ಕಾರ್ಗಿಲ್ ದುಡ್ಡು ಪಾಕಿಸ್ತಾನಕ್ಕೆ!

Update: 2017-02-11 18:32 GMT

ಎಲ್ಲಕ್ಕಿಂತ ವಿಶೇಷವೆಂದರೆ ಮೆರವಣಿಗೆಯಲ್ಲಿ ಅವನು ಕಬೀರನನ್ನು ಕೂಡ ನೋಡಿದ್ದ. ಅವನೂ ಜೋರಾಗಿ ಭಾರತದ ಪರವಾಗಿ ಘೋಷಣೆ ಕೂಗುತ್ತಿದ್ದ. ಆಕಸ್ಮಿಕವಾಗಿ ಕಬೀರನು ಪಪ್ಪುವನ್ನು ನೋಡಿಬಿಟ್ಟ. ಕಬೀರನು ಪಪ್ಪುವಿನೆಡೆಗೆ ಕೈ ಬೀಸುತ್ತಾ, ಇನ್ನೂ ಜೋರಾಗಿ ಘೋಷಣೆ ಕೂಗ ತೊಡಗಿದ ‘‘ಪಾಕಿಸ್ತಾನ್ ಮುರ್ದಾಬಾದ್...’’

ಪಪ್ಪುವಿಗೆ ಕಬೀರನನ್ನು ನೋಡಿ ಒಳಗೊಳಗೆ ಸಂತೋಷವಾಯಿತು. ಆದರೂ ಗೊಂದಲ....

ತನ್ನ ಗೊಂದಲವನ್ನು ಅವನು ಜಾನಕಿಯ ಜೊತೆಗೆ ಹಂಚಿಕೊಂಡ. ‘‘ನಿನಗೆ ಗೊತ್ತಾ...ಈ ಬ್ಯಾರಿಗಳೆಲ್ಲ ಸೇರಿಕೊಂಡು ಕಾರ್ಗಿಲ್ ಸಂತ್ರಸ್ತರಿಗೆ ಹಣ ಸಂಗ್ರಹಿಸುತ್ತಿದ್ದಾರೆ....ಕಬೀರ ಎಲ್ಲ ಮುಸ್ಲಿಮರ ಹಾಗಲ್ಲ. ಅವನು ಭಾರತದ ಪರವಾಗಿ ಘೋಷಣೆ ಕೂಗುತ್ತಿದ್ದ. ಪಾಕಿಸ್ತಾನ್ ಮುರ್ದಾಬಾದ್ ಎನ್ನುತ್ತಿದ್ದ....’’

ಕಬೀರನ ಕುರಿತಂತೆ ತಪ್ಪು ತಿಳಿದುಕೊಂಡಿರುವ ಜಾನಕಿಯನ್ನು ಮನವೊಲಿಸುವ ಉದ್ದೇಶವೂ ಇತ್ತು. ಕಬೀರನ ಗೆಳೆತನಕ್ಕಾಗಿ ಅವನ ಮನಸ್ಸು ಒಳಗೊಳಗೇ ಹಂಬಲಿಸುತ್ತಿತ್ತು. ಜಾನಕಿ ಕಬೀರನ ತಪ್ಪು ಕಲ್ಪನೆಯನ್ನು ನಿವಾರಿಸಿ ಬಿಟ್ಟಳು ‘‘ನಿನಗೆ ಗೊತ್ತಿಲ್ಲ. ಅವರು ಹೊರಗೊಂದು ಒಳಗೊಂದು....’’

ಪಪ್ಪು ಅವಳನ್ನೇ ಕಣ್ಣರಳಿಸಿ ನೋಡಿದ.

ಜಾನಕಿ ಮುಂದುವರಿಸಿದಳು ‘‘ಸಂಗ್ರಹಿಸಿದ ಹಣವನ್ನು ಅವರು ಗುಟ್ಟಾಗಿ ಪಾಕಿಸ್ತಾನದ ಸರಕಾರಕ್ಕೆ ಕಳುಹಿಸಿಕೊಡುತ್ತಾರೆ ಅಷ್ಟೇ....’’

ಓಹ್! ಪಪ್ಪು ಆಘಾತಗೊಂಡಿದ್ದ. ಎಂತಹ ದ್ರೋಹ. ಅವನೊಳಗಿನ ಸೇನಾನಿ ಜಾಗೃತಗೊಂಡು, ಅವುಡುಗಚ್ಚಿದ್ದ. ಇನ್ನೆಂದೂ ಕಬೀರನ ಮುಖ ನೋಡಲಾರೆ ಎಂದು ಮನದೊಳಗೆ ಶಪಥ ಮಾಡಿದ.

***

ಹೀಗಿರುವಾಗಲೇ ಇವೆಲ್ಲದರ ನಡುವೆ ಪಪ್ಪುವಿನ ಬದುಕಿನ ಮುಂದೆ ಇನ್ನೊಂದು ದೊಡ್ಡ ಯುದ್ಧ ಘೋಷಣೆಯಾಯಿತು. ಅದು ಎಸೆಸೆಲ್ಸಿ ಪರೀಕ್ಷೆ. ಎಸೆಸೆಲ್ಸಿ ಪರೀಕ್ಷೆಯೆಂದರೆ ಯಾವ ಕಾರ್ಗಿಲ್ ಯುದ್ಧಕ್ಕಿಂತಲೂ ಕಡಿಮೆಯಿಲ್ಲ ಪಪ್ಪುವಿನ ಪಾಲಿಗೆ. ಪರೀಕ್ಷೆ ಹತ್ತಿರವಾಯಿತೆಂದರೆ ಜಾನಕಿ ಕೊಠಡಿಯ ಬಾಗಿಲು ಹಾಕಿಕೊಂಡು ಓದುವುದರಲ್ಲಿ ಲೀನವಾಗಿ ಬಿಡುತ್ತಾಳೆ. ಅವಳ ಓದಿನ ತಪಸ್ಸನ್ನು ಕೆಡಿಸುವ ಧೈರ್ಯ ಪಪ್ಪುವಿಗೆ ಇರಲಿಲ್ಲ. ಫೆಬ್ರವರಿ ತಿಂಗಳು ದಾಟುತ್ತಿದ್ದ ಹಾಗೆಯೇ ಜಾನಕಿ ಪಪ್ಪುವಿನ ಜೊತೆಗೆ ಬೆರೆಯುವುದನ್ನು ಕಡಿಮೆ ಮಾಡತೊಡಗಿದಳು. ಅದೇನು ಕೇಳಿದರೂ ‘‘ಓದುವುದು ಇನ್ನೂ ಬಾಕಿಯಿದೆ...ನಾಳೆ ಸಿಗುವ’’ ಎಂದು ಬಿಡುತ್ತಿದ್ದಳು. ಪಪ್ಪು ಪೆಚ್ಚಾಗಿ ಬಿಟ್ಟು ಸೀದಾ ಮನೆಗೆ ಮರಳಿ, ತನ್ನ ಪುಸ್ತಕ ಬಿಡಿಸುತ್ತಿದ್ದ. ಮಾರ್ಚ್ ತಿಂಗಳಲ್ಲಂತೂ ಜಾನಕಿಯ ಮುಖ ನೋಡುವುದಕ್ಕೂ ಸಾಧ್ಯವಾಗಲಿಲ್ಲ. ಅದೆಷ್ಟೋ ಬಾರಿ ಗುರೂಜಿಯ ಮನೆಯ ಬಾಗಿಲು ತಟ್ಟಿದನಾದರೂ, ಗುರೂಜಿಯ ಪತ್ನಿಯೇ ಬಾಗಿಲು ತೆರೆಯುತ್ತಿದ್ದರು.

 ‘‘ಅವಳು ಓದುತ್ತಿದ್ದಾಳಪ್ಪ....’’ ಎಂದು ಸಾಗ ಹಾಕಿ ಬಿಡುತ್ತಿದ್ದರು. ಕನಿಷ್ಠ ‘ನಮಸ್ತೆ’ ಎಂದು ಹೇಳುವುದಕ್ಕೂ ಜಾನಕಿ ಹೊರ ಬರುತ್ತಿರಲಿಲ್ಲ. ಪರೀಕ್ಷೆಯೆಂದರೆ ಒಂದು ಕಾರ್ಗಿಲ್ ಯುದ್ಧವೇ ಆಗಿರಬೇಕು ಎಂದು ಪಪ್ಪು ತನಗೆ ತಾನೆ ಅಂದುಕೊಳ್ಳುತ್ತಿದ್ದ. ಅವನಿಗೋ ಜಾನಕಿಯ ಜೊತೆಗೆ ಮಾತನಾಡಬೇಕು. ಅಥವಾ ಅವಳ ಮಾತುಗಳನ್ನು ಕಾಲಾಡಿಸುತ್ತಾ ಕೇಳಬೇಕು. ಆದರೆ ಅವಳೇ ಕೈಗೆ ಸಿಗುತ್ತಿಲ್ಲ!. ಕೊನೆಗೂ ಪಪ್ಪು ಕೂಡ ಒಂದು ನಿರ್ಧಾರ ತೆಗೆದುಕೊಂಡ. ಪರೀಕ್ಷೆ ಮುಗಿಯುವವರೆಗೆ ತಾನೂ ಕೂಡ ಜಾನಕಿಯಂತೆ ಕೊಠಡಿ ಬಾಗಿಲು ಬಾಕಿ ಓದುವುದು. ಅಂತೆಯೇ ಒಂದೆರಡು ದಿನ ಕೊಠಡಿ ಬಾಗಿಲು ಹಾಕಿ ಕೂತ. ಆದರೆ ಲಕ್ಷ್ಮಮ್ಮ ಬಾಗಿಲು ತಟ್ಟುತ್ತಿದ್ದರು. ಅವನಿಗೆ ಜಾನಕಿಯಂತೆ ಶ್ರದ್ಧೆಯಿಂದ ಒಂದೇ ಸಮನೆ ಓದುವುದು ಸಾಧ್ಯವಾಗುತ್ತಿರಲಿಲ್ಲ. ಒಂದೋ ಕೂತಲ್ಲೇ ಅದೇನೇನೋ ಕನಸುಗಳನ್ನು ಕಾಣುತ್ತಿದ್ದ. ಅಥವಾ ಅವನನ್ನು ನಿದ್ದೆ ಆವರಿಸಿ ಬಿಡುತ್ತಿತ್ತು. ‘‘ನೀನು ಓದುವುದು ನನಗೆ ಗೊತ್ತೇ ಇದೆ. ಅದೇಕೆ ಹಾಗೆ ಇಡೀ ಹೊತ್ತು ಪುಸ್ತಕ ಹಿಡಿದುಕೊಳ್ಳಬೇಕು. ಪುರಂದರ ದಾಸರ ಒಂದೆರಡು ಪದಗಳನ್ನು ಹಾಡಿ ತೋರಿಸು ನೋಡೋಣ....’’ ಲಕ್ಷ್ಮಮ್ಮ ಮಗನಲ್ಲಿ ಕೇಳುತ್ತಿದ್ದರು. ಮಗ ಎಂದಿನಂತೆ ಲವಲವಿಕೆಯಿಂದ ಮಾತುಕತೆಯಾಡದೆ, ಪುಸ್ತಕ ಬಿಡಿಸಿ ಕೂರುವುದು ಲಕ್ಷ್ಮಮ್ಮನಿಗೆ ಸಂಕಟ ತರುತ್ತಿತ್ತು. ಪತಿ ಮನೆಯಲ್ಲಿಲ್ಲದೇ ಇದ್ದರೆ ಮಾತನಾಡುವುದಕ್ಕೆ ಜೊತೆಯಾಗಿರುವನೊಬ್ಬ ಮಗ. ಅವನೂ ತಂದೆಯಂತೆ ಪುಸ್ತಕವನ್ನು ಮಡಿಲಲ್ಲಿಟ್ಟು ಕೂತರೆ ಲಕ್ಷ್ಮಮ್ಮ ಯಾರ ಜೊತೆ ಮಾತನಾಡಬೇಕು? ಆದರೆ ಮನಸ್ಸು ತುಂಬಾ ಜಾನಕಿಯನ್ನು ತುಂಬಿಕೊಂಡ ಪಪ್ಪುವಿಗೆ ತಾಯಿಯ ಯಾವ ಮಾತುಗಳೂ ಕಿವಿಗೆ ಬೀಳುತ್ತಿರಲಿಲ್ಲ. ಅನಂತಭಟ್ಟರಿಗೆ ಮಾತ್ರ, ಮಗ ಓದುವುದರ ಕಡೆಗೆ ಗಮನಹರಿಸಿರುವುದು ತುಂಬಾ ಸಂತಸ ಕೊಟ್ಟಿತ್ತು.

  ‘‘ಸಜ್ಜನರ ಸಂಗ ಹೆಜ್ಜೇನು ಸವಿದಂತೆ. ಜಾನಕಿಯ ಜೊತೆಗೆ ಸ್ನೇಹ ಪಪ್ಪುವನ್ನೂ ಜಾಣನಾಗಿಸಿದೆ. ಅವನೂ ಓದುವುದಕ್ಕೆ ತೊಡಗಿದ್ದಾನೆ ನೋಡು....ಅವನಿಗೇನು ಬೇಕು ಅದನ್ನು ಮಾಡಿ ಕೊಡು...ಓದಲಿ...ಎಸೆಸೆಲ್ಸಿಯಲ್ಲಿ ಪ್ರಥಮದರ್ಜೆಯಲ್ಲಿ ಮಾರ್ಕ್ಸ್ ತೆಗೆಯಲಿ....’’ ಅನಂತಭಟ್ಟರು ಪತ್ನಿಗೆ ಕಿವಿಮಾತು ಹೇಳಿದ್ದರು.

ಅದೇನು ಓದಿದನೋ...ಎಸೆಸೆಲ್ಸಿ ಪರೀಕ್ಷೆಯಂತೂ ಭರ್ಜರಿಯಾಗಿಯೇ ನಡೆಯಿತು. ಶಿಸ್ತಿನ ಯೋಧರಂತೆ ಎಲ್ಲ ಮಕ್ಕಳು ಪರೀಕ್ಷೆ ಬರೆದರು. ಕೊನೆಗೆ ಫಲಿತಾಂಶವೂ ಬಂತು. ಪಪ್ಪು ಸೆಕೆಂಡ್ ಕ್ಲಾಸ್ ಪಾಸಾಗಿದ್ದ. ಅವನಿಗೆ ಸಂಭ್ರಮವೋ ಸಂಭ್ರಮ. ವಿಜ್ಞಾನದಲ್ಲಿ ಫೇಲಾಗಿ ಬಿಡುತ್ತೇನೆ ಎಂಬ ಭಯ ಅವನದ್ದಾಗಿತ್ತು. ಒಂದು ವೇಳೆ ಫೇಲಾಗಿದ್ದಿದ್ದರೆ ಜಾನಕಿಯ ಮುಂದೆ ಅದೆಷ್ಟು ಅವಮಾನವಾಗಿ ಬಿಡುತ್ತಿತ್ತು. ಅವಳು ತನ್ನನ್ನು ಹತ್ತಿರವೂ ಸೇರಿಸಿಕೊಳ್ಳುತ್ತಿರಲಿಲ್ಲವೇನೋ!

ಜಾನಕಿ ಶೇ. 92 ಅಂಕ ಪಡೆದು ತಾಲೂಕಿಗೇ ಮೊದಲ ಸ್ಥಾನ ಪಡೆದುಕೊಂಡು ಗುರೂಜಿಯ ಕೀರ್ತಿಯನ್ನು ನಾಲ್ದಿಕ್ಕಿಗೆ ಹರಡಿದ್ದಳು. ಪಪ್ಪು ಈ ಅಂಕದ ಬಗ್ಗೆಲ್ಲ ತಲೆಕೆಡಿಸಿಕೊಂಡಿರಲಿಲ್ಲ. ಜಾನಕಿ ಇನ್ನು ಮುಂದೆ ತನಗೆ ಮುಕ್ತವಾಗಿ ಸಿಗುತ್ತಾಳೆ. ಯಾವ ಪರೀಕ್ಷೆಗಳ ಅಡ್ಡಿಯೂ ಇರುವುದಿಲ್ಲ ಎನ್ನುವುದು ಅವನಿಗೆ ಸಂತೋಷವನ್ನು ತಂದಿತ್ತು. ಆದರೆ ಆಕೆಯನ್ನು ಭೇಟಿ ಮಾಡಿದ ದಿನ ಅವಳು ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದ್ದಳು. ‘‘ಶೇ. 95ಕ್ಕಿಂತ ಅಧಿಕ ಸಿಕ್ಕಬೇಕಾಗಿತ್ತು. ಇನ್ನೊಮ್ಮೆ ಪರಿಶೀಲನೆಗೆ ಅರ್ಜಿ ಹಾಕಿದರೆ ಹೇಗೆ ಎಂದು ಯೋಚಿಸುತ್ತಿದ್ದೇನೆ’’ ಎಂದು ಜಾನಕಿ ಅಂದಾಗ ಪಪ್ಪುವಿನ ತಲೆ ಧಿಂ ಅಂದಿತ್ತು.

 ಅಷ್ಟು ಅಂಕಗಳೂ ಸಾಕಾಗಲಿಲ್ಲವೇ? ಸೆಕೆಂಡ್ ಕ್ಲಾಸ್ ಅಂಕ ಪಡೆದು ನಾನು ಇಷ್ಟು ಸಂತೋಷವಾಗಿದ್ದೇನಲ್ಲ! ನನಗಿಂತ ದುಪ್ಪಟ್ಟು ಅಂಕ ಜಾನಕಿಗೆ ಸಿಕ್ಕಿದೆ. ಆದರೂ ಅವಳಿಗೆ ದುಃಖವಾಗಿದೆ. ಪಪ್ಪುವಿಗೆ ಅರ್ಥವಾಗಲಿಲ್ಲ. ಆದರೆ ಈ ಅಂಕಗಳು ತಮ್ಮನ್ನು ಬೇರ್ಪಡಿಸಬಹುದು ಎಂದು ಅವನು ಕನಸಲ್ಲೂ ಎಣಿಸಿರಲಿಲ್ಲ.

 ಒಂದು ದಿನ ಜಾನಕಿ ಹೇಳಿದಳು ‘‘ನನಗೆ ಪುತ್ತೂರಿನ ವಿವೇಕಶ್ರೀ ಕಾಲೇಜಿನಲ್ಲಿ ಸೈನ್ಸ್‌ಗೆ ಸೀಟು ಸಿಕ್ಕಿದೆ. ಅಲ್ಲೇ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳುವುದಕ್ಕೆ ಅಪ್ಪ ವ್ಯವಸ್ಥೆ ಮಾಡಿದ್ದಾರಂತೆ...’’ ಪಪ್ಪುವಿಗೆ ಏನು ಹೇಳಬೇಕು ಎಂದು ಅರ್ಥವೇ ಆಗಲಿಲ್ಲ.

‘‘ಇಲ್ಲೇ ಉಪ್ಪಿನಂಗಡಿಯಲ್ಲಿ ಜೂನಿಯರ್ ಕಾಲೇಜು ಇದೆಯಲ್ಲ. ಪುತ್ತೂರಿಗ್ಯಾಕೆ?’’ ಪಪ್ಪು ಕೇಳಿದ. ‘‘ಉಪ್ಪಿನಂಗಡಿಯಲ್ಲಿ ಆರ್ಟ್ಸ್ ಮತ್ತು ಕಾಮರ್ಸ್ ಮಾತ್ರ. ಸೈನ್ಸ್ ಇಲ್ಲ...ನನಗೆ ಒಳ್ಳೆಯ ಮಾರ್ಕ್ಸ್ ಬಂದಿದೆಯಲ್ಲ. ಅದಕ್ಕೆ ಸೈನ್ಸ್ ತೆಗಿ ಎಂದಿದ್ದಾರೆ ಅಪ್ಪಾ....’’

ಅಂದು ಪಪ್ಪು ಮನೆಗೆ ಹೋದವನೇ ತಂದೆಯಲ್ಲಿ ಬೇಡಿಕೆ ಇಟ್ಟಿದ್ದ ‘‘ನಾನು ಸೈನ್ಸ್ ತೆಗೆದುಕೊಳ್ಳುವೆ’’

ಅನಂತಭಟ್ಟರಿಗೆ ಅಚ್ಚರಿ. ವಿಜ್ಞಾನದಲ್ಲಿ ಸಿಕ್ಕಿದ್ದು 36. ಸೈನ್ಸ್‌ನ ಮಾತನ್ನಾಡುತ್ತಿದ್ದಾನೆ ಪಪ್ಪು. ಆದರೂ ಸಮಾಧಾನಿಸಿದರು ‘‘ಉಪ್ಪಿನಂಗಡಿಯ ಕಾಲೇಜಿನಲ್ಲಿ ಸೈನ್ಸ್ ಇಲ್ಲ ಮಗಾ....’’

 ‘‘ನಾನು ಪುತ್ತೂರಿಗೆ ಹೋಗುವೆ. ವಿವೇಕಶ್ರೀ ಕಾಲೇಜಿನಲ್ಲಿ ಕಲಿಯುವೆ. ಅಲ್ಲಿ ಹಾಸ್ಟೆಲ್‌ನಲ್ಲಿ ಇದ್ದು ಓದುವೆ...’’

ಮಗನ ಮನಸ್ಸು ತಂದೆಗೆ ಅರ್ಥವಾಗಿ ಬಿಟ್ಟಿತು. ‘‘ನಿನಗೆ ಸಿಕ್ಕಿದ ಮಾರ್ಕ್ಸಿಗೆ ಉಪ್ಪಿನಂಗಡಿಯಲ್ಲಿ ಸೀಟು ಸಿಕ್ಕಿದ್ದೇ ದೊಡ್ಡದು. ವಿವೇಕಶ್ರೀ ಕಾಲೇಜಿನಲ್ಲಿ ಅಲ್ಲಿನ ಜಗಲಿಗೂ ನಿನ್ನನ್ನು ಹತ್ತುವುದಕ್ಕೆ ಬಿಡುವುದಿಲ್ಲ ಗೊತ್ತುಂಟಾ...’’ ಎಂದು ಗಹಗಹಿಸಿ ನಕ್ಕರು. ಪಪ್ಪು ವೌನವಾಗಿ ಬಿಟ್ಟ.

ತುಸು ಹೊತ್ತಿನ ಬಳಿಕ ಅನಂತಭಟ್ಟರೇ ಮಗನನ್ನು ಸಮಾಧಾನಿಸಿದರು ‘‘ಮಗಾ...ಆರ್ಟ್ಸ್ ಓದು. ಸಾಹಿತ್ಯದ ಬಗ್ಗೆ ಆಸಕ್ತಿ ಬೆಳೆಸಿಕೋ. ಅಲ್ಲಿಯೂ ತುಂಬಾ ಅವಕಾಶ ಉಂಟು. ಲಾಯರ್ ಆಗ ಬಹುದು. ಲೆಕ್ಚರರ್ ಆಗಬಹುದು. ಪತ್ರಕರ್ತ ಆಗಬಹುದು. ಸಾಹಿತಿ ಆಗಬಹುದು. ಸೈನ್ಸ್‌ಗಿಂತ ಆರ್ಟ್ಸ್‌ನಲ್ಲೇ ಕಲಿಯುವುದಕ್ಕೆ ತುಂಬಾ ಇರೋದು....ಜಾನಕಿ ಪುತ್ತೂರಿಗೆ ಹೋದರೇನಾಯಿತು. ಆಕೆ ತಿಂಗಳಿಗೊಮ್ಮೆ ಬರುವುದಿಲ್ಲವಾ?’’

ಪಪ್ಪು ಪ್ರತಿಕ್ರಿಯಿಸಲಿಲ್ಲ. ತನ್ನ ಅಂಕಕ್ಕೆ ವಿವೇಕಶ್ರೀ ಕಾಲೇಜಿನ ಜಗಲಿಯಲ್ಲಿ ಕಾಲಿಡಲೂ ಅವಕಾಶವಿಲ್ಲ ಎಂದು ತಂದೆ ಹೇಳಿದ್ದು ಅವನಿಗೆ ತುಂಬಾ ಅವಮಾನವನ್ನುಂಟು ಮಾಡಿತ್ತು. ಜಾನಕಿಯಷ್ಟು ಅಂಕ ತೆಗೆಯುವುದು ಕನಸಿನ ಮಾತು. ಜಾನಕಿಯಾದರೂ ಕಮ್ಮಿ ಅಂಕ ತೆಗೆಯಬಹುದಿತ್ತು. ಅವಳೂ ನಾನು ಜೊತೆ ಜೊತೆಯಾಗಿ ಉಪ್ಪಿನಂಗಡಿ ಕಾಲೇಜಿಗೆ ಬಸ್ಸಿನಲ್ಲಿ ಹೋಗಿ ಬರಬಹುದಿತ್ತು. ಮೊದಲ ಬಾರಿ, ಜಾನಕಿಯ ಮೇಲೆ ಆತನಿಗೆ ಒಳಗೊಳಗೇ ಸಿಟ್ಟು ಎದ್ದು ಬಿಟ್ಟಿತು. ಆದರೆ ಅದು ಕೆಲ ಕ್ಷಣ ಮಾತ್ರವಾಗಿತ್ತು. ತಾನೇನೇ ಆಗಲಿ, ಯೋಧನಾಗಿ ಅವಳ ಮುಂದೆ ನಿಲ್ಲುವವನು. ತನ್ನೆದೆಯಲ್ಲಿ ಜಾನಕಿ ಬಿತ್ತಿರುವ ದೇಶಪ್ರೇಮದ ಬೀಜಗಳನ್ನು ಕಾಪಾಡುವುದು ನನ್ನ ಹೊಣೆ. ಅವಳು ಪುತ್ತೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ ಬರುವಷ್ಟರಲ್ಲಿ ನಾನು ಯೋಧನಾಗಿ ಅವಳ ಮುಂದೆ ನಿಲ್ಲಬೇಕು. ಅದು ಜಾನಕಿಯ ಆಸೆಯೂ ಹೌದು.

ಉಪ್ಪಿನಂಗಡಿ ಜೂನಿಯರ್ ಕಾಲೇಜಿನಲ್ಲಿ ಆರ್ಟ್ಸ್‌ಗೆ ಸೇರಿದ ಪಪ್ಪು ಕೆಲವೇ ದಿನಗಳಲ್ಲಿ ಕಾಲೇಜಿನ ಎನ್‌ಸಿಸಿ ಘಟಕಕ್ಕೆ ಸೇರಿ ಬಿಟ್ಟ. ಮುಂದೆ ಸೇನೆಗೆ ಸೇರುವುದಕ್ಕೆ ತುಂಬಾ ಅನುಕೂಲ ಮಾಡಿಕೊಡುತ್ತದೆ ಎಂದು ಯಾರೋ ಒಬ್ಬ ಅವನ ಸ್ನೇಹಿತ ಹೇಳಿದ್ದ. ಅಷ್ಟೇ ಅಲ್ಲ ಎನ್‌ಸಿಸಿ ಸೇರಿದ್ದನ್ನು ಜಾನಕಿಗೆ ತಿಳಿಸಬೇಕು ಎಂದು ಹಲವು ಬಾರಿ, ಆಕೆಯ ಮನೆಗೆ ಹೋಗಿದ್ದ. ಆದರೆ ಜಾನಕಿ ಪುತ್ತೂರಿನಿಂದ ಬಂದೇ ಇರಲಿಲ್ಲ. ಒಮ್ಮೆ ಬಂದಿದ್ದ್ದಳಾದರೂ, ಬಂದು ಅಷ್ಟೇ ವೇಗದಲ್ಲಿ ಹೊರಟು ಹೋಗಿದ್ದಳು. ಸೈನ್ಸ್ ಆದ ಕಾರಣ ಓದುವುದಕ್ಕೆ ತುಂಬಾ ಇದೆಯಂತೆ. ರವಿವಾರ ಸ್ಪೆಶಲ್ ಕ್ಲಾಸ್ ಅಂತೆ. ಗುರೂಜಿ ಮತ್ತು ಅವರ ಪತ್ನಿ ಮಗಳನ್ನು ನೋಡಬೇಕು ಅನ್ನಿಸಿದಾಗ ಪುತ್ತೂರಿಗೆ ಹೋಗಿ ನೋಡಿ ಬರುವುದಂತೆ. ರವಿವಾರವೂ ರಜೆ ಇಲ್ಲ ಎಂದಾಗ, ತಾನು ಸೈನ್ಸ್ ತೆಗೆದುಕೊಳ್ಳದ್ದು ಒಳ್ಳೆಯದೇ ಆಯಿತು ಅನ್ನಿಸಿತು. ಪಪ್ಪು ಜಾನಕಿಯನ್ನು ಭೇಟಿ ಮಾಡಲು ದೀಪಾವಳಿ ಬರಬೇಕಾಯಿತು.

ದೀಪಾವಳಿಯ ದಿನ ಪಟಾಕಿ ಹಚ್ಚುತ್ತಾ ಪಪ್ಪು ಹೇಳಿದ ‘‘ನಾನು ಎನ್‌ಸಿಸಿ ಸೇರಿದೆ...ಮುಂದೆ ಸೈನ್ಯಕ್ಕೆ ಸೇರುವುದಕ್ಕೆ ತುಂಬಾ ಸುಲಭ ಆಗುತ್ತೆ ಅಂತೆ...’’

ಜಾನಕಿ ಬಿಟ್ಟ ಕಣ್ಣಿನಿಂದ ಕೇಳಿದಳು ‘‘ಹೌದಾ? ನೀನು ನಿಜಕ್ಕೂ ಸೇನೆ ಸೇರುತ್ತೀಯಾ?’’

‘‘ಹೌದು..ಯಾಕೆ ಅನುಮಾನವೇ? ಕಾರ್ಗಿಲ್‌ನಲ್ಲಿ ಸತ್ತ ವೆಂಕಟನ ಸಾವಿಗೆ ಸೇಡು ತೀರಿಸದೇ ಬಿಡೋದಿಲ್ಲ ನಾನು...’’ ಪಪ್ಪು ಹೇಳಿದ.

‘‘ನೀನು ಅಂದರೆ ನನಗೆ ತುಂಬಾ ಇಷ್ಟ. ದೇಶಕ್ಕಾಗಿ ತ್ಯಾಗ ಮಾಡುವ ಎಲ್ಲರೂ ನನಗೆ ಇಷ್ಟ....ನಾನು ಅಪ್ಪನ ಬಳಿ ಹೇಳಿಯೇ ಬಿಟ್ಟಿದ್ದೇನೆ, ಒಬ್ಬ ವೀರ ಸೈನಿಕನನ್ನೇ ವರಿಸುತ್ತೇನೆ ಎಂದು’’ ಜಾನಕಿ ಹೇಳಿದಳು.

ಪಪ್ಪುವಿನ ಎದೆ ತುಂಬಿ ಬಂತು. ಆಕೆ ತನ್ನನ್ನು ಉದ್ದೇಶಿಸಿಯೇ ಆ ಮಾತು ಹೇಳಿದ್ದಾಳೆ ಎನ್ನುವುದು ಅವನಿಗೆ ಸ್ಪಷ್ಟವಿತ್ತು.

(ಗುರುವಾರ ಸಂಚಿಕೆ)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News