ಶಾರುಕ್ ಆಸ್ಕರ್ ಪುರಸ್ಕಾರಕ್ಕೆ ಅರ್ಹ: ಪೌಲೊ ಕೊಯ್ಲೊ

Update: 2017-02-13 12:52 GMT

ಹೊಸದಿಲ್ಲಿ,ಫೆ. 13: ಬಾಲಿವುಡ್ ತಾರೆ ಶಾರುಕ್‌ಖಾನ್ ಆಸ್ಕರ್ ಪುರಸ್ಕಾರಕ್ಕೆ ಅರ್ಹವ್ಯಕ್ತಿ ಎಂದು ಬ್ರೆಝಿಲ್‌ನ ಪ್ರಮುಖ ಲೇಖಕ ಪೌಲೊ ಕೊಯ್ಲೊ ಹೇಳಿದ್ದಾರೆ. ಮೈನೇಮ್ ಈಸ್ ಖಾನ್ ಎನ್ನುವ ಸಿನೆಮಾ ನಟನೆಗೆ ಶಾರುಕ್‌ಗೆ ಆಸ್ಕರ್ ನೀಡಬೇಕೆಂದು ಕೊಯ್ಲೊ ಅಭಿಪ್ರಾಯವಾಗಿದೆ.

ಕರಣ್ ಜೋಹರ್ ನಿರ್ದೇಶನದ ಮೈನೇಮ್ ಈಸ್ ಖಾನ್ 2010ರಲ್ಲಿ ತೆರೆಕಂಡಿತ್ತು. ಚಿತ್ರವನ್ನು ನೋಡಿದ ಕೊಯ್ಲೊ ಚಿತ್ರವನ್ನು ಮತ್ತು ಶಾರುಕ್‌ರ ನಟನೆಯನ್ನು ಹೊಗಳಿ ವರ್ಷದ ಹಿಂದೆ ತನ್ನ ಫೇಸ್ ಬುಕ್‌ನಲ್ಲಿ ಬರೆದಿದ್ದ ಮಾತುಗಳು ಈಗ ದೊಡ್ಡ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ.

ಮೈನೇಮ್ ಈಸ್ ಖಾನ್‌ ಬಿಡುಗಡೆಯಾಗಿ ಏಳು ವರ್ಷಗಳ ನಂತರ ಚಿತ್ರವನ್ನು ನೆನೆಸಿಕೊಂಡು ಪೌಲೊ ಕೊಯ್ಲೊ ಟ್ವೀಟ್ ಮಾಡಿದ್ದರು. ಈ ಟ್ವೀಟ್‌ನೊಂದಿಗೆ ತನ್ನ ಆ ಹಳೆಯ ಫೇಸ್‌ಬುಕ್ ಪೋಸ್ಟನ್ನು ಕೂಡಾ ಅವರು ಪೋಸ್ಟ್ ಮಾಡಿದ್ದಾರೆ. ಹಾಲಿವುಡ್ ಪಕ್ಷಪಾತವಿಲ್ಲದೆ ಆಸ್ಕರ್ ಪ್ರಶಸ್ತಿ ನೀಡುವುದಾದರೆ ಮೈನೇಮ್ ಈಸ್ ಖಾನ್ ನಟನೆಗಾಗಿ ಶಾರುಕ್ ಖಂಡಿತವಾಗಿ ಆಸ್ಕರ್ ಪ್ರಶಸ್ತಿಗೆ ಅರ್ಹರು ಎಂದು ಕೊಯ್ಲೊ ಬರೆದಿದ್ದಾರೆ.

ಪೌಲೊ ಕೊಯ್ಲೊ ರ ಮಾತುಗಳು ತನಗೆ ದೊಡ್ಡ ಅಂಗೀಕಾರವೆಂದು ಕರಣ್ ಜೋಹರ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ವರ್ಲ್ಡ್‌ಟ್ರೇಡ್ ಸೆಂಟರ್ ಧ್ವಂಸದ ಬಳಿಕ ಅಮೆರಿಕದಲ್ಲಿ ಮುಸ್ಲಿಮರು ಅನುಭವಿಸಿದ ಸಂಕಷ್ಟಗಳನ್ನು ಚಿತ್ರ ಚರ್ಚಿಸಿತ್ತು. ಚಿತ್ರದ ವಿಷಯ ಈಗಲೂ ಪ್ರಸಕ್ತವಾಗಿದೆ ಎಂದು ಶಾರುಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News