ರಾಕೇಶ್ ಶರ್ಮ ಆಧರಿತ ಆಮಿರ್ ನೂತನ ಚಿತ್ರದ ಹೆಸರು ' ಸಾರೆ ಜಹಾಂಸೆ ಅಚ್ಛಾ ' ಅಲ್ಲ. ಅದು ...

Update: 2017-02-13 13:34 GMT

ಮುಂಬೈ, ಫೆ. 13 : ಸೂಪರ್ ಸ್ಟಾರ್ ಆಮಿರ್ ಖಾನ್ ನಟಿಸಲಿರುವ ಭಾರತದ ಪ್ರಪ್ರಥಮ ಬಾಹ್ಯಾಕಾಶ ಯಾನಿ ರಾಕೇಶ್ ಶರ್ಮ ಅವರ ಜೀವನ ಆಧರಿತ ಚಿತ್ರದ ಹೆಸರು ಬದಲಾವಣೆಯಾಗಿದೆ ಎಂದು ಸುದ್ದಿ ಹರಡಿದೆ . ದಂಗಲ್ ಚಿತ್ರದ ಅಭೂತಪೂರ್ವ ಯಶಸ್ಸಿನ ಬಳಿಕ ಆಮಿರ್ ರ ಈ ಹೊಸ ಚಿತ್ರ ಭಾರೀ ಕುತೂಹಲ ಕೆರಳಿಸಿದೆ . ಮೊದಲು ' ಸಾರೆ ಜಹಾಂಸೆ ಅಚ್ಛಾ ' ಎಂದು ಈ ಚಿತ್ರಕ್ಕೆ ಹೆಸರಿಡಲಾಗುವುದು ಎಂದು ಹೇಳಲಾಗಿತ್ತು . ಆದರೆ ಈಗ ಅದು ' ಸೆಲ್ಯೂಟ್ ' ಎಂದು ಬದಲಾಗಿದೆ ಎಂದು ತಿಳಿದು ಬಂದಿದೆ . 

ಮಹೇಶ್ ಮಥಾಯ್ ನಿರ್ದೇಶನದ ಈ ಚಿತ್ರವನ್ನು ಸಿದ್ಧಾರ್ಥ್ ರಾಯ್ ಕಪೂರ್ ನಿರ್ಮಿಸಲಿದ್ದಾರೆ ಎಂದು ಹೇಳಲಾಗಿದೆ . ಬಾಹ್ಯಾಕಾಶದಿಂದ ಭಾರತ ಹೇಗೆ ಕಾಣುತ್ತದೆ ಎಂದು ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ರಾಕೇಶ್ ಶರ್ಮ ಅವರನ್ನು ಕೇಳಿದಾಗ ಅವರು ಹೇಳಿದ್ದು  ' ಸಾರೆ ಜಹಾಂಸೆ ಅಚ್ಛಾ (ವಿಶ್ವದಲ್ಲೇ ಶ್ರೇಷ್ಠ )' . ಅದನ್ನೇ ಚಿತ್ರದ ಹೆಸರಾಗಿ ಇಡಲು ನಿರ್ಧರಿಸಲಾಗಿತ್ತು . ಆದರೆ ಈಗ ಅದು ಬದಲಾಗಿ ಸೆಲ್ಯೂಟ್ ಹೆಸರು ಅಂತಿಮಗೊಂಡಿದೆ ಎಂದು ತಿಳಿದು ಬಂದಿದೆ. 

ಮಹೇಶ್ ಮಥಾಯ್ ಜಾಹೀರಾತುಗಳನ್ನು ಮಾಡುವ ಮೂಲಕ ಪ್ರಸಿದ್ಧಿಗೆ ಬಂದವರು . ಭೋಪಾಲ್ ಅನಿಲ ದುರಂತದ ಕುರಿತ ಅವರ ಚಿತ್ರ 1999 ರಲ್ಲಿ ಬಂದ ಭೋಪಾಲ್ ಎಕ್ಸ್ ಪ್ರೆಸ್ ಗಮನ ಸೆಳೆದಿತ್ತು . ಈಗ ಬಾಲಿವುಡ್ ನ ಅತ್ಯಂತ ಯಶಸ್ವಿ ಸ್ಟಾರ್ ರನ್ನು ನಿರ್ದೇಶಿಸಿ ವಿಶಿಷ್ಟ ಚಿತ್ರವೊಂದನ್ನು ನೀಡಲು ಮಹೇಶ್ ಮುಂದಾಗಿದ್ದಾರೆ . 

ದಂಗಲ್ ಈಗಾಗಲೇ ಬಾಲಿವುಡ್ ನ ಸಾರ್ವಕಾಲಿಕ ಅತಿಹೆಚ್ಚು ಸಂಪಾದನೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ಅದರ ಬೆನ್ನಲ್ಲೇ ಈಗ ಈ ಹೊಸ ಚಿತ್ರಕ್ಕಾಗಿ ಆಮಿರ್ ಆಗಲೇ ತಯಾರಿ ಶುರು ಮಾಡಿದ್ದಾರೆ ಎಂದು ಹೇಳಲಾಗಿದೆ . 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News