ಶಬರಿಮಲೆ ವಿಮಾನ ನಿಲ್ದಾಣಕ್ಕೆ ತಾತ್ವಿಕ ಒಪ್ಪಿಗೆ
ತಿರುವನಂತಪುರಂ, ಫೆ.15: ಶಬರಿಮಲೆಯಲ್ಲಿರುವ ಅಯ್ಯಪ್ಪ ದೇಗುಲಕ್ಕೆ ಪ್ರತೀ ವರ್ಷ ಭೇಟಿ ನೀಡುವ ಲಕ್ಷಾಂತರ ಭಕ್ತಾದಿಗಳ ಅನುಕೂಲಕ್ಕಾಗಿ ಶಬರಿಮಲೆಯಲ್ಲಿ ಹಸಿರುಬಯಲು ವಿಮಾನನಿಲ್ದಾಣ ಸ್ಥಾಪನೆಯ ಪ್ರಸ್ತಾವನೆಗೆ ಕೇರಳ ಸಚಿವ ಸಂಪುಟ ಇಂದು ತಾತ್ವಿಕ ಒಪ್ಪಿಗೆ ನೀಡಿದೆ. ಪ್ರಸ್ತುತ ರಸ್ತೆ ಸಂಚಾರ ಮಾತ್ರವೇ ಈ ಪ್ರಸಿದ್ಧ ದೇಗುಲಕ್ಕೆ ಇರುವ ಏಕೈಕ ಸಂಪರ್ಕ ವ್ಯವಸ್ಥೆಯಾಗಿದೆ.
ವಿಮಾನ ನಿಲ್ದಾಣ ಸ್ಥಾಪನೆ ಪ್ರಸ್ತಾವನೆ ಕುರಿತು ಅಧ್ಯಯನ ನಡೆಸುವಂತೆ ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಸಂಪುಟ ಸಭೆಯಲ್ಲಿ ಸೂಚಿಸಲಾಯಿತು.
ವರ್ಷದಿಂದ ವರ್ಷಕ್ಕೆ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವ ಮತ್ತು ನವೆಂಬರ್-ಜನವರಿ ಅವಧಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚುವುದರಿಂದ ಸಂಚಾರ ವ್ಯವಸ್ಥೆಗೆ ಆಗುತ್ತಿರುವ ತೊಂದರೆಯ ಹಿನ್ನೆಲೆಯಲ್ಲಿ, ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣವೊಂದೇ ಸಮಸ್ಯೆ ಪರಿಹಾರಕ್ಕೆ ಇರುವ ಮಾರ್ಗ ಎಂದು ತೀರ್ಮಾನಿಸಲಾಯಿತು.
ಶಬರಿಮಲೆ ದೇವಸ್ಥಾನದ ಬಳಿ ಇರುವ ಏರುಮಲೆಯಲ್ಲಿ ವಿಮಾನ ನಿಲ್ದಾಣ ಸ್ಥಾಪಿಸುವ ಪ್ರಸ್ತಾವನೆಯಿದೆ. ಕೇರಳದ ಪಟ್ಟಣಂತಿಟ್ಟ ಜಿಲ್ಲೆಯಲ್ಲಿರುವ ಏರುಮಲೈ ಪ್ರದೇಶವು ಶಬರಿಮಲೆ ದೇವಳಕ್ಕಿಂತ 45 ಕಿ.ಮೀ. ದೂರದಲ್ಲಿದೆ.