ಮತದಾನೋತ್ತರ ಸಮೀಕ್ಷೆಗಳ ಪ್ರಕಟಣೆ ಕಾನೂನಿಗೆ ವಿರುದ್ಧ: ಚುನಾವಣಾ ಆಯೋಗ
ಹೊಸದಿಲ್ಲಿ,ಫೆ.13: ಖಾಸಗಿ ಸಂಸ್ಥೆಯೊಂದು ಮತದಾನೋತ್ತರ ಸಮೀಕ್ಷೆಗಳನ್ನು ನಡೆಸಿ ದೈನಿಕದಲ್ಲಿ ಫಲಿತಾಂಶಗಳನ್ನು ಪ್ರಕಟಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗವು ವಿಧಾನಸಭಾ ಚುನಾವಣೆಗಳು ಇನ್ನೂ ಪ್ರಗತಿಯಲ್ಲಿ ರುವುದರಿಂದ ಇದು ಚುನಾವಣಾ ಕಾನೂನುಗಳ ಉಲ್ಲಂಘನೆಯಾಗಿದೆ ಎಂದು ಸೋಮವಾರ ಹೇಳಿದೆ.
ರಿಸೋರ್ಸ್ ಡೆವಲಪ್‌ಮೆಂಟ್ ಇಂಟರ್‌ನ್ಯಾಷನಲ್ ಮತದಾನೋತ್ತರ ಸಮೀಕ್ಷೆ ಯನ್ನು ನಡೆಸಿದ್ದು, ಅದರ ಫಲಿತಾಂಶವನ್ನು ಹಿಂದಿ ದೈನಿಕವೊಂದು ಪ್ರಕಟಿಸಿದೆ. ಇದು ಜನತಾ ಪ್ರಾತಿನಿಧ್ಯ ಕಾಯ್ದೆಯ 126ಎ ಮತ್ತು ಬಿ ಕಲಮ್‌ಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಮತ್ತು ಐಪಿಸಿಯ ಕಲಂ 188ರಡಿ ಚುನಾವಣಾ ಆಯೋಗದ ಶಾಸನಬದ್ಧ ನಿರ್ದೇಶನಗಳ ಉದ್ದೇಶಪೂರ್ವಕ ಕಡೆಗಣನೆಯಾಗಿದೆ ಎಂದು ಹೇಳಿದ ಆಯೋಗದ ವಕ್ತಾರರು, ಈ ಬಗ್ಗೆ ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿಯಿಂದ ವರದಿಯನ್ನು ಕೇಳಲಾಗಿದೆ ಎಂದು ತಿಳಿಸಿದರು.
ಮತದಾನೋತ್ತರ ಸಮೀಕ್ಷೆಗಳು ಮತದಾರರ ಮೇಲೆ ಪ್ರಭಾವ ಬೀರದಂತಿರಲು ಆಯೋಗವು ಜನತಾ ಪ್ರಾತಿನಿಧ್ಯ ಕಾಯ್ದೆಯಡಿ ತನಗಿರುವ ಅಧಿಕಾರವನ್ನು ಬಳಸಿಕೊಂಡು ಫೆ.4ರಿಂದ ಮಾ.8ರ ಸಂಜೆ 5:30ರವರೆಗೆ ಅವುಗಳನ್ನು ನಿಷೇಧಿಸಿದೆ.
ಈವರೆಗೆ ಗೋವಾ ಮತ್ತು ಪಂಜಾಬ್‌ಗಳಲ್ಲಿ ವಿಧಾನಸಭಾ ಚುನಾವಣೆಗಳು ಪೂರ್ಣ ಗೊಂಡಿವೆ. ಉತ್ತರ ಪ್ರದೇಶದಲ್ಲಿ ಒಂದು ಹಂತದ ಮತದಾನ ನಡೆದಿದ್ದು, ಇನ್ನೂ ಆರು ಹಂತಗಳು ಬಾಕಿಯಿವೆ. ಉತ್ತರಾಖಂಡ ಮತ್ತು ಮಣಿಪುರಗಳಲ್ಲಿ ಚುನಾವಣೆಗಳು ಇನ್ನಷ್ಟೇ ನಡೆಯಬೇಕಿವೆ.