ಹಣಕ್ಕಾಗಿಯೇ ಹುಡುಗನನ್ನು ದತ್ತು ಪಡೆದು ಕೊಲೆ ಮಾಡಿಸಿದ ಧೂರ್ತ ದಂಪತಿ
ಅಹ್ಮದಾಬಾದ್, ಫೆ.15: ತಾವು 2015ರಲ್ಲಿ ದತ್ತು ತೆಗೆದುಕೊಂಡಿದ್ದ ಬಾಲಕನೊಬ್ಬನನ್ನು ವಿಮಾ ಮೊತ್ತ ಪಡೆಯುವ ದುರಾಸೆಯಿಂದ ಕೊಲೆ ಮಾಡಿದ ಅನಿವಾಸಿ ಭಾರತೀಯ ದಂಪತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ದಂಪತಿ ಹಾಲಿ ಲಂಡನ್ ನಲ್ಲಿ ವಾಸವಾಗಿದ್ದು ಬಾಲಕನ ಹೆಸರಿನಲ್ಲಿ ರೂ 1.20 ಕೋಟಿ ಮೊತ್ತದ ವಿಮೆ ಮಾಡಿಸಿದ್ದರು. ಆರೋಪಿಗಳನ್ನು ಆರತಿ ಲೋಕನಾಥ್ (53) ಹಾಗೂ ಕನ್ವಲಜೀತ್ ಸಿನ್ಹ ರಜ್ಜಡ (28) ಎಂದು ಗುರುತಿಸಲಾಗಿದೆ. ಮೃತ ಬಾಲಕ ಗೋಪಾಲ್(13) ತನ್ನದಲ್ಲದ ತಪ್ಪಿಗೆ ಕೊಲೆಯಾಗಿದ್ದಾನೆ.
ಪೊಲೀಸರ ಪ್ರಕಾರ ದಂಪತಿಯು ನಿತೀಶ್ ಮುಂಡ್ ಎಂಬ ವ್ಯಕ್ತಿಯ ಜೊತೆ ಶಾಮೀಲಾಗಿ ಬಾಲಕನನ್ನು ಕೊಲ್ಲಲು ಸಂಚು ಹೂಡಿತ್ತು. ನಿತೀಶ್ ಕೂಡ ಈ ಹಿಂದೆ ಲಂಡನ್ ನಲ್ಲಿಯೇ ವಾಸವಾಗಿದ್ದು ತನ್ನ ವೀಸಾ ಅವಧಿ ಮುಕ್ತಾಯವಾದ ನಂತರ ಭಾರತಕ್ಕೆ ಹಿಂದಿರುಗಿದ್ದ.ಆತನನ್ನು ಸೋಮವಾರ ಬಂಧಿಸಿದಾಗ ಈ ಪ್ರಕರಣದಲ್ಲಿ ಅನಿವಾಸಿ ಭಾರತೀಯ ದಂಪತಿಯ ಶಾಮೀಲಾತಿ ಬಗ್ಗೆ ತಿಳಿದು ಬಂದಿತ್ತು.
ಬಾಲಕನ ಮೇಲೆ ಫೆಬ್ರವರಿ 8ರಂದು ಜುನಾಗಢ ಜಿಲ್ಲೆಯ ಕೆಶೋಡ್ ಎಂಬಲ್ಲಿ ಇಬ್ಬರು ಬೈಕಿನಲ್ಲಿ ಬಂದ ಆಗಂತುಕರು ಚೂರಿ ಇರಿದು ಪರಾರಿಯಾಗಿದ್ದರೆ, ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಸೋಮವಾರ ಮೃತಪಟ್ಟಿದ. ನಿತೀಶ್ ಜೊತೆ ಮಲಿಯ ಗ್ರಾಮದಲ್ಲಿ ವಾಸವಾಗಿದ್ದ ಗೋಪಾಲ್ ಆ ದಿನ ನಿತೀಶ್, ಹರ್ಸುಖ್ ಪಟೇಲ್ ಹಾಗೂ ಮಹದೇವ್ ಜತೆ ಊರಿಗೆ ಹಿಂದಿರುಗುತ್ತಿದ್ದ. ಗೋಪಾಲ್ ಮೇಲೆ ದಾಳಿ ನಡೆಸಲು ನಿತೀಶ್ ಇಬ್ಬರು ಬಾಡಿಗೆ ಗೂಂಡಾಗಳನ್ನು ರೂ.5 ಲಕ್ಷ ನೀಡಿ ನೇಮಿಸಿದ್ದನೆಂದು ಪೊಲೀಸರು ಹೇಳಿದ್ದಾರೆ.
ಅನಿವಾಸಿ ದಂಪತಿಯನ್ನು ಲಂಡನ್ ನಲ್ಲಿ ಬಂಧಿಸಲು ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ.