ಸೂರತ್: ಸ್ಲಾಬ್ ಕುಸಿದು ಮೂವರ ಸಾವು
ಸೂರತ್, ಫೆ.13: ಸೂರತ್‌ನ ಉಮರ್‌ವಾಡಾ ಬಡಾವಣೆಯಲ್ಲಿ ಶಿಥಿಲಗೊಂಡಿರುವ ಎರಡು ಕಟ್ಟಡಗಳನ್ನು ಸಂಪರ್ಕಿಸಿದ್ದ ಕಾಂಕ್ರೀಟ್ ಸ್ಲಾಬ್ ಕುಸಿದು ಬಿದ್ದ ಪರಿಣಾಮ ಮೂವರು ಸಾವನ್ನಪ್ಪಿದ್ದು, ಇತರ 22 ಜನರು ಗಾಯಗೊಂಡಿದ್ದಾರೆ.
ರವಿವಾರ ರಾತ್ರಿ ಕೆಲವು ವ್ಯಕ್ತಿಗಳು ಸ್ಲಾಬ್‌ನ ಕೆಳಗೆ ಕುಳಿತು ಮಾತನಾಡುತ್ತಿದ್ದಾಗ ಅದು ಭಾಗಶಃ ಕುಸಿದು ಅವರ ಮೈಮೇಲೆಯೇ ಬಿದ್ದಿತ್ತು.
ನಗರ ಪೌರ ಸಂಸ್ಥೆಯು ಸುಮಾರು ನಾಲ್ಕು ದಶಕಗಳ ಹಿಂದೆ ಕೊಳಗೇರಿ ಪುನರ್ವಸತಿ ಕಾರ್ಯಕ್ರಮದಡಿ ಈ ಪ್ರದೇಶದಲ್ಲಿಯ ಕಟ್ಟಡಗಳನ್ನು ನಿರ್ಮಿಸಿದ್ದು, ಅವೆಲ್ಲ ಶಿಥಿಲಗೊಂಡಿವೆ ಎಂದು ಸೂರತ್ ಮಹಾನಗರ ಪಾಲಿಕೆ ಆಯುಕ್ತ ಎಂ.ಥೆನ್ನರಸನ್ ಅವರು ಸೋಮವಾರ ಇಲ್ಲಿ ತಿಳಿಸಿದರು.
ಕಟ್ಟಡಗಳನ್ನು ತೆರವುಗೊಳಿಸುವಂತೆ 2014ರಲ್ಲಿಯೇ ಕಟ್ಟಡಗಳ ನಿವಾಸಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿತ್ತು. ಆದರೆ ಅವರು ನಿರಾಕರಿಸಿದ್ದರಿಂದ ಸ್ವಂತ ಖರ್ಚಿನಲ್ಲಿ ಕಟ್ಟಡಗಳ ಪುನರ್‌ನಿರ್ಮಾಣ ಮಾಡುವಂತೆ ಸೂಚಿಸಲಾಗಿತ್ತು. ಕೆಲವು ಕಟ್ಟಡಗಳು ಪುನರ್‌ನಿರ್ಮಾಣಗೊಂಡಿದ್ದು, ನಿವಾಸಿಗಳು ಅಲ್ಲಿಯೇ ವಾಸ್ತವ್ಯ ಮುಂದುವರಿಸಿದ್ದಾರೆ ಎಂದರು.
ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಶಮೂಮ್ ಶೇಖ್ ರಫೀಕ್(40), ರಿಝ್ವೆನಾಬಾನು ಸೈಯದ್(42) ಮತ್ತು ಜಮೀಲಾಬಾ ಅಬ್ದುಲ್ ಹಲೀಂ(45) ಅವರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.