ಶಶಿಕಲಾರ ವರ್ತನೆ ವಡಿವೇಲ್‌ರ ಹಾಸ್ಯದಂತೆ : ಪನೀರ್ ಸೆಲ್ವಂ
ಚೆನ್ನೈ,ಫೆ.13: ತಮಿಳ್ನಾಡಿನಲ್ಲಿ ನಡೆಯುತ್ತಿರುವ ರಾಜಕೀಯ ನಾಟಕದ ನಡುವೆ ಶಶಿಕಲಾರನ್ನು ಕಟುವಾಗಿ ಟೀಕಿಸಿದ ಉಸ್ತುವಾರಿ ಮುಖ್ಯಮಂತ್ರಿಒ.ಪನೀರ್ ಸೆಲ್ವಂ ಶಾಸಕರನ್ನು ಸ್ವತಂತ್ರಗೊಳಿಸಲು ಆಗ್ರಹಿಸಿದ್ದಾರೆ.
ಶಶಿಕಲಾರ ವರ್ತನೆ ನಟ ವಡಿವೇಲು ಸಿನೆಮಾದಲ್ಲಿ ತೋರಿಸುವ ಹಾಸ್ಯದಂತಿದೆ ಎಂದು ಪನೀರ್ ಸೆಲ್ವರು ಹೇಳಿದ್ದಾರೆ. ತಾನೊಬ್ಬಳು ಚಿನ್ನ(ಸಣ್ಣ) ಸಿಂಹ ಎಂದು ಶಶಿಕಲಾ ಕಳೆದ ದಿವಸ ಹೇಳಿದ್ದರು. ಪನೀರ್ ಸೆಲ್ವಂ ಇದನ್ನು ವ್ಯಂಗ್ಯಮಾಡಿದ್ದಾರೆ.
ಯಾರಾದರೂ ತಾನೋರ್ವ ಸಿಂಹವೆನ್ನುತ್ತಾರಾ? ಶಶಿಕಲಾರ ಮಾತುಗಳನ್ನು ಕೇಳುವಾಗ ಪೊಲೀಸರು ಹಿಡಿದು ಜೀಪ್‌ನಲ್ಲಿ ಕುಳ್ಳಿರಿಸಿದ ವಡಿವೇಲು ತನ್ನನ್ನು ಜೈಲಿಗೆ ಪೊಲೀಸರು ಸ್ವಾಗತಿಸುತ್ತಿದ್ದಾರೆಂದು ಹೇಳುವ ಸಿನೆಮಾದೃಶ್ಯವು ನೆನಪಿಗೆ ಬರುತ್ತಿದೆ ಎಂದು ಪನೀರ್‌ಸೆಲ್ವಂ ಹೇಳಿದರು.
ಕೂವತ್ತೂರಿನ ರಿಸಾರ್ಟ್‌ನಲ್ಲಿರುವ ಕೆಲವು ಶಾಸಕರು ತನ್ನನ್ನು ಸಂಪರ್ಕಿಸಿದ್ದು ಓರ್ವ ಶಾಸಕರನ್ನು ನಾಲ್ಕು ಗೂಂಡಾಗಳು ಕಾಯುತ್ತಿದ್ದಾರೆ ಎಂದು ಪನೀರ್ ಸೆಲ್ವಂ ತಿಳಿಸಿದ್ದಾರೆ. ಅವರಿಂದ ತಪ್ಪಿಸಿ ರಿಸಾರ್ಟ್‌ಗೆ ಹೊರಗೆ ಬರಲು ಶಾಸಕರಿಗೆ ಸಾಧ್ಯವಾಗುತ್ತಿಲ್ಲ ಎಂದು ಪನೀರ್ ಸೆಲ್ವಂ ಆರೋಪಿಸಿದ್ದಾರೆ. ಯಾರನ್ನೂ ಹಿಡಿದಿಟ್ಟಿಲ್ಲ ಎಂದು ಮೊಸಳೆ ಕಣ್ಣೀರು ಸುರಿಸುವ ಬದಲು ಶಾಸಕರನ್ನು ಸ್ವಂತಮನೆಗಳಿಗೆ ತೆರಳಲು ಅನುಮತಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪೊಲೀಸರನ್ನು ಉಪಯೋಗಿಸಿ ಶಾಸಕರನ್ನು ಸ್ವತಂತ್ರಗೊಳಿಸಲುಪ್ರಯತ್ನಿಸಿದರೆ ದೊಡ್ಡ ಸಮಸ್ಯೆ ಸೃಷ್ಟಿಯಾಗಬಹುದೆನ್ನುವ ಕಾರಣದಿಂದ ತಾನು ಅದಕ್ಕೆಮುಂದಾಗಿಲ್ಲ. ಜಯಲಲಿತಾರು ಎಪ್ಪತ್ತೈದು ದಿವಸ ಆಸ್ಪತ್ರೆಯಲ್ಲಿ ಮಲಗಿದ್ದರು. ಅವರನ್ನು ಶಶಿಕಲಾ ಅಲ್ಲದೆ ಬೇರೆಯಾರೂ ಭೇಟಿಯಾಗಿಲ್ಲ. ಅವರ ಆರೋಗ್ಯದ ಕುರಿತು ಹಲವು ಊಹಾಪೋಹಗಳು ಹರಡಿದವು. ಹೀಗಿರುವಾಗ ಅಂದು ಪತ್ರಿಕಾಗೋಷ್ಠಿ ಕರೆದು ಆ ವಿಷಯವನ್ನು ಯಾಕೆ ಸ್ಪಷ್ಟಪಡಿಸಿಲ್ಲ ಎಂದು ಪನೀರ್ ಸೆಲ್ವಂ ಪ್ರಶ್ನಿಸಿದರು.
ಕಳೆದ 16 ವರ್ಷಗಳಿಂದ ಶಶಿಕಲಾ ತನಗೆ ಮೋಸ ಮಾಡುತ್ತಿದ್ದಾರೆ. ಇನ್ನು ಜಯಲಲಿತಾ ಯಾರೊಂದಿಗೂ ಪ್ರೀತಿಯಿಂದ ವರ್ತಿಸುವುದು ಶಶಿಕಲಾಗೆ ಇಷ್ಟವಿರಲಿಲ್ಲ ಎಂದು ಪನೀರ್‌ಸೆಲ್ವಂ ಹೇಳಿದ್ದಾರೆ. ಜಯಲಲಿತಾರ ಸಹೋದರ ಪುತ್ರಿ ದೀಪಾರಿಗೆ ಆದ ಕೆಟ್ಟ ಅನುಭವವನ್ನು ಪನೀರ್‌ಸೆಲ್ವಂ ಬೆಟ್ಟು ಮಾಡಿದ್ದಾರೆ. ಜಯಲಲಿತಾರ ರಕ್ತಸಂಬಂಧಿಯಾದ ದೀಪಕ್‌ರನ್ನು ಮತ್ತು ದೀಪಾರನ್ನು ಎಲ್ಲ ಕಾಲದಲ್ಲಿಯೂ ಹತ್ತಿರವಾಗದಂತೆ ಶಶಿಕಲಾ ನೋಡಿಕೊಂಡಿದ್ದಾರೆ. ಜಯಲಲಿತಾ ಮೃತಪಟ್ಟದಿವಸ ದೀಪಾ ವೇದ ನಿಲಯಕ್ಕೆ ಬಂದರೂ ದೀಪರನ್ನುಒಳಗೆ ಬಿಡಲಿಲ್ಲ. ತನ್ನ ಆಂಟಿ ಮೃತಪಟ್ಟಿದ್ದರೂ ಅವರನ್ನು ನೋಡಲು ಬಿಡಲಿಲ್ಲ ಎಂದು ಹೇಳುತ್ತಾ ದೀಪಾ ಮರಳಿಹೋಗಿದ್ದಾರೆ ಎಂದು ಪನೀರ್ ಸೆಲ್ವಂ ಹೇಳಿದರು.
ಪಕ್ಷದ ಶಾಸಕರ ಸಭೆ ನಡೆದಾಗ ತನ್ನನ್ನು ಇತರ ಶಾಸಕರ ಜೊತೆ ಶಶಿಕಲಾ ಕುಳ್ಳಿರಿಸಿದರು. ಶಶಿಕಲಾ ವಿಶೇಷ ಕುರ್ಚಿಯಲ್ಲಿ ಕುಳಿತಿದ್ದರು. ತಾನು ಮುಖ್ಯಮಂತ್ರಿಯಾಗಿದ್ದೂ ತನಗೆ ಯಾವುದೇ ಪರಿಗಣನೆ ನೀಡಲಿಲ್ಲ. ಈ ಬಗ್ಗೆ ಕೆಲವು ಶಾಸಕರು ತನ್ನೊಡನೆ ಕೇಳಿದ್ದಾರೆ.ಆದರೆ ಪಾರ್ಟಿಗೆ ತೊಂದರೆಯಾಗಬಾರದೆಂದು ಇದನ್ನೆಲ್ಲವನ್ನೂ ಸಹಿಸಿಕೊಂಡೆ ಎಂದು ಪನೀರ್ ಸೆಲ್ವಂ ಹೇಳಿದ್ದಾರೆ. ಶಶಿಕಲಾರನ್ನು ಪಾರ್ಟಿಗೆ ಪುನಃ ತೆಗೆದಿದ್ದರೂ ಅವರೊಡನೆ ಬೆರೆಯಬಾರದೆಂದು ಜಯಲಲಿತಾ ನನಗೆ ಸೂಚನೆ ನೀಡಿದ್ದರೆಂದು ಪನೀರ್‌ಸೆಲ್ವಂ ಹೇಳಿರುವುದಾಗಿ ವರದಿಯಾಗಿದೆ.