×
Ad

ರೆಸಾರ್ಟ್‌ನ ಹೊರಗೆ ತಮ್ಮ ಕುಟುಂಬ ಸದಸ್ಯರನ್ನು ಭೇಟಿಯಾದ ಶಶಿಕಲಾ ನಿಷ್ಠ ಎಐಎಡಿಎಂಕೆ ಶಾಸಕರು

Update: 2017-02-13 16:19 IST

ಚೆನ್ನೈ, ಫೆ.13: ಸುಮಾರು 100 ಎಐಎಡಿಎಂಕೆ ಶಾಸಕರು ಮಹಾಬಲಿಪುರಂ ಸಮೀಪದ ಕೂವತ್ತೂರಿನ ಐಷಾರಾಮಿ ರೆಸಾರ್ಟ್‌ನಲ್ಲಿ ತಮ್ಮ ‘ರಜಾ’ ಮೋಜನ್ನು ಆರನೇ ದಿನವಾದ ಸೋಮವಾರವೂ ಮುಂದುವರಿಸಿದ್ದಾರೆ. ಇದೇ ವೇಳೆ ತಮಿಳುನಾಡು ಬಿರುಸಿನ ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಗಿದ್ದು, ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಅವರು ಶಾಸಕರನ್ನು ಬಿಡುಗಡೆಗೊಳಿಸುವಂತೆ ಪಕ್ಷದ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ಅವರಿಗೆ ಸವಾಲು ಹಾಕಿದ್ದಾರೆ.

ಶಶಿಕಲಾ ಅವರು ಶಾಸಕರಿಗೆ ಸಂಪೂರ್ಣ ಸ್ವಾತಂತ್ರವನ್ನು ನೀಡಿದ್ದಾರೆ ಮತ್ತು ಕೆಲವು ಸದಸ್ಯರು ರೆಸಾರ್ಟ್‌ನ ಹೊರಗೆ ತೆರಳಿ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಯಾಗಿದ್ದಾರೆ. ರೆಸಾರ್ಟ್‌ನಲ್ಲಿ ಅಲ್ಪ ಅವಧಿಗೆ ವಾಸ್ತವ್ಯಕ್ಕಾಗಿ ತಮ್ಮ ಕುಟುಂಬ ಸದಸ್ಯರನ್ನು ಆಹ್ವಾನಿಸಲು ಕೆಲವು ಶಾಸಕರಿಗೆ ಅನುಮತಿಯನ್ನೂ ನೀಡಲಾಗಿದೆ ಎಂದ ಮೂಲಗಳು ತಿಳಿಸಿದವು.

ರವಿವಾರ ಮಧ್ಯಾಹ್ನದವರೆಗೂ ರೆಸಾರ್ಟ್ ಬಳಿ ಪೊಲೀಸರು ಬೆರಳೆಣಿಕೆ ಸಂಖೆಯಲ್ಲಿದ್ದರಾದರೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮವಾಗಿ ಅವರ ಬಲವನ್ನು ಹೆಚ್ಚಿಸಲಾಗಿದೆ. ಸತತ ನಾಲ್ಕನೇ ದಿನವೂ ರೆಸಾರ್ಟ್ ಪ್ರವೇಶಿಸದಂತೆ ತಮ್ಮನ್ನು ತಡೆಯುತ್ತಿರುವುದನ್ನು ಮತ್ತು ಕೆಲವು ಗೂಂಡಾಗಳು ತಮ್ಮಿಂದಿಗೆ ಅನುಚಿತವಾಗಿ ನಡೆದುಕೊಂಡಿದ್ದನ್ನು ವಿರೋಧಿಸಿ ಪತ್ರಕರ್ತರು ರವಿವಾರ ಪ್ರತಿಭಟನೆ ಯನ್ನೂ ನಡೆಸಿದ್ದರು.

ತನ್ಮಧ್ಯೆ ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ಪೊಲೀಸ್ ಅಧಿಕಾರಿಗಳು ರೆಸಾರ್ಟ್‌ನಲ್ಲಿರುವ ಶಾಸಕರ ಹೇಳಿಕೆಗಳನ್ನು ಪಡೆದುಕೊಂಡು ಸೋಮವಾರ ಅವುಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News