×
Ad

ಕೇರಳದಲ್ಲಿ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಇಳಿಕೆ

Update: 2017-02-15 12:04 IST

ತೃಶೂರ್,ಫೆ. 15: ಕೇರಳದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ಭ್ರೂಣಹತ್ಯೆ ಮತ್ತು ಲಿಂಗ ನಿರ್ಣಯಗಳು ಹೆಚ್ಚಳಗೊಳ್ಳುತ್ತಿರುವುದು ಇದಕ್ಕೆ ಕಾರಣವೆಂದು ಹೇಳಲಾಗಿದೆ. ಆರುವರ್ಷದ ಲೆಕ್ಕ ಪರಿಶೀಲಿಸಿದಾಗ ಗಂಡು-ಹೆಣ್ಣು ಲಿಂಗಾನುಪಾತದಲ್ಲಿ ಇಳಿಕೆ ಕಂಡು ಬಂದಿದೆ. ಸ್ವಯಂಸೇವಾ ಸಂಘಟನೆಗಳು ಮತ್ತು ಸರಕಾರಿ ಏಜೆನ್ಸಿಗಳು ನಡೆಸಿದ ಅಧ್ಯಯನದಲ್ಲಿ ಈ ವಿಷಯ ಬೆಳಕಿಗೆ ಬಂದಿದೆ.

ಸ್ಕಾನಿಂಗ್ ಸೆಂಟರ್‌ಗಳು, ಆಸ್ಪತ್ರೆಗಳು ಮುಂತಾದೆಡೆ ಲಿಂಗನಿರ್ಣಯ ಮಾಡುವುದು ಮತ್ತು ಗರ್ಭಪಾತ ಮಾಡಿಸುವುದು ಹೆಣ್ಣುಮಕ್ಕಳ ಜನನ ಸಂಖ್ಯೆ ಕಡಿಮೆಗೊಳ್ಳಲು ಕಾರಣವೆಂದು ಅಧ್ಯಯನ ನಡೆಸಿದ ಏಜೆನ್ಸಿಗಳು ಬಹಿರಂಗಪಡಿಸಿವೆ.

ರಾಜ್ಯದಲ್ಲಿ ತೃಶೂರಿನಲ್ಲಿ ಹೆಣ್ಣುಮಕ್ಕಳ ಜನನ ಅನುಪಾತದಲ್ಲಿ ಗಂಭೀರ ಇಳಿಕೆಯಾಗಿದೆ. 2001ರ ಜನಗಣತಿ  ಪ್ರಕಾರ ಸಾವಿರ ಗಂಡು ಮಕ್ಕಳಿಗೆ 958 ಹೆಣ್ಣುಮಕ್ಕಳಂತೆ ಇದ್ದರು. 2011ರಲ್ಲಿ ಇದು 950ಕ್ಕೆ ಇಳಿಕೆಯಾಗಿದೆ. ಈಗ ಅದಕ್ಕಿಂತಲೂ ಕಡಿಮೆಯಾಗಿದೆ ಎಂದು ಅನಧಿಕೃತ ಲೆಕ್ಕಗಳು ತಿಳಿಸಿವೆ. ಆದ್ದರಿಂದ ಕೇಂದ್ರಸರಕಾರದ ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯನ್ನು ತೃಶೂರಿನಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಸಂಬಂಧಪಟ್ಟವರು ಹೇಳುತ್ತಿದ್ದಾರೆ.

ವಾರ್ಷಿಕ ಸಮೀಕ್ಷೆಗಳಿಂದ ಸಂಗ್ರಹಿಸುವ ವಿವರಗಳ ಆಧಾರದಲ್ಲಿ ಗಂಡು-ಹೆಣ್ಣು ಅನುಪಾತಗಳನ್ನು ಅಧಿಕೃತವಾಗಿ ಲೆಕ್ಕಮಾಡಲಾಗುತ್ತಿದೆ. ಜನಗಣತಿ ಮತ್ತು ಐಸಿಡಿಎಸ್ ವಾರ್ಷಿಕ ಸಮೀಕ್ಷೆಯನ್ನು ಹೋಲಿಸಿ ನೋಡಿದಾಗ ಹೆಣ್ಣುಮಕ್ಕಳ ಜನನದಲ್ಲಿ ಇಳಿಕೆ ಗೊತ್ತಾಗುತ್ತದೆ. ಜನಗಣತಿ ಪ್ರಕಾರ ರಾಜ್ಯದಲ್ಲಿ ಲಿಂಗಾನುಪಾತ 964 ಆಗಿದ್ದರೆ. ಐಸಿಡಿಎಸ್ ಸಮೀಕ್ಷೆ ಪ್ರಕಾರ 961 ಆಗಿದೆ. ಅನಧಿಕೃತ ಸಮೀಕ್ಷೆಗಳಲ್ಲಿ ಈ ಅನುಪಾತ ಇನ್ನಷ್ಟು ಕಡಿಮೆಯಾಗಿದೆ.

ತೃಶೂರ್ ಜಿಲ್ಲೆಯ ಕೆಲವು ಆಸ್ಪತ್ರೆಗಳಲ್ಲಿ ಸ್ಕಾನಿಂಗ್ ಕೇಂದ್ರಗಳಲ್ಲಿ ಲಿಂಗನಿರ್ಣಯ ಗರ್ಭಪಾತ ವ್ಯಾಪಕವಾಗಿ ನಡೆಯುತ್ತಿದೆ ಎನ್ನುವ ಆಕ್ಷೇಪಗಳಿವೆ. ತಿಂಗಳ ಹಿಂದೆಯಷ್ಟೇ ಇಲ್ಲಿನ ಇಂತಹದೊಂದು ಸಂಸ್ಥೆಯ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗಿದೆ.

ಸಮೀಕ್ಷೆಯ ವರದಿಗಳ ಆಧಾರದಲ್ಲಿ ಸ್ಕಾನಿಂಗ್ ಸೆಂಟರ್‌ಗಳು, ಬಂಜೆತನಕ್ಕೆ ಚಿಕಿತ್ಸೆ ಕೇಂದ್ರಗಳನ್ನು ನಿಯಂತ್ರಿಸಲು ಮತ್ತು ಕ್ರಮಕೈಗೊಳ್ಳಲು ಕೇರಳ ಆರೋಗ್ಯಸಚಿವಾಲಯ ತೀರ್ಮಾನಿಸಿದೆ. ಈ ಕಾರಣಗಳಿಂದಾಗಿ ಸ್ಕಾನಿಂಗ್ ಸೆಂಟರ್‌ಗಳ ಮೇಲೆ ಕಠಿಣ ನಿಗಾವಿರಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News