ಭಿಕ್ಷಾಟನೆಯೆಂಬ ಬೃಹತ್ ಉದ್ಯಮ!

Update: 2017-02-14 18:19 GMT

ಹೈದರಾಬಾದನ್ನು ಭಿಕ್ಷುಕ ಮುಕ್ತವಾಗಿಸಬೇಕೆಂಬ ಉದ್ದೇಶದಿಂದ ಅಲ್ಲಿನ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್, ಸ್ವಯಂಸೇವಾ ಸಂಸ್ಥೆಗಳ ಜೊತೆ ಸೇರಿ ಈ ಹಿಂದೆ ನಡೆಸಿದ ಒಂದು ಸಮೀಕ್ಷೆಯಲ್ಲಿ ಅಚ್ಚರಿ ಹುಟ್ಟಿಸುವ ಸತ್ಯವೊಂದು ಹೊರಬಿದ್ದಿದೆ. ಅಲ್ಲಿನ ಪ್ರಮುಖ ದಟ್ಟಣೆ ಪ್ರದೇಶಗಳು, ಧಾರ್ಮಿಕ ಕೇಂದ್ರಗಳ ಬಳಿ ಸುಮಾರು 14 ಸಾವಿರಕ್ಕೂ ಹೆಚ್ಚು ಜನ ಭಿಕ್ಷೆ ಬೇಡುತ್ತಾರೆ ಎಂದು ತಿಳಿಸುವ ಈ ಸಮೀಕ್ಷೆ, ಅವರ ಭಿಕ್ಷಾಟನೆಯ ಒಟ್ಟು ವಾರ್ಷಿಕ ಆದಾಯ 24 ಕೋಟಿ ರೂ. ಎಂಬುದನ್ನೂ ಪತ್ತೆ ಮಾಡಿದೆ! ಇದು ಯಾವುದೇ ಮಧ್ಯಮ ಗಾತ್ರದ ಉದ್ದಿಮೆ ವಹಿವಾಟಿಗೆ ಕಡಿಮೆಯಿಲ್ಲ ಎಂಬುದನ್ನು ಈ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತದೆ.

ಹೈದರಾಬಾದಿನಂತಹ ಒಂದು ನಗರದಲ್ಲಿ ವಾರ್ಷಿಕವಾಗಿ 24 ಕೋಟಿಯಷ್ಟು ಹಣ ಭಿಕ್ಷಾಟನೆಗೆ ಹೋಗುತ್ತದೆ ಎಂದರೆ ದೇಶದ ಉದ್ದಗಲಕ್ಕೂ ನಡೆಯುವ ಈ ಉದ್ಯಮದ ಗಾತ್ರ ಎಷ್ಟಿರಬಹುದು?!.

ಕೇಂದ್ರ ಸರಕಾರದ ಕಾರ್ಮಿಕ ಬ್ಯೂರೊದ ಅಂಕಿ ಅಂಶಗಳ ಪ್ರಕಾರ, 2014ರಲ್ಲಿ ದೇಶದಲ್ಲಿ ಕನಿಷ್ಠ ದಿನಗೂಲಿ 272.19 ಇತ್ತು. ಕೌಶಲದ ವ್ಯಾಪ್ತಿಯಲ್ಲಿ ಬರುವ ಕೆಲಸಗಳು ಇದರಲ್ಲಿ ಸೇರಿಲ್ಲ ಎನ್ನುವುದನ್ನು ಗಮನಿಸಬೇಕು. ಆದರೂ ಪ್ರತಿದಿನದ ಕೂಲಿ ಇತರ ಬ್ರಿಕ್ಸ್ ರಾಷ್ಟ್ರಗಳಿಗೆ ಹೋಲಿಸಿದರೆ ಇಲ್ಲಿ ಅತೀ ಕಡಿಮೆ. ಇದರಿಂದಲೇ ಭಾರತ ಬಡರಾಷ್ಟ್ರ ಎಂಬ ಹಣೆಪಟ್ಟಿ ಹೊತ್ತುಕೊಂಡಿರುವುದು.

ನಮ್ಮ ದೇಶದಲ್ಲಿ ಇಲ್ಲದವರಿಗೆ ನೀಡುವ, ದಾನ ಮಾಡುವ ಪ್ರವೃತ್ತಿ ಸಹಜವಾಗಿ ಬೆಳೆದು ಬಂದಿದೆ. ಹಿಂದೆ ವಾರಾನ್ನದ ಮನೆಗಳು, ಆರ್ಥಿಕ ಸ್ಥಿತಿ ಅನುಕೂಲವಿಲ್ಲದವರ ಮಕ್ಕಳಿಗೆ ಉಣ್ಣಲು ನೀಡುತ್ತ ಅವರ ಓದಿಗೆ ಸಹಾಯ ಮಾಡುತ್ತಿದ್ದವು. ಹಬ್ಬ ಹರಿದಿನಗಳಲ್ಲಿ ದೇವರ ಪಟಗಳನ್ನು ಹೊತ್ತು ಮನೆಯ ಮುಂದೆ ಬೇಡಲು ಬರುವ ಭಕ್ತರಿರುತ್ತಿದ್ದರು. ಜಾತ್ರೆಯಂಥ ವಿಶೇಷ ಸಂದರ್ಭಗಳಲ್ಲಿ ವೇಷಭೂಷಣಗಳೊಂದಿಗೆ ಭಿಕ್ಷೆ ಕೇಳುತ್ತಿದ್ದರು. ಇವರ ಸಂಖ್ಯೆ ವಿರಳವಾಗಿರುತ್ತಿತ್ತು. ಇವರನ್ನು ಯಾರೂ ಬರಿಗೈಯಲ್ಲಿ ಕಳಿಸುತ್ತಿರಲಿಲ್ಲ. ಇದಕ್ಕೆ ಪುಣ್ಯದ ಕೆಲಸ ಎಂಬ ಉದ್ದೇಶದೊಂದಿಗೆ ಹಸಿದವರಿಗೆ ಅನ್ನ ಇಕ್ಕುವ, ಹಂಚಿ ತಿನ್ನುವ ಒಳ್ಳೆಯ ಸಂಪ್ರದಾಯ ಕೂಡ ಇತ್ತು.

ಭಿಕ್ಷೆ ಬೇಡುವುದು ಭಿಕ್ಷೆಗೆ ಬರುವವರಿಗೆ ಹೇಗೆ ಒಂದು ಮುಜುಗರದ ಅನಿವಾರ್ಯವಾಗಿತ್ತೋ ಹಾಗೆಯೇ ಭಿಕ್ಷೆ ನೀಡುವವರಿಗೂ ಅಂತಃಕರಣದ ನೋವಾಗಿತ್ತು. ಆದರೆ ಬರಬರುತ್ತಾ ಈ ಎರಡೂ ಭಾವನೆಗಳು ಬದಲಾಗ ಹತ್ತಿದವು, ಭಿಕ್ಷೆ ಬೇಡುವುದು ಯಾವುದೇ ಮುಜುಗರವಿಲ್ಲದ ಕಸುಬಾಯಿತು. ಭಿಕ್ಷೆ ನೀಡುವುದು ಗೊಣಗಾಟವಾಯಿತು, ಅನುಮಾನವಾಯಿತು. ಅಲ್ಲಿಗೆ ಭಿಕ್ಷೆಯ ಹಿಂದಿದ್ದ ಅಂತಃಕರಣ ಅಂತ್ಯವಾಯಿತು. ಅಲ್ಲಿಂದಾಚೆಗೆ ಅದು ವೃತ್ತಿಯಾಯಿತು. ಮಕ್ಕಳನ್ನು ಹಿಡಿದು ಅವರನ್ನು ಅಂಗವಿಕಲರನ್ನಾಗಿ ಮಾಡಿ ಭಿಕ್ಷಾಟನೆಗೆ ನೂಕುತ್ತಾರೆ ಎಂಬ ಗುಲ್ಲು ಆಗಾಗ ಸಣ್ಣ ಪಟ್ಟಣಗಳಲ್ಲದೆ ಬೃಹತ್ ನಗರಗಳಲ್ಲೂ ಕೇಳಿಬರುತ್ತಿತ್ತು. ಇದು ಕೇವಲ ಗುಲ್ಲಾಗದೆ ನಿಜಸ್ಥಿತಿಯೂ ಆಯಿತು. ಇದನ್ನು ವಸ್ತುವಾಗಿರಿಸಿಕೊಂಡು ಅನೇಕ ಚಲನಚಿತ್ರಗಳು ಎಲ್ಲ ಭಾಷೆಗಳಲ್ಲೂ ನಿರ್ಮಾಣವಾದವು. ಆನಂತರದಲ್ಲಿ ಭಿಕ್ಷಾಟನೆ ತನ್ನ ವಿರಾಟ್ ಸ್ವರೂಪವನ್ನು ತಳೆಯ ಹತ್ತಿತು. ಭಿಕ್ಷುಕರನ್ನು ನಿಯಂತ್ರಿಸುವ ಮಾಫಿಯಾಗಳು ಅಸ್ತಿತ್ವಕ್ಕೆ ಬಂದವು. ಇದೀಗ ಬಹುತೇಕ ದೊಡ್ಡ ನಗರಗಳಲ್ಲಿ ಭಿಕ್ಷಾಟನೆ ಒಂದು ದೊಡ್ಡ ಉದ್ಯಮವಾಗಿದೆ!

ಹೈದರಾಬಾದನ್ನು ಭಿಕ್ಷುಕ ಮುಕ್ತವಾಗಿಸಬೇಕೆಂಬ ಉದ್ದೇಶದಿಂದ ಅಲ್ಲಿನ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್, ಸ್ವಯಂಸೇವಾ ಸಂಸ್ಥೆಗಳ ಜೊತೆ ಸೇರಿ ಈ ಹಿಂದೆ ನಡೆಸಿದ ಒಂದು ಸಮೀಕ್ಷೆಯಲ್ಲಿ ಅಚ್ಚರಿ ಹುಟ್ಟಿಸುವ ಸತ್ಯವೊಂದು ಹೊರಬಿದ್ದಿದೆ. ಅಲ್ಲಿನ ಪ್ರಮುಖ ದಟ್ಟಣೆ ಪ್ರದೇಶಗಳು, ಧಾರ್ಮಿಕ ಕೇಂದ್ರಗಳ ಬಳಿ ಸುಮಾರು 14 ಸಾವಿರಕ್ಕೂ ಹೆಚ್ಚು ಜನ ಭಿಕ್ಷೆ ಬೇಡುತ್ತಾರೆ ಎಂದು ತಿಳಿಸುವ ಈ ಸಮೀಕ್ಷೆ, ಅವರ ಭಿಕ್ಷಾಟನೆಯ ಒಟ್ಟು ವಾರ್ಷಿಕ ಆದಾಯ 24 ಕೋಟಿ ರೂ. ಎಂಬುದನ್ನೂ ಪತ್ತೆ ಮಾಡಿದೆ! ಇದು ಯಾವುದೇ ಮಧ್ಯಮ ಗಾತ್ರದ ಉದ್ದಿಮೆ ವಹಿವಾಟಿಗೆ ಕಡಿಮೆಯಿಲ್ಲ ಎಂಬುದನ್ನು ಈ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತದೆ.

ಈಗ ಬೆಂಗಳೂರಿನ ಉದಾಹರಣೆಯನ್ನು ತೆಗೆದು ಕೊಳ್ಳುವುದಾದರೆ, ಇಲ್ಲಿನ ಗಡಿ ಭಾಗಗಳಿಂದ ದಿನವೂ ಬೆಳಗ್ಗೆ ರೈಲಿನಲ್ಲಿ ಬಂದು ಭಿಕ್ಷೆ ಬೇಡಿ ರಾತ್ರಿ ಮರಳಿ ಹೋಗುವ ಅನೇಕಾನೇಕ ಭಿಕ್ಷುಕರಿದ್ದಾರೆ. ಒಂದು ಅಂದಾಜಿನ ಪ್ರಕಾರ, ಅವರ ಗಳಿಕೆ ತಿಂಗಳಿಗೆ ಸುಮಾರು 10 ಸಾವಿರದಿಂದ 20 ಸಾವಿರದವರೆಗೂ ಇದೆ! ಜನರು ಹಾಗೂ ವಾಹನ ದಟ್ಟಣೆಯಿಂದ ಸದಾ ಗಿಜಿಗುಡುವ ಬೆಂಗಳೂರಿನ ಕೆಲ ಭಾಗಗಳಲ್ಲಿ ಅವರು ಹೆಚ್ಚಾಗಿ ಕಾಣಸಿಗುತ್ತಾರೆ. ಈ ಜಾಗಗಳಲ್ಲಿ ಅವರ ಸಂಪಾದನೆ ಅಷ್ಟು ಜೋರಾಗಿರುತ್ತದೆ. ದಿನನಿತ್ಯ ಕಚೇರಿ ಕೆಲಸಗಳಿಗೆ ಹೋಗುವವರಂತೆ ಇವರೆಲ್ಲರೂ ಭಿಕ್ಷಾಟನೆಗೆ ಬರುತ್ತಾರೆ. ಭಿಕ್ಷಾಟನೆ ಕಾನೂನು ರೀತ್ಯ ಅಪರಾಧವಾದರೆ ಇದು ಹೇಗೆ ನಡೆಯಲು ಸಾಧ್ಯ? ಹಾಗಿದ್ದರೂ ಇದು ನಡೆಯುತ್ತದೆ ಎಂದಾದರೆ ಇದಕ್ಕೆ ಬಹು ಬಲಿಷ್ಠವಾದ ಪರೋಕ್ಷ ಬೆಂಬಲ ಇರಲೇಬೇಕಲ್ಲವೇ?

ನಮ್ಮ ದೇಶದಲ್ಲಿ ಹೈದರಾಬಾದಿನಂತಹ ಒಂದು ನಗರದಲ್ಲಿ ವಾರ್ಷಿಕವಾಗಿ 24 ಕೋಟಿಯಷ್ಟು ಹಣ ಭಿಕ್ಷಾಟನೆಗೆ ಹೋಗುತ್ತದೆ ಎಂದರೆ ದೇಶದ ಉದ್ದಗಲಕ್ಕೂ ನಡೆಯುವ ಈ ಉದ್ಯಮದ ಗಾತ್ರ ಎಷ್ಟಿರಬಹುದು.? ಉದ್ಯಮಶೀಲತೆಯನ್ನು ಹೆಚ್ಚಿಸಿಕೊಂಡು ಮುಂದಿನ ದಶಕದಲ್ಲಿ ವಿಶ್ವದ ಮಾರುಕಟ್ಟೆಯಲ್ಲಿ ರಾಜನಾಗಿ ಮೆರೆಯುವ ಎಲ್ಲ ಲಕ್ಷಣಗಳನ್ನೂ ಈಗ ಮೈಗೂಡಿಸಿಕೊಳ್ಳುತ್ತಿರುವ ಭಾರತಕ್ಕೆ ಇದು ಆಘಾತಕಾರಿ ಬೆಳವಣಿಗೆ. ಭಾರತ ಈಗ ವಿಶ್ವದಲ್ಲೇ ಅತೀ ವೇಗವಾಗಿ ಬೆಳೆಯುತ್ತಿರುವ ರಾಷ್ಟ್ರ. ಚೀನಾವನ್ನೂ ಹಿಂದಿಕ್ಕಿ ಜಾಗತಿಕವಾಗಿ ಮಾನವ ಸಂಪನ್ಮೂಲವನ್ನು ಪೂರೈಸಬಲ್ಲ ಸಾಮರ್ಥ್ಯವನ್ನು ಹೊಂದಲಿರುವ ರಾಷ್ಟ್ರ. ಇಂತಹ ಗುಣಾತ್ಮಕ ಬೆಳವಣಿಗೆಯ ಜೊತೆ ಜೊತೆಗೆ, ಭಿಕ್ಷಾಟನೆಯ ಕಾರಣದಿಂದ ಮಾನವ ಸಂಪನ್ಮೂಲದ ಒಂದು ಭಾಗ ಸರಿಯಾಗಿ ಬಳಕೆಯಾಗಲು ಸಾಧ್ಯವಾಗದಿರುವುದು ದೇಶದ ಅಭಿವೃದ್ಧಿಗೆ ದೊಡ್ಡ ಹಿನ್ನಡೆ ಮಾತ್ರವಲ್ಲ, ಅಭಿವೃದ್ಧಿಯ ವಿಪರ್ಯಾಸ ಕೂಡ.

ಬಡತನ ನೀಗಿಸಲು ಸರಕಾರಗಳು ಅನೇಕಾನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ. ಭಿಕ್ಷಾಟನೆಯ ಪ್ರಚೋದನೆಯಿಂದ ಅಂತಹ ಕಾರ್ಯಕ್ರವಗಳು ಪೂರ್ಣ ಯಶಸ್ಸು ಪಡೆಯಲು ಸಾಧ್ಯವಿಲ್ಲ. ಹಸಿವು ಹಾಗೂ ಬಡತನವನ್ನು ದಾಳವಾಗಿಸಿಕೊಂಡು ಭಿಕ್ಷುಕರ ಸಂಖ್ಯೆಯನ್ನು ಹೆಚ್ಚಿಸುವುದರ ಮೂಲಕ ನಡೆಸುವ ವಹಿವಾಟಿನಿಂದ ಯಾವ ಅಭಿವೃದ್ಧಿ ಸಾಧ್ಯ? ಈ ಕಾರಣದಿಂದ ಇಂದು ಭಿಕ್ಷಾಟನೆಯ ಮೇಲೆ ಹೆಚ್ಚಿನ ನಿಗಾ ವಹಿಸಬೇಕಾದ ಆವಶ್ಯಕತೆ ಇದೆ.

ಭಿಕ್ಷಾಟನೆಯಿಂದ ಸಾಕಷ್ಟು ಹಣ ದೊರಕುವಾಗ, ಭಿಕ್ಷುಕರ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಭಿಕ್ಷುಕರ ಸಂಖ್ಯೆ ದಿನೇದಿನೇ ಕಡಿಮೆಯಾಗಬೇಕಿತ್ತು. ಆದರೆ ಬೆಂಗಳೂರಿನ ಮಟ್ಟಿಗೆ ಹೇಳುವುದಾದರೆ ಅವರ ಸಂಖ್ಯೆ ಹೆಚ್ಚುತ್ತಲೇ ಇದೆ. ಚಿಕ್ಕ ವಯಸ್ಸಿನ, ಹದಿಹರೆಯದ ಹುಡುಗರು ಮಾರುವೇಷದಲ್ಲಿ ಭಿಕ್ಷೆಗಿಳಿಯುತ್ತಿದ್ದಾರೆ. ಬಡತನ ನಿವಾರಣೆಗೆ ಭಿಕ್ಷೆಯೇ ಪರ್ಯಾಯ ದಾರಿಯಲ್ಲ ಎನ್ನುವುದನ್ನು ಸರಕಾರ ಕೂಡಾ ಖಂಡಿತವಾಗಿ ಮನಗಾಣಬೇಕಾಗಿದೆ. ಸಾರ್ವಜನಿಕರು ಕೂಡ, ತಮ್ಮೆದುರು ಕೈ ಒಡ್ಡಿ ನಿಲ್ಲುವ ಎಲ್ಲರಿಗೂ ಚಿಲ್ಲರೆ ದಾನ ಮಾಡಿ ಪುಣ್ಯಾತ್ಮರಾಗುವ ಬದಲು, ತೀರ ಅಗತ್ಯವಿರುವವರಿಗಷ್ಟೆ ಸಹಾಯಾರ್ಥವಾಗಿ ಏನನ್ನಾದರೂ ಕೊಡುವ ಮನಸ್ಸು ಮಾಡಬೇಕು.

ಈಗಾಗಲೇ ಒಂದು ಸಾಮಾಜಿಕ ಪಿಡುಗಾಗಿರುವ ಭಿಕ್ಷಾಟನೆ ಅನೈತಿಕ ವ್ಯವಹಾರಗಳಿಗೆ ಕುಮ್ಮಕ್ಕು ನೀಡುತ್ತ, ಅಪರಾಧಗಳಿಗೆ ದಾರಿ ಮಾಡುತ್ತಾ ದೇಶಕ್ಕೆ ಕಂಟಕವಾಗಬಹುದು. ದೇಶ ಅಭಿವೃದ್ಧಿಯ ದಾರಿಯಲ್ಲಿ ಮುಂದುವರಿಯಬೇಕು ಎಂದು ಬಯಸುವ ಎಲ್ಲರೂ ಭಿಕ್ಷಾಟನೆಯನ್ನು ತಾರ್ಕಿಕ ನೆಲೆಯಲ್ಲಿ ನೋಡಬೇಕಾಗಿದೆ.

Writer - ಪ್ರವೀಣ್ ಪಿ., ದಾವಣಗೆರೆ

contributor

Editor - ಪ್ರವೀಣ್ ಪಿ., ದಾವಣಗೆರೆ

contributor

Similar News