ಕ್ರೈಸ್ತರಿಂದ ಸದ್ದಿಲ್ಲದೆ ದೊಡ್ಡ ಪ್ರಮಾಣದಲ್ಲಿ ಮತಾಂತರ: ಕೇಂದ್ರ ಸಚಿವ ಗಿರಿರಾಜ್ ಸಿಂಗ್
ಅಹಮದಾಬಾದ್, ಫೆ.15: ಕ್ರೈಸರು ‘ಸದ್ದಿಲ್ಲದೆ’ ದೊಡ್ಡ ಪ್ರಮಾಣದಲ್ಲಿ ಜನರನ್ನು ಮತಾಂತರಗೊಳಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಆರೋಪಿಸಿದ್ದಾರೆ. ಅದೇ ಸಮಯ ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಯನ್ನು ನಿಯಂತ್ರಿಸಲು ಕಾನೂನು ಜಾರಿಗೆ ತರಲು ವಿಪಕ್ಷಗಳ ಸಹಕಾರವನ್ನೂ ಅವರು ಬಯಸಿದ್ದಾರೆ.
ಸಿಂಗ್ ಅವರು ಹಿರಿಯ ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ ಅವರೊಂದಿಗೆ ಗುಜರಾತ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ನಿರ್ಮಲಾ ವಾಧ್ವಾನಿ ಅವರ ಪುತ್ರಿಯ ವಿವಾಹ ಪೂರ್ವ ಸಮಾರಂಭಗಳಲ್ಲಿ ಭಾಗವಹಿಸಲು ಗಾಂಧಿನಗರಕ್ಕೆ ಬಂದಿದ್ದರು.
ಮುಂದುವರಿದು ಮಾತನಾಡಿದ ಸಿಂಗ್ ‘‘ಪ್ರಸಕ್ತ ಭಾರತದ ಜನಸಂಖ್ಯೆ ವಿಶ್ವದ ಒಟ್ಟು ಜನಸಂಖ್ಯೆಯ ಶೇ 17.5ರಷ್ಟಿರುವುದರಿಂದ ಅದನ್ನು ನಿಯಂತ್ರಿಸುವುದು ಇಂದಿನ ಅಗತ್ಯವಾಗಿದೆ ’’ ಎಂದು ಹೇಳಿದರು.
‘‘ಹಿಂದೂಗಳು ಯಾವತ್ತೂ ಜನರನ್ನು ತಮ್ಮ ಧರ್ಮಕ್ಕೆ ಮತಾಂತರಿಸದೇ ಇರುವುದರಿಂದ ಅವರ ಜನಸಂಖ್ಯೆ ಕಡಿಮೆಯಾಗುತ್ತಿದೆ ಹಾಗೂ ಅಲ್ಪಸಂಖ್ಯಾತರ ಜನಸಂಖ್ಯೆ ವೃದ್ಧಿಸುತ್ತಿದೆ’’ ಎಂದು ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಸೋಮವಾರವಷ್ಟೇ ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದು. ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ರಿಜಿಜು ಅವರ ಹೇಳಿಕೆಯನ್ನು ಸಮರ್ಥಿಸಿರುವ ಗಿರಿರಾಜ್ ಸಿಂಗ್ ‘‘1947ರಲ್ಲಿ ದೇಶದ ಶೇ.90ರಷ್ಟು ಜನಸಂಖ್ಯೆ ಹಿಂದೂ ಆಗಿದ್ದರೆ ಲೇಟೆಸ್ಟ್ ಸಮೀಕ್ಷೆಯ ಪ್ರಕಾರ ಹಿಂದೂಗಳು ದೇಶದ ಒಟ್ಟು ಜನಸಂಖ್ಯೆಯ ಶೇ.72ರಷ್ಟಿದ್ದಾರೆ,’’ ಎಂದು ಹೇಳಿದರು.