ಶಹನಾಯಿ ಮಾಂತ್ರಿಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಜೊತೆಗಿನ ಏಕೈಕ ನಂಟನ್ನೂ ಕಳೆದುಕೊಳ್ಳುತ್ತಿರುವ ಬಿಹಾರ

Update: 2017-02-12 10:14 GMT

ಪಾಟ್ನಾ,ಫೆ.12: ಶಹನಾಯಿ ಮಾಂತ್ರಿಕ ಭಾರತರತ್ನ ದಿ.ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಜೊತೆಗಿನ ತನ್ನ ಏಕೈಕ ನಂಟನ್ನೂ ಬಿಹಾರವು ಕಳೆದುಕೊಳ್ಳುತ್ತಿದೆ.

ರಾಜಧಾನಿ ಪಾಟ್ನಾದಿಂದ 110 ಕಿ.ಮೀ.ದೂರದ, ಬಕ್ಸರ್ ಜಿಲ್ಲೆಯ ಡುಮರಾಂವ್‌ನ ಭಿರುಖ್ ರಾವುತ್ ಕಿ ಗಲಿಯಲ್ಲಿರುವ ಖಾನ್ ಅವರ ಮನೆಯನ್ನು ಮಾರಾಟ ಮಾಡಲಾಗಿದೆ. ಹಲವಾರು ವರ್ಷಗಳ ಕಾಲ ಅವರು ಬಿಹಾರಕ್ಕೆ ಭೇಟಿ ನೀಡಿದಾಗಲೆಲ್ಲ ತನ್ನ ಬಾಲ್ಯದ ಸ್ನೇಹಿತರು ಮತ್ತು ಸ್ಥಳೀಯ ಯುವಜನರೊಂದಿಗೆ ಬೆರೆಯುತ್ತ ಸಂಭ್ರಮಿಸುತ್ತಿದ್ದ ಕಟ್ಟಡವೀಗ ನೆಲಸಮಗೊಳ್ಳುವ ಹಂತದಲ್ಲಿದೆ. ಅದರ ಹಾಲಿ ಮಾಲಿಕ ಅಲ್ಲಿ ಹೊಸ ಕಟ್ಟಡವೊಂದನ್ನು ನಿರ್ಮಿಸಲು ಮುಂದಾಗಿದ್ದಾನೆ.

ಖಾನ್ ಐದು ದಶಕಗಳ ಹಿಂದೆ ಇಲ್ಲಿ ಜಾಗ ಖರೀದಿಸಿ ಮನೆಯನ್ನು ನಿರ್ಮಿಸಿದ್ದರು. ಆದರೆ ಹಲವಾರು ವರ್ಷಗಳ ಕಾಲ ನಿರ್ವಹಣೆಯಿಲ್ಲದೆ ಮನೆಯ ಹೆಚ್ಚಿನ ಭಾಗಗಳು ಕುಸಿದು ಬಿದ್ದಿದ್ದವು. ಅವರ ಆಸ್ತಿಯ ಹೆಚ್ಚಿನ ಭಾಗ ಅತಿಕ್ರಮಣಗೊಂಡಿದ್ದು, ಶಹನಾಯಿ ಮಾಂತ್ರಿಕನ ಕೆಲವು ಕಪ್ಪುಬಿಳುಪು ಫೋಟೊಗಳನ್ನು ತೂಗು ಹಾಕಿಕೊಂಡಿರುವ ವರಾಂಡಾ ಮತ್ತು ಸಣ್ಣ ಕೋಣೆ ಮಾತ್ರ ಉಳಿದುಕೊಂಡಿವೆ.

ದಶಕದ ಹಿಂದೆ ಬಿಹಾರ ಸರಕಾರವು ಈ ಮನೆಯನ್ನು ಖಾನ್ ಅವರ ಸ್ಮಾರಕವಾಗಿ ಪರಿವರ್ತಿಸಿ ಮ್ಯೂಝಿಯಂ ಒಂದನ್ನು ಸ್ಥಾಪಿಸುವ ಪ್ರಸ್ತಾವನೆಯನ್ನು ಹೊಂದಿತ್ತು. ಮಹಾನ್ ಕಲಾವಿದನಿಗೆ ಅರ್ಪಿತವಾಗಲಿರುವ ಸಭಾಂಗಣದಲ್ಲಿ ಅವರ ಪ್ರತಿಮೆ ಮತ್ತು ಅವರ ಸಾಧನೆಯ ವಿವರಗಳುಳ್ಳ ಫಲಕವನ್ನು ಸ್ಥಾಪಿಸುವುದಾಗಿಯೂ ಸರಕಾರವು ಹೇಳಿತ್ತು.

ಇವೆಲ್ಲ ಯೋಜನೆಗಳು ಇಂದು ಕಾಗದದಲ್ಲಿಯೇ ಉಳಿದುಕೊಂಡಿವೆ. ಸ್ಮಾರಕ ನಿರ್ಮಿಸುವುದು ಹೋಗಲಿ,ಉಸ್ತಾದರ ಜಾಗವನ್ನು ಅತಿಕ್ರಮಣದಾರರಿಂದ ರಕ್ಷಿಸುವ ಕೆಲಸವೂ ಸರಕಾರದಿಂದಾಗಿಲ್ಲ.

ಖಾನ್ ಅವರು 1916,ಮಾ.21ರಂದು ಡುಮರಾಂವ್‌ನ ಥರ್ಥಾರಿ ಗಲಿಯ ಮನೆಯಲ್ಲಿ ಜನಿಸಿದ್ದರು. ಅವರಿಗೆ ಎರಡು ವರ್ಷಗಳಾಗಿದ್ದಾಗ ಅವರ ತಂದೆ, ಡುಮರಾಂವ್ ಆಸ್ಥಾನದಲ್ಲಿ ಶಹನಾಯಿ ವಾದಕರಾಗಿದ್ದ ಪೈಗಂಬರ್ ಬಕ್ಷ ಖಾನ್ ಅವರು ಭಿರುಖ್ ರಾವುತ್ ಗಲ್ಲಿಯಲ್ಲಿ ಆಸ್ತಿ ಖರೀದಿಸಿ ಅಲ್ಲಿಗೆ ಕುಟುಂಬದ ವಾಸ್ತವ್ಯವನ್ನು ಬದಲಿಸಿದ್ದರು. ಖಾನ್ ಕುಟುಂಬ ವಾರಣಾಸಿಗೆ ಸ್ಥಳಾಂತರಗೊಂಡ ಬಳಿಕ ಬಕ್ಷ ಸೋದರ ಈ ಆಸ್ತಿಯನ್ನು ಮಾರಾಟ ಮಾಡಿದ್ದ.

ಖಾನ್ ಅವರು ಜನಿಸಿದ್ದ ಮನೆ ಈಗ ಮದ್ರಸಾ ಆಗಿ ಪರಿವರ್ತನೆಗೊಂಡಿದೆ. ಅವರ ತಂದೆ ಖರೀದಿಸಿದ್ದ ಕಟ್ಟಡವನ್ನೂ ಬೇರೊಬ್ಬರಿಗೆ ಮಾರಾಟ ಮಾಡಲಾಗಿದೆ. ಖಾನ್ ಖರೀದಿಸಿದ್ದ ಈ ಜಾಗವನ್ನು ಅವರ ಮಕ್ಕಳು ಅತಿಕ್ರಮಣದ ಸಮಸ್ಯೆಯಿಂದಾಗಿ ತನಗೆ ಮಾರಾಟ ಮಾಡಿದ್ದಾರೆ.

ಬಿಲ್ಡರ್‌ಗಳ ಲಾಬಿಯನ್ನು ಎದುರಿಸುವುದೂ ಅವರಿಗೆ ಕಷ್ಟವಾಗಿತ್ತು ಎಂದು ಖಾನ್ ಅವರ ಮನೆಯ ಹೊಸ ಮಾಲಿಕ ಸುಲ್ತಾನ್ ಖಾನ್ ಹೇಳಿದರು. ಶೀಘ್ರವೇ ಬಿಹಾರದೊಂದಿಗೆ ಬಿಸ್ಮಿಲ್ಲಾ ಖಾನ್ ಅವರ ನಂಟಿನ ಏಕೈಕ,ಕಣ್ಣಿಗೆ ಗೋಚರವಾಗುತ್ತಿರುವ ಸಂಕೇತ ಮಾಯವಾಗಲಿದೆ.

ಡುಮರಾಂವ್ ಬ್ಲಾಕ್ ಕಚೇರಿಯ ಬಳಿ ಖಾನ್ ಸ್ಮರಣಾರ್ಥ ಸಭಾಂಗಣವೊಂದನ್ನು ನಿರ್ಮಿಸಲು ಜಿಲ್ಲಾಡಳಿತವು ಜಾಗವನ್ನು ಸ್ವಾಧೀನ ಪಡಿಸಿಕೊಂಡಿದೆ ಎಂದು ಡುಮರಾಂವ್ ಉಪವಿಭಾಗಾಧಿಕಾರಿ ಪ್ರಮೋದ್ ಕುಮಾರ್ ಅವರೇನೋ ತಿಳಿಸಿದ್ದಾರೆ. ಆದರೆ ಅದು ಎಂದು ಅಸ್ತಿತ್ವಕ್ಕೆ ಬರಲಿದೆ ಎನ್ನುವುದು ಯಾರಿಗೂ ತಿಳಿದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News