×
Ad

ಶಶಿಕಲಾ ವಿರುದ್ಧದ ಹೋರಾಟ ಮುಂದುವರಿಕೆ: ಪನ್ನೀರ್‌ಸೆಲ್ವಂ

Update: 2017-02-16 19:48 IST

ಚೆನ್ನೈ, ಫೆ.16: ರಾಜ್ಯದಲ್ಲಿ ಜಯಲಲಿತಾ ಆಡಳಿತ ವ್ಯವಸ್ಥೆ ಮರುಸ್ಥಾಪನೆ ಆಗುವವರೆಗೆ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ನಿರ್ಗಮನ ಮುಖ್ಯಮಂತ್ರಿ ಒ.ಪನ್ನೀರ್‌ಸೆಲ್ವಂ ಹೇಳಿದ್ದಾರೆ.

ಸರಕಾರ ಮತ್ತು ಪಕ್ಷದ ಚುಕ್ಕಾಣಿ ಒಂದೇ ಕುಟುಂಬದ ಹಿಡಿತಕ್ಕೆ ಮತ್ತೊಮ್ಮೆ ಸಿಗದಂತೆ ನಾವೆಲ್ಲಾ ತಡೆಯಬೇಕು. ಮತ್ತೆ ಜನರ ಸರಕಾರ ಸ್ಥಾಪನೆಯಾಗುವರೆಗೆ ಹೋರಾಟ ಮುಂದುವರಿಯಲಿದೆ ಎಂದವರು ಹೇಳಿದರು.

ಶಶಿಕಲಾ ನಿಷ್ಠ ಮತ್ತು ಎಐಎಡಿಎಂಕೆ ಶಾಸಕಾಂಗ ಪಕ್ಷದ ಮುಖಂಡ ಇ.ಕೆ.ಪಳನಿಸ್ವಾಮಿ ಅವರನ್ನು ಸರಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ನ್ನೀರ್‌ಸೆಲ್ವಂ, ಎಐಎಡಿಎಂಕೆ ಪಕ್ಷವು ಒಂದು ಕುಟುಂಬದ ಆಸ್ತಿಯಾಗಬಾರದು ಎಂಬ ಏಕೈಕ ಕಾರಣದಿಂದ ಈ ಹೋರಾಟ ಆರಂಭಿಸಲಾಗಿದೆ ಎಂದರು.

ತನ್ನನ್ನು ಬೆಂಬಲಿಸಿದ ಪಕ್ಷದ ಮುಖಂಡರು, ಸಚಿವರು, ಸಂಸದರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ ಅವರು, ರಾಜ್ಯದ ಜನತೆ ತನ್ನ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ರೆಸಾರ್ಟ್‌ನಲ್ಲಿ ಬಲವಂತವಾಗಿ ಕೂಡಿಹಾಕಲಾಗಿರುವ ಶಾಸಕರ ಸಂಖ್ಯೆಯ ಆಧಾರದಲ್ಲಿ ಹೊಸ ಸರಕಾರ ರಚನೆಯಾಗಿದೆ ಎಂದು ಜನರು ವ್ಯಾಕುಲಗೊಂಡಿದ್ದಾರೆ ಎಂದರು. ಜನರ ಕ್ಷೇಮಾಭಿವೃದ್ಧಿಯನ್ನೇ ಪ್ರಧಾನ ಗುರಿಯಾಗಿಸಿಕೊಂಡಿದ್ದ ‘ಅಮ್ಮ’ನ ಆಡಳಿತ ವ್ಯವಸ್ಥೆಯು ಕುಟುಂಬವೊಂದರ ಸ್ವಹಿತಾಸಕ್ತಿ ಕಾಯುವ ಸರಕಾರದ ಪಾಲಾಗಬಾರದು ಎಂದ ಪನ್ನೀರ್‌ಸೆಲ್ವಂ, ಜನರ ಅಥವಾ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ಬೆಲೆಯೇ ನೀಡದೆ ಈ ರೀತಿಯ ಸರಕಾರ ರಚನೆ ಪ್ರಕ್ರಿಯೆ ನಡೆದಿದೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News