ದಕ್ಷಿಣ ಮುಂಬೈಯ ಸಾಮಾಜಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಕ್ಷೇತ್ರ -ಮದನ್‌ಪುರ

Update: 2017-02-14 06:02 GMT

ದಕ್ಷಿಣ ಮುಂಬೈಯ ಮದನ್‌ಪುರ (ನಾಗ್‌ಪಾಡಾದ ಪಕ್ಕದಲ್ಲಿರುವ) ಕ್ಷೇತ್ರವು ಮುಸ್ಲಿಂ ಬಾಹುಳ್ಯವಿರುವ ಕ್ಷೇತ್ರ. ಒಂದು ಕಾಲದಲ್ಲಿ ಮುಂಬೈ ನಗರದ ಸಾಮಾಜಿಕ, ಸಾಂಸ್ಕೃತಿಕ, ಸಾಹಿತ್ಯಕ ಮತ್ತು ರಾಜಕೀಯ ರಂಗದಲ್ಲಿ ಸದ್ದು ಮಾಡಿದ ಸ್ಥಳವಾಗಿತ್ತು. ನೌಟಂಕಿ, ಕಜ್ರೀ, ಬಿರ್‌ಹಾ.... ಮುಂತಾದ ಉತ್ತರ ಭಾರತೀಯ ಮನರಂಜನೆಗಳ ಆಯೋಜನೆಯು ಬಹಳವಾಗಿ ನಡೆಯುತ್ತಿದ್ದ ಕ್ಷೇತ್ರವಿದು. ಉರ್ದುವಿನ ಬಹುದೊಡ್ಡ ತಾಣ ಎನ್ನಬಹುದು. ‘ಇನ್ಕ್ವಿಲಾಬ್’, ‘ಉರ್ದು ಟೈಮ್ಸ್’, ‘ಹಿಂದುಸ್ಥಾನ್ ಉರ್ದು ಡೈಲಿ’, ‘ಆಜ್ ಅಕ್ಸರ್’....ಇಂತಹ ಪತ್ರಿಕೆಗಳ ತಾಣ. ಅನೇಕ ಉರ್ದು ಸಾಹಿತಿಗಳು ಸಿನೆಮಾ ತಾರೆಯರು ಮದನ್‌ಪುರ ಕ್ಷೇತ್ರವನ್ನು ತಮ್ಮ ತಾಣವನ್ನಾಗಿಸಿದವರು.

ಹೌದು, ಮುಂಬೈ ಶಹರದ ಸಾಹಿತ್ಯಕ ಮತ್ತು ಸಾಂಸ್ಕೃತಿಕ ತಾಣವಾಗಿತ್ತು ಈ ಮದನ್‌ಪುರ. ಪಕ್ಕದ ಮಿರ್ಜಾ ಗಾಲಿಬ್ ರೋಡ್‌ನಲ್ಲಿ ಸಾದಾತ್ ಹಸನ್ ಮಾಂಟೋ ವಾಸಿಸುತ್ತಿದ್ದರು. ಒಂದಿಷ್ಟು ದೂರದ ಭಿಂಡಿ ಬಝಾರ್ ಕೈಫಿ ಆಜ್ಮಿ, ಮಜರ್ಹೂ ಸುಲ್ತಾನ್ ಪುರಿ, ಕಮಾಲ್ ಅಮ್ರೋಹಿ, ಜಾವೇದ್ ಅಖ್ತರ್‌ರ ಮೆಹಫಿಲೆಯ ಆಕರ್ಷಣೆ. ಸಲೀಲ್ ಚೌಧರಿ, ಬಲರಾಜ್ ಸಾಹ್ನಿ, ಭರತ್ ಭೂಷಣ್, ಜೈರಾಜ್.... ಇಂತಹ ಫಿಲ್ಮ್ ಸ್ಟಾರ್‌ಗಳು ಇಲ್ಲಿ ಸಮಯ ಕಳೆದವರು. ಮುಸ್ಲಿಂ ಲೀಗ್‌ನ ಮುಹಮ್ಮ್ಮದ್ ಅಲಿ ಜಿನ್ನಾರ ಸದ್ದು ಮೊಳಗಿದ ಜಾಗ. ಅಷ್ಟೇ ಅಲ್ಲ, ಮುಂಬೈಯಲ್ಲಿ ಕಮ್ಯುನಿಸ್ಟ್ ಆಂದೋಲನದ ತಾಣವೂ ಆಗಿತ್ತು. ಪ್ರಗತಿಶೀಲ ಲೇಖಕ ಆಂದೋಲನವೂ ಇಲ್ಲಿಂದಲೇ ಹರಡಿತ್ತು.

ಕೆಳಗಡೆ ಲೆದರ್‌ಪರ್ಸ್, ಬ್ಯಾಗ್, ಸೂಟ್‌ಕೇಸ್ ತಯಾರಿಸುವ ಸಾಮಾನು ಮತ್ತು ಫಿಟಿಂಗ್ಸ್ ಮಾರಾಟದ ಅಂಗಡಿಗಳು, ಜನರಲ್ ಸ್ಟೋರ್‌ಗಳು, ಮೇಲ್ಗಡೆ ಚಿಕ್ಕ ಚಿಕ್ಕ ಕೋಣೆಗಳಲ್ಲಿ ಕೆಳಮಧ್ಯಮ ವರ್ಗದ ಪರಿವಾರಗಳು ಬದುಕುತ್ತಿದ್ದ ಆ ದಿನಗಳು. ಆದರೆ ಇಂದು ತನ್ನ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಇದು ಕಳೆದುಕೊಂಡಿದೆ. ಇದನ್ನು ಗಮನಿಸಿ ಎನ್.ಜಿ.ಒ. ‘ಉರ್ದು ಮರ್ಕಝ್’ನ ಡೈರೆಕ್ಟರ್ ಝುಬೇರ್ ಆಜ್ಮಿಯವರ ‘ಮದನ್‌ಪುರ ವಿಕಾಸ್ ಮಂಚ್’ ತನ್ನ ಹಳೆಯ ವಾತಾವರಣವನ್ನು ಮತ್ತೆ ಕಾಣಿಸಲು ಪ್ರಯತ್ನದಲ್ಲಿದೆ. ಕ್ಷೇತ್ರದ ವಿದ್ಯಾರ್ಥಿ ಮತ್ತು ಕಿಶೋರರಿಗೆ ಅವರ ಪಾಠ ಓದಿನಲ್ಲಿ ಸಹಾಯ ಮಾಡುವುದರ ಜೊತೆ ಅವರ ಸಾಂಸ್ಕೃತಿಕ ಪ್ರತಿಭೆಯನ್ನು ಬೆಳಕಿಗೆ ತರುವಲ್ಲಿ ಪ್ರಯತ್ನ ಆರಂಭಿಸಿದೆ. ಇದಕ್ಕಾಗಿ ವಿಶೇಷಜ್ಞರ ಸಹಾಯದಿಂದ ಉಚಿತ ಸೆಮಿನಾರ್ ಮತ್ತು ಕಮ್ಮಟಗಳನ್ನು ಆಯೋಜಿಸುತ್ತಿದೆ.

ಝುಬೇರ್ ಆಜ್ಮಿ ಅವರ ಭಿಂಡಿ ಬಜಾರ್ ಉರ್ದು ಫೆಸ್ಟಿವಲ್ ನಗರದ ಸಾಂಸ್ಕೃತಿಕ ಚಟುವಟಿಕೆಗಳನ್ನು ಮತ್ತೆ ಜೀವಂತಗೊಳಿಸಿದ್ದಲ್ಲದೆ, ಮುಂದಿನ ಮನಪಾ ಚುನಾವಣೆಯಲ್ಲೂ ಸ್ಥಳೀಯ ಅಭ್ಯರ್ಥಿಯ ಒಲವು ತೋರಿಸಿದ್ದಾರೆ. ಉಪನಗರೀಯ ರೈಲ್ವೆ ಸ್ಟೇಷನ್‌ನ ಬೇಡಿಕೆ ಇರಿಸಿದ್ದಾರೆ. ಮದನ್‌ಪುರ ಹೆಸರನ್ನು ಪ್ರಮುಖ ಮುಸ್ಲಿಂ ಧಾರ್ಮಿಕ ಸ್ಥಳ ಮದೀನಾದ ಹೆಸರಲ್ಲ್ಲಿ ಇರಿಸಲಾಗಿರುವ ನಂಬಿಕೆ. ಇದಕ್ಕೆ ಇನ್ನೂರು ವರ್ಷಗಳ ಇತಿಹಾಸವಿದೆ. 1857ರ ಸ್ವಾತಂತ್ರ್ಯ ಸಂಗ್ರಾಮ ಆಂದೋಲನದಲ್ಲಿ ಉತ್ತರ ಪ್ರದೇಶದ ಇಲಾಹಾಬಾದ್, ಆಝಮ್‌ಗಡ್, ಮುಬಾರಕ್‌ಪುರ, ಬಾರಾಬಂಕಿ....ಮೊದಲಾದೆಡೆಯಿಂದ ಲಕ್ಷಗಟ್ಟಲೆ ಜನ ಮಹಾರಾಷ್ಟ್ರದತ್ತ ಪಲಾಯನಗೈದರು. ವಿಪರೀತ ಆರ್ಥಿಕ ಮಂದತೆ, ಬದುಕುವುದೇ ಕಷ್ಟವೆನಿಸಿದಾಗ ಜೀವನದ ಹುಡುಕಾಟದಲ್ಲಿ ಪಲಾಯನ ಅನಿವಾರ್ಯವಾಗಿತ್ತು. ಕೆಲವರು ದಾರಿಯಲ್ಲಿನ ಜಲ್‌ಗಾಂವ್ ಮತ್ತು ಮುಂಬೈಗೆ ಬಂದರು. ಮದನ್‌ಪುರ ಮತ್ತು ಪಕ್ಕದ ಮೋಮಿನ್‌ಪುರದಲ್ಲಿ ವಾಸ್ತವ್ಯ ಮಾಡಿದ್ದರು. ಆವಾಗ ಮುಂಬೈಯ ವಿಶಾಲ ಬಟ್ಟೆ ಮಿಲ್‌ಗಳೂ ಸುದ್ದಿ ಮಾಡಿತ್ತು. ಮದನ್‌ಪುರ ನಿಧಾನವಾಗಿ ಮುಂಬೈಯ ಮ್ಯಾಂಚೆಸ್ಟರ್ ಎನಿಸಿಕೊಂಡಿತ್ತು.

1980-82ರ ಮಿಲ್ ಮುಷ್ಕರದ ನಂತರ ಬಟ್ಟೆ ಮಿಲ್‌ಗಳು ಬಾಗಿಲು ಮುಚ್ಚಿದಾಗ ಮದನ್‌ಪುರ ತನ್ನ ವೈಭವ ಕಡಿಮೆ ಮಾಡುತ್ತಾ ಬರತೊಡಗಿತು. ಅನೇಕರು ಪಕ್ಕದ ಥಾಣೆ ಜಿಲ್ಲೆಯ ಭಿವಂಡಿ ಕಡೆ ವಲಸೆ ಹೋದರು.

ಇಂದು ಇಲ್ಲಿರುವ ಜನರು ಬಫಿಂಗ್, ಮೋಲ್ಡಿಂಗ್..... ಅಥವಾ ಲೆದರ್ ಬ್ಯಾಗ್, ಪರ್ಸ್, ಸೂಟ್‌ಕೇಸ್ ತಯಾರಿಸುವ ಚಿಕ್ಕಚಿಕ್ಕ ದಂಧೆಯನ್ನು ಹಿಡಿದಿದ್ದಾರೆ. 1990ರ ನಂತರ ಬಿಹಾರಿ ಮುಸ್ಲಿಮರು ಇತ್ತ ಮುಖ ಮಾಡಿದರು. ಇವರೆಲ್ಲ ಬ್ಯಾಗ್-ಸೂಟ್‌ಕೇಸ್-ಪರ್ಸ್ ತಯಾರಿಸುವ ದಂಧೆಯಲ್ಲಿ ಪ್ರಗತಿ ಕಂಡಿದ್ದಾರೆ.

1992-93ರ ಮುಂಬೈ ಕೋಮು ದಂಗೆಯ ಸಮಯ ಸಣ್ಣಪುಟ್ಟ ಘಟನೆಗಳನ್ನು ಬಿಟ್ಟರೆ ಇಲ್ಲಿ ಕೋಮುದಂಗೆಯಂತಹ ಯಾವುದೇ ದಾಖಲೆ ಕಾಣಿಸಿಲ್ಲ. ಇಲ್ಲಿ ಪ್ರಖ್ಯಾತ ಮಸೀದಿ, ಚರ್ಚ್ ಕೂಡಾ ಇದೆ.

* * *

‘ಮನಸೇ’ ಜೊತೆ ಮೈತ್ರಿ ಬೇಡವೆನ್ನಲು ಶಿವಸೇನೆಗಿವೆ ಕಾರಣ!

ಬಿಜೆಪಿ ಜೊತೆಗಿನ ಮೈತ್ರಿ ಮುರಿದು ಬಿದ್ದ ನಂತರ ಯಾರ ಜೊತೆಗೂ ಈ ಬಾರಿ ಮೈತ್ರಿ ಇಲ್ಲ ಎಂದು ಶಿವಸೇನೆಯ ಉದ್ಧವ್ ಠಾಕ್ರೆ ಘೋಷಿಸಿದ ನಂತರವೂ ರಾಜ್‌ಠಾಕ್ರೆಯ ಮಹಾರಾಷ್ಟ್ರ ನವನಿರ್ಮಾಣ ಸೇನೆಯು ಶಿವಸೇನೆ ಜೊತೆಗೆ ಮೈತ್ರಿಗೆ ಮುಂದಾಯಿತು. ‘ಮನಸೇ’ ನಾಯಕ ಬಾಲಾನಾಂದ್‌ಗಾಂವ್ಕರ್ ಮಾತೋಶ್ರಿಗೆ ಹೋದರೂ ಉದ್ಧವ್ ಭೇಟಿಯಾಗಲಿಲ್ಲ. ಇತರ ಶಿವಸೇನಾ ನಾಯಕರು ಭೇಟಿಯಾದರು.

ಯಾಕೆ ಶಿವಸೇನೆಯು ರಾಜ್‌ಠಾಕ್ರೆಯ ‘ಮನಸೇ’ ಜೊತೆ ಮೈತ್ರಿ ಮಾಡಿಕೊಳ್ಳಲು ಹಿಂದೇಟು ಹಾಕಿತು?

ಸಾಮಾಜಿಕ ಜಾಲತಾಣಗಳಲ್ಲಿ ರಾಜ್‌ಠಾಕ್ರೆಗೆ ಇಷ್ಟೊಂದು ಕಾಳಜಿ ಇರುವುದಾದರೆ ‘ಮನಸೇ’ಯನ್ನು ಶಿವಸೇನೆ ಜೊತೆ ವಿಲೀನ ಮಾಡಲಿ ನೋಡುವ ಎಂಬ ಮಾತುಗಳು ಹರಿದಾಡುತ್ತಿವೆ.

ಈಗ ಶಿವಸೇನೆಯು ‘ಮನಸೇ’ಯನ್ನು ದೂರ ಇರಿಸಲು ಮುಖ್ಯ ಕಾರಣ ಉತ್ತರ ಭಾರತೀಯರನ್ನು ಓಡಿಸಲು ರಾಜ್‌ಠಾಕ್ರೆಯ ‘ಮನಸೇ’ ಕಾರ್ಯಕರ್ತರು ಈಗಾಗಲೇ ಮುಂದಾಗಿದ್ದು ಉತ್ತರ ಭಾರತೀಯರಲ್ಲಿ ಭಯ ಹುಟ್ಟಿಸಿದ್ದರು ರಾಜ್‌ಠಾಕ್ರೆ ಒಂದು ವೇಳೆ ‘ಮನಸೇ’ ಜೊತೆ ಶಿವಸೇನೆ ಮೈತ್ರಿ ಮಾಡಿದರೆ ಖಂಡಿತಾ ಉತ್ತರ ಭಾರತೀಯ ಮತದಾರರು ಒಂದು ವೇಳೆ ಮತ ಹಾಕುವುದಿದ್ದರೂ ಶಿವಸೇನೆಯಿಂದ ದೂರ ಸರಿಯುವ ಸಾಧ್ಯತೆಗಳಿದ್ದುವು. ರಾಜ್ ಠಾಕ್ರೆ ಆಗಾಗ ಪರ ಪ್ರಾಂತೀಯರು ಎನ್ನುವ ಶಬ್ದ ಹೇಳುತ್ತಾ ತನ್ನ ಮರಾಠಿ ಮತಗಳನ್ನು ಬಾಚಲು ನೋಡುತ್ತಿದ್ದರು. ಇದು ಉತ್ತರ ಭಾರತೀಯರಿಗೂ ಗೊತ್ತು. ಹೀಗಾಗಿ ಶಿವಸೇನೆಯು ‘ಮನಸೇ’ ಮೈತ್ರಿಗಾಗಿ ಹತ್ತಿರ ಬಂದರೂ ಒಪ್ಪಲಿಲ್ಲ.

ಇದನ್ನು ಗಮನಿಸಿದರೆ ಇಂದು ಮುಂಬೈಯಲ್ಲಿ ಮಹಾರಾಷ್ಟ್ರ ನವನಿರ್ಮಾಣ ಸೇನೆಯು ಕ್ಷೀಣವಾಗಿರುವುದನ್ನು ಹೇಳಬೇಕಾಗಿದೆ. ಆ ಭಯದಿಂದಲೇ ಶಿವಸೇನೆ ಜೊತೆ ಒಪ್ಪಂದಕ್ಕೆ ಮುಂದಾಗಿತ್ತು. ಕಳೆದ ಬಾರಿ ಅದಕ್ಕೆ ಡಜನ್ನು ಸೀಟು ಸಿಕ್ಕಿದ್ದರೂ ಈ ಬಾರಿ ಅದೂ ಸಂಶಯವಿದೆ. ‘ಮನಸೇ’ಯ ಹಲವು ನೇತಾರರು ಬೇರೆ ಪಕ್ಷಗಳಿಗೆ ಹಾರಿದ್ದಾರೆ. ‘ಮನಸೇ’ಯನ್ನು ಹತ್ತಿರ ಸೇರಿಸಿದರೆ ತನಗೆ ನಷ್ಟ ಎಂದೇ ಶಿವಸೇನೆ ಅದನ್ನು ದೂರ ಮಾಡಲು ಕಾರಣವಾಯಿತು.

* * *

ಆಸ್ಪತ್ರೆಗಳಲ್ಲಿ ನರ್ಸ್‌ಗಳ ಕೊರತೆ

ಮುಂಬೈಯ ಹಲವಾರು ಆಸ್ಪತ್ರೆಗಳಲ್ಲಿ ನರ್ಸ್‌ಗಳ ಕೊರತೆ ಇದೆ. ಮುಂಬೈಯ ದೊಡ್ಡ ಆಸ್ಪತ್ರೆಗಳಲ್ಲಿ ಸುಮಾರು ಎರಡು ಸಾವಿರ ನರ್ಸ್ ಹುದ್ದೆಗಳು ಖಾಲಿ ಬಿದ್ದಿವೆ. ಇದರಿಂದ ರೋಗಿಗಳು ಪ್ರಭಾವಿತಗೊಂಡಿರುವರು.

ಮಹಾರಾಷ್ಟ್ರ ಗವರ್ನ್‌ಮೆಂಟ್ ನರ್ಸ್ಸ್ ಫೆಡರೇಶನ್ ಈ ಬಗ್ಗೆ ಆಗಾಗ ವಿನಂತಿ ಮಾಡಿಕೊಳ್ಳುತ್ತಿದ್ದು ಸರಕಾರಕ್ಕೆ ಮನವಿಯನ್ನೂ ನೀಡಿದೆ. ಫೆಡರೇಶನ್‌ನ ಅಧ್ಯಕ್ಷರಾದ ಅನುರಾಧಾ ಆಠವಲೆ ಅವರು ಹೇಳುವಂತೆ ಮುಂಬೈ ಸಹಿತ ರಾಜ್ಯದಲ್ಲಿ 30 ಸಾವಿರ ನರ್ಸ್‌ಗಳು ಕಾರ್ಯನಿರತರಾಗಿದ್ದಾರೆ. ಇದರಲ್ಲ್ಲಿ 2 ಸಾವಿರ ನರ್ಸ್‌ಗಳು ಮುಂಬೈಯ ಆಸ್ಪತ್ರೆಗಳಲ್ಲಿ ಸೇವೆಗೈಯುತ್ತಿದ್ದಾರೆ. ಆದರೆ ಮಹಾನಗರದ ಆಸ್ಪತ್ರೆಗಳಿಗೆ ಬರುವ ರೋಗಿಗಳ ಸಂಖ್ಯೆ ಗಮನಿಸಿದರೆ ಇನ್ನೂ 2 ಸಾವಿರ ನರ್ಸ್‌ಗಳ ಅಗತ್ಯವಿದೆ.

* * *

ತನಿಖೆಗೆ ಹೈಕೋರ್ಟ್ ಆದೇಶ

ಬಾಂಬೆ ಹೈಕೋರ್ಟ್ ಮಹಾರಾಷ್ಟ್ರದ ಎಸಿಬಿ (ಭ್ರಷ್ಟಾಚಾರ ತಡೆ ಬ್ಯೂರೋ)ಯ ಹೆಚ್ಚುವರಿ ಮಹಾನಿರ್ದೇಶಕರಿಗೆ ನಗರ ಮತ್ತು ಉಪನಗರಗಳಲ್ಲಿ ಕೆಲಸ ಮಾಡುತ್ತಿರುವ ಟ್ರಾಫಿಕ್ ಪೊಲೀಸರ ವಿರುದ್ಧ ಹೆಡ್ ಕಾನ್‌ಸ್ಟೇಬಲ್ ಸುನೀಲ್ ಟೋಕೆ ಸಲ್ಲಿಸಿದ್ದ ಅರ್ಜಿಯ ಆರೋಪಗಳ ತನಿಖೆ ನಡೆಸುವಂತೆ ಆದೇಶಿಸಿದೆ.

ಜಸ್ಟೀಸ್ ಆರ್.ವಿ. ಮೋರೆಯವರ ಅಧ್ಯಕ್ಷತೆಯ ಏಕಪೀಠವು ಈ ಆದೇಶ ನೀಡಿದೆ. ಈ ಅರ್ಜಿಯಲ್ಲಿ ಪೊಲೀಸರ ಟ್ರಾಫಿಕ್ ವಿಭಾಗವು ವ್ಯಾಪಕ ಭ್ರಷ್ಟಾಚಾರವನ್ನು ಮಾಡುತ್ತಿರುವುದಾಗಿ ಆರೋಪ ಹೊರಿಸಿದ್ದು ಭ್ರಷ್ಟ ಅಧಿಕಾರಿಗಳ ವಿರುದ್ಧ ವಿಭಾಗೀಯ ತನಿಖೆಗೆ ಆಗ್ರಹಿಸಿದ್ದರು. ಭ್ರಷ್ಟಾಚಾರ ಆರೋಪದಲ್ಲಿ ಮೆಟ್ರೋ ಕೆಳಗಡೆಯ ಟ್ರಾಫಿಕ್ ಪೊಲೀಸರ ಭ್ರಷ್ಟಾಚಾರವೂ ಸೇರಿದೆ.

Writer - ಶ್ರೀನಿವಾಸ್ ಜೋಕಟ್ಟೆ

contributor

Editor - ಶ್ರೀನಿವಾಸ್ ಜೋಕಟ್ಟೆ

contributor

Similar News