ಆತ್ಮಸಾಕ್ಷಿಯಂತೆ ನಡೆದುಕೊಳ್ಳಿ ಶಶಿಕಲಾ ಬೆಂಬಲಿಗರಿಗೆ ಪನ್ನೀರ್‌ಸೆಲ್ವಂ ಕರೆ
ಚೆನ್ನೈ,ಫೆ.14: ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಶಶಿಕಲಾ ದೋಷಿಯೆಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಹಂಗಾಮಿ ಮುಖ್ಯಮಂತ್ರಿ ಪನ್ನೀರ್ ಸೆಲ್ವಂ ಅವರು, ‘ಅಮ್ಮಾ (ಜಯಲಲಿತಾ) ಅವರ ಸರಕಾರ’ವನ್ನು ಮುನ್ನಡೆಸಲು ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ಎಡಿಎಂಕೆ ಶಾಸಕರಿಗೆ ಮನವಿ ಮಾಡಿದ್ದಾರೆ.
‘‘ ಕೆಲವೊಂದು ಘಟನೆಗಳ ಕಾರಣದಿಂದಾಗಿ, ಜಯಾ ಅವರ ಸರಕಾರವನ್ನು ಮುಂದುವರಿಸಲು ಸಣ್ಣಪುಟ್ಟ ಅಡಚಣೆಗಳಾಗಿವೆ. ಈ ತಾತ್ಕಾಲಿಕವಾದ ಅಡ್ಡಿಯನ್ನು ನಿವಾರಿಸಲು ಹಾಗೂ ‘ಅಮಾ’್ಮ ಅವರ ಸದಾಡಳಿತವನ್ನು ಮುನ್ನಡೆಸಲು, ನಮ್ಮ ಆತ್ಮಸಾಕ್ಷಿಯಂತೆ ಹೆಜ್ಜೆಯನ್ನಿಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ’’ ಎಂದು ಪನ್ನೀರ್‌ಸೆಲ್ವಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
‘‘ಪಕ್ಷದಲ್ಲಿ ಒಡಕುಂಟಾಗುವುದನ್ನು ಕಾಣಲು ವಿರೋಧಿಗಳು ಕಾದುಕುಳಿತಿದ್ದಾರೆ. ಹಾಗಾಗುವುದಕ್ಕೆ ಅವಕಾಶ ನೀಡಿದಲ್ಲಿ ಎಂ.ಜಿ.ರಾಮಚಂದ್ರನ್ ಹಾಗೂ ಜಯಲಲಿತಾ ಅವರ ಆತ್ಮಗಳು ನಮ್ಮನ್ನು ಕ್ಷಮಿಸಲಾರವು’’ ಎಂದು ಪನ್ನೀರ್‌ಸೆಲ್ವಂ ಹೇಳಿದ್ದು, ತನ್ನನ್ನು ಬೆಂಬಲಿಸುವಂತೆ ಪಕ್ಷದ ಶಾಸಕರಿಗೆ ಮನವಿ ಮಾಡಿದ್ದಾರೆ.
ರಾಜ್ಯದ ಎಲ್ಲಾ ಸಚಿವರು ಹಾಗೂ ಶಾಸಕರು ಜೊತೆಯಾಗಿ ದುಡಿದು, ಎಂಜಿಆರ್ ಹಾಗೂ ಜಯಾ ಅವರ ಭವ್ಯಪರಂಪರೆಯನ್ನು ಮುಂದುವರಿಸಬೇಕೆಂದು ಕರೆ ನೀಡಿದ್ದಾರೆ.