×
Ad

ಮಹಿಳೆಯರ ಮಾನ ಅಳೆಯಲು ಹೊರಟ ಪತಂಜಲಿ ಜಾಹೀರಾತು: ಆಕ್ರೋಶ

Update: 2017-02-13 15:21 IST

ಹೊಸದಿಲ್ಲಿ, ಫೆ.13: ಹಲವಾರು ಉತ್ಪನ್ನಗಳನ್ನು ಈಗಾಗಲೇ ಬಿಡುಗಡೆಗೊಳಿಸಿರುವ ಬಾಬಾ ರಾಮದೇವ್ ಅವರ ಪತಂಜಲಿ ಇತ್ತೀಚೆಗೆ ಸೌಂದರ್ಯ ವರ್ಧಕಗಳನ್ನೂ ಬಿಡುಗಡೆಗೊಳಿಸಿದೆ. ಆದರೆ ಈ ಸೌಂದರ್ಯ ಪ್ರಸಾಧನಗಳು ಜನತೆ ಅಂಗಡಿಗಳಿಂದ ಖರೀದಿಸುವ ಮುನ್ನವೇ ಅವುಗಳಿಗೆ ಸಂಬಂಧಪಟ್ಟ ಜಾಹೀರಾತು ವಿವಾದಕ್ಕೊಳಗಾಗಿದೆ. ಪತಂಜಲಿ ಜಾಹೀರಾತು ಮಹಿಳೆಯರ ಮಾನ ಅಳೆಯಲು ಹೊರಟಿದೆಯೆಂದು ಹಲವರು ಆಕ್ರೋಶ ವ್ಯಕ್ತಪಡಿಸಲಾರಂಭಿಸಿದ್ದಾರೆ.

ಪತಂಜಲಿಯ ಇತ್ತೀಚಿಗಿನ ಜಾಹೀರಾತೊಂದು ಮಹಿಳೆಯರನ್ನು ಅವರು ಬಳಸುವ ಸೌಂದರ್ಯವರ್ಧಕಗಳು ಹಾಗೂ ಸುಂದರತೆಯ ಆಧಾರದಲ್ಲಿ ಅಳೆಯುವುದು ಹಲವರಿಗೆ ಹಿಡಿಸಿಲ್ಲ.

ಈ ಜಾಹೀರಾತಿನಲ್ಲಿ ಸೌಂದರ್ಯ ಹಾಗೂ ಐಶ್ವರ್ಯ ಎಂಬ ಇಬ್ಬರು ಸಹೋದರಿಯರನ್ನು ತೋರಿಸಲಾಗಿದೆ. ಸೌಂದರ್ಯಳನ್ನು ಪರಂಪರೆಯನ್ನು ಪಾಲಿಸುವವಳಾಗಿ ತೋರಿಸಲಾಗಿದ್ದರೆ ಐಶ್ವರ್ಯಾ ಬಿಂದಾಸ್ ಪ್ರವೃತ್ತಿಯವಳು. ಸೌಂದರ್ಯ ಪತಂಜಲಿ ಉತ್ಪನ್ನಗಳನ್ನು ಉಪಯೋಗಿಸಿ ಅವಳ ತ್ವಚ್ಛೆ ಕಾಂತಿಯುತವಾಗಿದ್ದರೆ, ಐಶ್ವರ್ಯ ರಾಸಾಯನಿಕಗಳಿಂದ ತಯಾರಿಸಲಾದ ಸೌಂದರ್ಯವರ್ಧಕಗಳನ್ನು ಬಳಸಿ ಅವಳ ಮುಖದ ತುಂಬೆಲ್ಲಾ ಮೊಡವೆಗಳಿವೆಯೆಂಬಂತೆ ತೋರಿಸಲಾಗಿದೆಯಲ್ಲದೆ ಅವಳ ತ್ವಚ್ಛೆಯಿಂದಾಗಿ ಅವಳು ಕಾಲೇಜಿನಲ್ಲಿ ಅಪಹಾಸ್ಯಗೊಳಗಾಗುತ್ತಾಳೆ. ಕೊನೆಗೆ ಸೌಂದರ್ಯ ತನ್ನ ಸಹೋದರಿಯ ರಕ್ಷಣೆಗೆ ಬಂದು ಆಕೆ ಪತಂಜಲಿ ಉತ್ಪನ್ನಗಳನ್ನು ಉಪಯೋಗಿಸುವಂತೆ ಮಾಡುತ್ತಾಳೆಂದು ಈ ಜಾಹೀರಾತಿನಲ್ಲಿ ತೋರಿಸಲಾಗಿದೆ.

ಇಲ್ಲಿ ಬಿಂದಾಸ್ ಎಂಬ ಪದದ ಜೊತೆಗೆ ಬಿಂದಾಸ್ ಇರುವವರು ಪತಂಜಲಿ ಉತ್ಪನ್ನಗಳನ್ನು ಉಪಯೋಗಿಸುತ್ತಿಲ್ಲ ಹಾಗೂ ಅವರ ಮುಖಗಳು ಮೊಡವೆಗಳಿಂದ ತುಂಬಿದೆಯೆಂಬರ್ಥದಲ್ಲಿ ತೋರಿಸಿದ್ದು ಅನೇಕರಿಗೆ ಸಹ್ಯವಾಗಿಲ್ಲ.

ಈಗಾಗಲೇ ಹಲವು ಗೌರವರ್ಣ ಕ್ರೀಮುಗಳ ಜಾಹೀರಾತುಗಳು ಗೌರವರ್ಣವಿಲ್ಲದ ಯುವತಿಯರು ಅಭದ್ರತೆಯ ಭಾವನೆ ಹೊಂದಿರುತ್ತಾರೆ ಹಾಗೂ ಅವರು ಫೇರ್‌ನೆಸ್ ಕ್ರೀಮ್ ಗಳನ್ನು ಉಪಯೋಗಿಸಬೇಕೆಂದು ಹೇಳುವುದು ಚರ್ಚೆ ವಿಚಾರವಾಗಿರುವಾಗಲೇ ಪತಂಜಲಿಯಿಂದ ಇಂತಹ ಒಂದು ಜಾಹೀರಾತು ವಿವಾದಕ್ಕೀಡಾಗಿರುವುದು ಆಶ್ಚರ್ಯವೇನಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News