ಇಸ್ರೋದ ವಿಶ್ವದಾಖಲೆಯ 104 ಉಪಗ್ರಹ ಉಡಾವಣೆಗೆ ಕ್ಷಣಗಣನೆ ಆರಂಭ

Update: 2017-02-14 15:42 GMT

 ಚೆನ್ನೈ, ಫೆ.14: ಇಸ್ರೋ ನಡೆಸಲಿರುವ ಒಂದೇ ರಾಕೆಟ್‌ನಲ್ಲಿ ದಾಖಲೆಯ 104 ಉಪಗ್ರಹಗಳ ಉಡಾವಣೆಗೆ ಇಲ್ಲಿಗೆ 125 ಕಿ.ಮೀ ದೂರದ ಶ್ರೀಹರಿಕೋಟದ ಅಂತರಿಕ್ಷ ಕೇಂದ್ರದಲ್ಲಿ ಕ್ಷಣಗಣನೆ ಆರಂಭವಾಗಿದೆ.

   ಈ ಕಾರ್ಯ ಯಶಸ್ವಿಯಾದರೆ ಇಂತಹ ಸಾಧನೆ ಮಾಡಿದ ವಿಶ್ವದ ಏಕೈಕ ರಾಷ್ಟ್ರ ಎಂಬ ಚರಿತ್ರಾರ್ಹ ದಾಖಲೆಗೆ ಭಾರತ ಪಾತ್ರವಾಗಲಿದೆ. ಪಿಎಸ್‌ಎಲ್‌ವಿ-ಸಿ37/ಕಾರ್ಟೊಸ್ಯಾಟ್2 ಉಪಗ್ರಹ ಉಡ್ಡಯನ ಕಾರ್ಯದ 28 ಗಂಟೆಗಳ ಕ್ಷಣಗಣನೆ ಮಂಗಳವಾರ ಬೆಳಿಗ್ಗೆ 5:28ಕ್ಕೆ ಆರಂಭಗೊಂಡಿದ್ದು ರಾಕೆಟ್‌ಗೆ ಪ್ರಚೋದಕವನ್ನು ತುಂಬಿಸುವ ಕಾರ್ಯವನ್ನು ವಿಜ್ಞಾನಿಗಳು ಆರಂಭಿಸಿದ್ದಾರೆ. ಇಸ್ರೋದ 39ನೇ ಉಡಾವಣೆ ಇದಾಗಿದ್ದು ಇದರಲ್ಲಿ ವಿವಿಧ ಅಂತಾರಾಷ್ಟ್ರೀಯ ಗ್ರಾಹಕರ(ದೇಶಗಳ) 104 ಉಪಗ್ರಹಗಳನ್ನು ಉಡ್ಡಯನ ಮಾಡಲಾಗುತ್ತದೆ. ಈ ಹಿಂದೆ ರಷ್ಯಾ ಒಂದೇ ರಾಕೆಟ್‌ನಲ್ಲಿ 37 ಉಪಗ್ರಹಗಳನ್ನು ಉಡ್ಡಯನ ಮಾಡಿದ್ದು ದಾಖಲೆಯಾಗಿತ್ತು. 2015ರ ಜೂನ್‌ನಲ್ಲಿ ಒಂದೇ ಯತ್ನದಲ್ಲಿ ಇಸ್ರೋ 23 ಉಪಗ್ರಹಗಳನ್ನು ಯಶಸ್ವಿಯಾಗಿ ಉಡ್ಡಯನ ಮಾಡಿತ್ತು.

104 ಉಪಗ್ರಹಗಳಲ್ಲಿ ಅಮೆರಿಕದ 96, ಹಾಗೂ ಇಸ್ರೇಲ್, ಕಝಕ್‌ಸ್ತಾನ್, ನೆದರ್ಲಾಂಡ್, ಸ್ವಿಝರ್‌ಲ್ಯಾಂಡ್, ಯುಎಇ ಸೇರಿದ್ದು ಉಳಿದವು ಭಾರತದ ಉಪಗ್ರಹಗಳು. ಭಾರತದ ಉಪಗ್ರಹಗಳಲ್ಲಿ ಭೂಮಿಯ ವೀಕ್ಷಣೆಗೆ ನೆರವಾಗುವ 714 ಕಿ.ಗ್ರಾಂ. ತೂಕದ ಕಾರ್ಟೊಸ್ಯಾಟ್-2 ಸರಣಿ ಉಪಗ್ರಹ ಸೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News