕಿಕೊಳ್ಳಬೇಕಾದ ಸನ್ನಿವೇಶವನ್ನೇ ವಸ್ತುವಾಗಿಸಿ, ನ್ಯಾಯವ್ಯವಸ್ಥೆಯ ಬೇರೆ ಬೇರೆ ಮಗ್ಗುಲನ್ನು ತೆರೆದಿಡಲಾಗಿತ್ತು. ಆಗಷ್ಟೇ ವೃತ್ತಿಜೀವನಕ್ಕೆ ಕಾಲಿಟ್ಟಿರುವ ವಕೀಲ, ಕ್ಲೈಂಟ್‌ಗಳಿಲ್ಲದೆ ಅನಿವಾರ್ಯವಾಗಿ ಅಪಘಾತವೊಂದಕ್ಕೆ ಸಂಬಂಧಿಸಿ ‘ಸಾರ್ವಜನಿಕ ಹಿತಾಸಕ್ತಿ ಅರ್ಜಿ’ವೊಂದನ್ನು ದಾಖಲಿಸುತ್ತಾನೆ. ಬರೇ ಸಣ್ಣ ಪ್ರಕರಣವೆಂದು ತಿಳಿದುಕೊಂಡ ಘಟನೆ ಬೃಹದಾಕಾರವಾಗಿ ಬೆಳೆಯುತ್ತಾ, ಸುಪ್ರೀಂಕೋರ್ಟ್ ನ್ಯಾಯಾಧೀಶನೇ ಅವನ ವಿರುದ್ಧ ವಾದ ಮಾಡಲು ಬಂದಿಳಿಯುತ್ತಾನೆ. ಆರಂಭದಿಂದ ಕೊನೆಯವರೆಗೂ ಚಿತ್ರ ಪ್ರೇಕ್ಷಕರನ್ನು ನಗಿಸುತ್ತಾ, ಸತ್ಯ, ನ್ಯಾಯದ ದರ್ಶನವನ್ನು ಮಾಡುತ್ತದೆ.

ಜಾಲಿ ಎಲ್‌ಎಲ್‌ಬಿ ಯಶಸ್ಸಿನ ಹ್ಯಾಂಗೋವರ್‌ನಿಂದ ಹೊರಬರುವುದಕ್ಕೆ ಸಾಧ್ಯವಾಗದ ಕಾರಣದಿಂದಲೋ ಏನೋ, ನಿರ್ದೇಶಕ ಸುಭಾಶ್ ಕಪೂರ್ ಇದೀಗ ಜಾಲಿ ಎಲ್‌ಎಲ್‌ಬಿ ಭಾಗ 2ನ್ನು ನಿರ್ದೇಶಿಸಿದ್ದಾರೆ. ಈ ಹಿಂದೆ ಜಾಲಿ ಪಾತ್ರದಲ್ಲಿ ಅರ್ಶದ್ ವರ್ಸಿ ಅಭಿನಯಿಸಿದ್ದಿದ್ದರೆ, ಈ ಬಾರಿ ಆ ಸ್ಥಾನವನ್ನು ಸ್ಟಾರ್ ನಟ ಅಕ್ಷಯ್ ಕುಮಾರ್ ತುಂಬಿದ್ದಾರೆ. ಬೊಮನ್ ಇರಾನಿ ಜಾಗದಲ್ಲಿ ಅನ್ನುಕಪೂರ್ ನಿಂತರೆ, ನ್ಯಾಯಾಧೀಶನ ಸ್ಥಾನವನ್ನು ಈ ಬಾರಿಯೂ ಸೌರಭ್ ಶುಕ್ಲ ಬಿಟ್ಟುಕೊಟ್ಟಿಲ್ಲ. ಈ ಬಾರಿ ಕಪೂರ್ ಎತ್ತಿಕೊಂಡ ಕಥೆಯ ಹರವು ತುಂಬಾ ವಿಶಾಲವಾದುದು ಮತ್ತು ಜ್ವಲಂತವಾದುದು. ಅಷ್ಟೇ ಅಲ್ಲ ತುಂಬಾ ಸೂಕ್ಷ್ಮವಾದುದು ಕೂಡ. ಸೂಪರ್ ಕಾಪ್‌ಗಳು ತಮ್ಮ ಪೌರುಷಗಳನ್ನು ಮೆರೆಯುವುದಕ್ಕೋಸ್ಕರ ಮತ್ತು ಹಣಕ್ಕೋಸ್ಕರ ಅಮಾಯಕರ ನಕಲಿ ಎನ್‌ಕೌಂಟರ್ ಮಾಡಿ, ನಿಜವಾದ ಉಗ್ರವಾದಿಗಳನ್ನು ರಕ್ಷಿಸುವ ಕೃತ್ಯವೊಂದರ ವಿರುದ್ಧ ಜಾಲಿ ಎಲ್‌ಎಲ್‌ಬಿ ವಾದಕ್ಕಿಳಿದಿದ್ದಾನೆ. ಹಿಂದಿನ ಜಾಲಿ ಎಲ್‌ಎಲ್‌ಬಿ ವೃತ್ತಿಪರ ಅಲ್ಲ. ಗ್ರಾಮೀಣ ಮತ್ತು ಅಮಾಯಕನಾಗಿದ್ದ. ಆತನಿಗಿರಬೇಕಾಗಿದ್ದ ಮುಗ್ಧತೆಯನ್ನು ಅರ್ಶದ್‌ವರ್ಸಿ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ ಈ ಬಾರಿ ಅಕ್ಷಯ್ ಕುಮಾರ್ ಅವರ ಎಂದಿನ ಕೆಲವು ಸಿದ್ಧ ವರಸೆಗಳಿಂದಾಗಿ ಹಿಂದಿನ ಜಾಲಿಯ ಮುಗ್ಧತೆ ಕಾಣೆಯಾಗಿದೆ. ಆ ಪಾತ್ರದ ಆರ್ದ್ರತೆ ಇಲ್ಲವಾಗಿದೆ. ಆದರೆ ಇಡೀ ಕತೆಯ ಓಘ, ಪ್ರೇಕ್ಷಕರಿಗೆ ನಿರಾಸೆಯನ್ನುಂಟು ಮಾಡುವುದಿಲ್ಲ.

ಹಿರಿಯ ವಕೀಲರೊಬ್ಬರ ಕೈ ಕೆಳಗೆ ಗುಮಾಸ್ತನಂತೆ ಕಾಲ ಕಳೆಯುತ್ತಿದ್ದ ಜಗದೀಶ್ವರ್ ಮಿಶ್ರ ಯಾನೆ ಜಾಲಿ ತನ್ನ ವೃತ್ತಿಯಲ್ಲಿ ಮೇಲೇರಲು ಅಡ್ಡದಾರಿಯನ್ನು ಹಿಡಿಯುತ್ತಾನೆ. ನ್ಯಾಯಕ್ಕಾಗಿ ಅಲೆದಾಡುತ್ತಿದ್ದ ವಿಧವೆ ಗರ್ಭಿಣಿಗೆ ವಂಚಿಸಿ ಆಕೆಯಿಂದ ಎರಡು ಲಕ್ಷ ರೂಪಾಯಿ ವಸೂಲಿ ಮಾಡುತ್ತಾನೆ. ಆದರೆ ಅಂತಿಮವಾಗಿ ಅದು ಆಕೆಯ ಸಾವಿನಲ್ಲಿ ಮುಕ್ತಾಯವಾಗುತ್ತದೆ. ಜಾಲಿಯ ಮೋಸ ಬಟಾಬಯಲಾಗುತ್ತದೆ. ಇದೀಗ ಜಾಲಿ, ತನ್ನಿಂದ ಅನ್ಯಾಯಕ್ಕೊಳಗಾಗಿದ್ದ ಮಹಿಳೆಯ ಪರವಾಗಿ ನಿಂತು, ಆಕೆ ಯಾವ ನ್ಯಾಯಕ್ಕಾಗಿ ನ್ಯಾಯಾಲಯದಲ್ಲಿ ಅಲೆದಾಡುತ್ತಿದ್ದಳೋ ಅದನ್ನು ಆಕೆಗೆ ಮರಣೋತ್ತರವಾಗಿ ದೊರಕಿಸಿಕೊಡಲು ಹೊರಡುತ್ತಾನೆ. ಈ ಸಂದರ್ಭದಲ್ಲಿ ಆತನ ಮುಂದೆ ನಿಲ್ಲುವ ಪ್ರಕರಣವೇ ಒಬ್ಬ ಅಮಾಯಕನ ನಕಲಿ ಎನ್‌ಕೌಂಟರ್. ಸಹಜವಾಗಿಯೇ ಜಾಲಿ ಈ ಮೂಲಕ ಇಡೀ ಪೊಲೀಸ್ ಇಲಾಖೆಯನ್ನು ಎದುರು ಹಾಕಿಕೊಳ್ಳಬೇಕಾಗುತ್ತದೆ. ಅಷ್ಟೇ ಅಲ್ಲ, ನಕಲಿ ಎನ್‌ಕೌಂಟರ್ ಹಿಂದಿರುವ ಬೇರೇ ಬೇರೆ ರಾಜಕೀಯ ಮುಖಗಳನ್ನು ಮುಖಾಮುಖಿಯಾಗಬೇಕಾಗುತ್ತದೆ. ಸಾಕ್ಷಿಯನ್ನು ಹುಡುಕುತ್ತಾ ಜಾಲಿ, ಕಾಶ್ಮೀರಕ್ಕೆ ಹೋಗುವುದು, ಅಲ್ಲಿ ಬಂಧಿತ ಕಾನ್‌ಸ್ಟೇಬಲ್ ಒಬ್ಬನನ್ನು ಹೈಜಾಕ್ ಮಾಡಿ ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ತರುವುದು ಹೀಗೆ ಒಂದಿಷ್ಟು ಸೂಪರ್‌ಮ್ಯಾನ್ ಕೆಲಸವನ್ನೂ ಜಾಲಿ ಮಾಡಬೇಕಾಗುತ್ತದೆ. ಹೇಗೆ ಅಮಾಯಕರನ್ನು ನ್ಯಾಯಾಲಯ ಅಪರಾಧಿಗಳನ್ನಾಗಿಸಿ ಸಮಾಜದಲ್ಲಿ ಒಡಕನ್ನು ಉಂಟು ಮಾಡುತ್ತಿದೆ ಎನ್ನುವುದರ ಕಡೆಗೂ ನಮ್ಮ ಗಮನ ಹರಿಯುವಂತೆ ಮಾಡಿದ್ದಾರೆ ನಿರ್ದೇಶಕರು.

ಭಾರತೀಯತೆಯ ಸಂಬಂಧವನ್ನು ಬೆಸೆಯುವ ದೊಡ್ಡ ಉದ್ದೇಶವೊಂದು ಈ ಚಿತ್ರಕ್ಕಿದೆ. ಅದನ್ನು ಯಶಸ್ವಿಯಾಗಿ ನಿರ್ವಹಿಸುತ್ತದೆ ಕೂಡ. ಆದರೆ ಕೋರ್ಟ್ ರೂಂ ಹಿಂದಿಗಿಂತ ತುಸು ಗೊಂದಲಕಾರಿಯಾಗಿದೆ. ಜಾಲಿಯ ಎದುರಾಳಿ ವಕೀಲನಾಗಿ ಅನುಕಪೂರ್ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿದ್ದಾರಾದರೂ, ಹಿಂದಿನ ಬೊಮನ್ ಇರಾನಿ ಪದೇ ಪದೇ ಕಾಡುವುದಂತೂ ಸತ್ಯ. ಹಾಗೆಯೇ ಅಕ್ಷಯ್ ಕುಮಾರ್ ಎನ್ನುವ ಬಿರುಗಾಳಿಗಿಂತ, ಈ ಹಿಂದಿನ ಅರ್ಶದ್ ವರ್ಸಿ ಎನ್ನುವ ಅಮಾಯಕ ವಕೀಲನೇ ಹೆಚ್ಚು ಆಪ್ತನಾಗುತ್ತಾನೆ. ನ್ಯಾಯಾಧೀಶರಾಗಿ ಸೌರಭ್ ಶುಕ್ಲಾ ಎಂದಿನಂತೆಯೇ ಚಿತ್ರದುದ್ದಕ್ಕೂ ಕಾಡುತ್ತಾರೆ. ಆದರೆ ಅವರನ್ನು ಇನ್ನಷ್ಟು ವರ್ಣರಂಜಿತವಾಗಿ ತೋರಿಸಲು ಮುಂದಾಗಿ, ಪಾತ್ರವನ್ನು ಅತಿರೇಕಗೊಳಿಸಿದ್ದಾರೋ ಎಂಬ ಅನುಮಾನ ಆಗಾಗ ಕಾಡುತ್ತದೆ. ಜಾಲಿಯ ಪತ್ನಿಯಾಗಿ ಹುಮಾ ಖುರೈಸಿ ಇರುವ ಅವಕಾಶವನ್ನು ಬಳಸಿಕೊಂಡಿದ್ದಾರೆ. ಜಾಲಿ ಭಾಗ ಎರಡಕ್ಕೆ ಈ ಹಿಂದಿನ ಜಾಲಿಯೇ ಅತೀ ದೊಡ್ಡ ಸವಾಲು. ಆ ಜಾಲಿಯನ್ನು ಮರೆತರೆ, ಈ ಜಾಲಿ ಖುಷಿ ಕೊಡುವುದರಲ್ಲಿ ಎರಡು ಮಾತಿಲ್ಲ. ಒಮ್ಮೆ ನೋಡಬಹುದಾದ ಚಿತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News