ಎಸ್‌ಪಿ ಶಾಸಕನ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದ ಯುವತಿಯ ಕೊಲೆ
ಲಕ್ನೋ ,ಫೆ.13: 2013ರಲ್ಲಿ ಎಸ್‌ಪಿ ಶಾಸಕ ಅರುಣ್ ವರ್ಮಾ ಅವರು ಇತರ ಕೆಲವು ಯುವಕರೊಂದಿಗೆ ಸೇರಿಕೊಂಡು ತನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಆರೋಪಿಸಿದ್ದ 22ರ ಹರೆಯದ ಯುವತಿಯು ಸುಲ್ತಾನಪುರದ ತನ್ನ ನಿವಾಸದ ಬಳಿ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಶನಿವಾರದಿಂದ ನಾಪತ್ತೆಯಾಗಿದ್ದ ಈ ಯುವತಿಯ ಶವ ಸುಲ್ತಾನಪುರ ಬಳಿಯ ಜೈಸಿಂಗ್‌ಪುರದ ಪ್ರಾಥಮಿಕ ಶಾಲೆಯ ಬಳಿ ರವಿವಾರ ಪತ್ತೆಯಾಗಿದೆ. ಆಕೆಯ ಕತ್ತಿನ ಸುತ್ತ ಗಾಯದ ಗುರುತುಗಳಿದ್ದು, ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಮರಣೋತ್ತರ ಪರೀಕ್ಷೆಯ ಬಳಿಕ ನಿಖರವಾದ ಕಾರಣ ತಿಳಿಯಲಿದೆ ಎಂದರು.
ಫೆ.27ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಎಸ್‌ಪಿ ಅಭ್ಯರ್ಥಿಯಾಗಿರುವ ಸ್ಥಳೀಯ ಶಾಸಕ ವರ್ಮಾ 2013 ಸೆಪ್ಟೆಂಬರ್‌ನಲ್ಲಿ ಇತರ ಕೆಲವರೊಂದಿಗೆ ಸೇರಿಕೊಂಡು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು ಎಂದು ಕೊಲೆಯಾಗಿರುವ ಯುವತಿ ಆರೋಪಿಸಿದ್ದಳು.
ಒಂದು ಹಂತದಲ್ಲಿ ಯುವತಿ ತನ್ನ ದೂರನ್ನು ಹಿಂದೆಗೆದುಕೊಂಡಿದ್ದು, ತನಿಖೆ ನಡೆಸಿದ್ದ ಪೊಲೀಸರು ಕೆಲವು ಯುವಕರ ವಿರುದ್ಧ ಆರೋಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಇನ್ನೂ ಮುಂದುವರಿದಿದೆ.
ಕೊಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು, ಯುವತಿಯ ಮೊಬೈಲ್ ಪೋನಿನಲ್ಲಿಯ ಕರೆ ವಿವರಗಳನ್ನು ಪರಿಶೀಲಿಸುತ್ತಿದ್ದಾರೆ.