‘ಬಾತ್‌ರೂಮ್ ಪಾಲಿಟಿಕ್ಸ್ ನಿಲ್ಲಿಸಿ, ಹುದ್ದೆಯ ಘನತೆ ಕಾಪಾಡಿಕೊಳ್ಳಿ’
ಮುಂಬೈ, ಫೆ.13: ಬಾತ್‌ರೂಮ್ ಪಾಲಿಟಿಕ್ಸ್ ನಿಲ್ಲಿಸಿ, ತಮ್ಮ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳಿ. ವಿಪಕ್ಷಗಳ ಕುಂಡಲಿ(ಜಾತಕ) ಜಾಲಾಡುತ್ತೇನೆಂಬ ನಿಮ್ಮ ಬೆದರಿಕೆಯ ತಂತ್ರವನ್ನು ಮೊದಲು ನಿಲ್ಲಿಸಿ’’ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ.
ಸಿಂಗ್ ನೇತೃತ್ವದ ಯುಪಿಎ ಸರಕಾರದಲ್ಲಿ ಹಲವಾರು ಹಗರಣಗಳು ನಡೆದಿದ್ದವು.... 35 ವರ್ಷಗಳ ರಾಜಕಾರಣದಲ್ಲಿ ಕ್ಲೀನ್ ಇಮೇಜ್ ಹೇಗೆ ಕಾಪಾಡಿಕೊಳ್ಳಬೇಕೆಂದು ನಾವು ರಾಜಕಾರಣಿಗಳು ಡಾ.(ಮನಮೋಹನ್ ಸಿಂಗ್) ಸಾಹೇಬರಿಂದ ಕಲಿಯಲಿಕ್ಕಿದೆ. ಇಷ್ಟೊಂದು ಹಗರಣಗಳು ನಡೆದರೂ ಸಿಂಗ್ ಇಮೇಜ್‌ಗೆ ಧಕ್ಕೆಯಾಗಿಲ್ಲ. ಡಾ. ಸಾಹೇಬ್ ರೈಟ್‌ಕೋಟ್ ಧರಿಸಿ ಬಾತ್‌ರೂಮ್ ಸ್ನಾನ ಮಾಡುವ ಏಕೈಕ ವ್ಯಕ್ತಿಯಾಗಿದ್ದಾರೆ’’ ಎಂದು ಇತ್ತೀಚೆಗೆ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದರು.
ಶಿವಸೇನೆಯ ಮುಖವಾಣಿ ‘ಸಾಮ್ನಾ’ದಲ್ಲಿ ಪ್ರಕಟವಾಗಿರುವ ಪ್ರಮುಖ ಅಂಶಗಳು ಇಂತಿವೆ.
*ನರೇಂದ್ರ ಮೋದಿ ತಮ್ಮ ಪ್ರಧಾನಮಂತ್ರಿ ಹುದ್ದೆಯ ಘನತೆಯನ್ನು ಕಾಪಾಡಿಕೊಳ್ಳಬೇಕು.
*ಉತ್ತರ ಪ್ರದೇಶದ ರ್ಯಾಲಿಯೊಂದರಲ್ಲಿ ಪ್ರಧಾನಿಗಳು ರಾಜಕೀಯ ಪಕ್ಷಗಳ ಜನ್ಮ ಜಾಲಾಡುತ್ತೇನೆಂದು ಹೇಳಿರುವ ಹೇಳಿಕೆ ಅದೊಂದು ಚುನಾವಣೆ ಪ್ರಚಾರವಲ್ಲ. ಬದಲಿಗೆ ಪ್ರತಿಪಕ್ಷಗಳಿಗೆ ಪ್ರಧಾನಿಯ ನೇರ ಬೆದರಿಕೆಯಾಗಿದೆ.
*ಪ್ರತಿಪಕ್ಷಗಳು ಜನ್ಮ ಜಾಲಾಡಿದರೆ ಅದು ಅಧಿಕಾರವನ್ನು ದುರುಪಯೋಗ ಮಾಡಿದಂತಾಗುತ್ತದೆ. ರಾಜಕೀಯ ಪಕ್ಷಗಳ ಜನ್ಮ ಜಾಲಾಡಲು ಜನರು ನಿಮಗೆ ಮತ ಹಾಕಿದ್ದಲ್ಲ.
*ಮಹಾರಾಷ್ಟ್ರ ಮುಖ್ಯಮಂತ್ರಿಗಳು ಕೂಡ ಆಗಾಗ ಪ್ರತಿಪಕ್ಷಗಳ ಜನ್ಮಜಾಲಾಡುವ ಹೇಳಿಕೆ ನೀಡುತ್ತಾರೆ. ಆದರೆ, ನೀವು ಅಧಿಕಾರದಿಂದ ಕೆಳಗಿಳಿದ ಬಳಿಕ ನಿಮ್ಮ ಜಾತಕ ಬೇರೆಯವರ ಕೈಯಲ್ಲಿರುತ್ತದೆ ಎಂದು ನೆನಪಿಟ್ಟುಕೊಳ್ಳಿ.
*ಉತ್ತರಪ್ರದೇಶದಲ್ಲಿ ಮಹಿಳೆಯರು ಸಂಜೆಯ ವೇಳೆಯೂ ಹೊರಬಾರದ ಪರಿಸ್ಥಿತಿಯಿದೆ ಎಂದು ಪ್ರಧಾನಿಗಳು ಹೇಳಿಕೆ ನೀಡಿದ್ದಾರೆ. ಆ ರಾಜ್ಯದಲ್ಲಿ ಬಿಜೆಪಿಯ 70 ಸಂಸದರು ಇದ್ದಾರೆ. ಅವರೇನು ಮಾಡುತ್ತಿದ್ದಾರೆ? ಅವರು ಕೂಡ ಸಂಜೆ ವೇಳೆ ಬಾಗಿಲು ಬಂದ್ ಮಾಡಿಕೊಂಡು ಮನೆಯಲ್ಲಿ ಕೂರುತ್ತಾರೆಯೇ? ಬಿಜೆಪಿ ಸಂಸದರು ಉತ್ತರಪ್ರದೇಶ ಮಹಿಳೆಯರ ರಕ್ಷಣೆಗೆ ಬರಬೇಕಾಗಿದೆ.
*ಬೇರೆಯವರ ಬಾತ್‌ರೂಮ್‌ಗೆ ಇಟುಕಿ ನೋಡುವುದು ಒಳ್ಳೆಯದಲ್ಲ. ಅದನ್ನು ಮೊದಲು ನಿಲ್ಲಿಸಿ.