ಇವರು ಬಿಜೆಪಿಯ ಸಂಭಾವ್ಯ ಉತ್ತರ ಪ್ರದೇಶ ಸಿಎಂ ಅಭ್ಯರ್ಥಿ !
ಲಕ್ನೊ, ಫೆ.17: ಸುಮಾರು 18 ವರ್ಷದ ಹಿಂದೆ ದೇವಮಾನವರೊಬ್ಬರು ಅವರಿಗೆ ಹಾರವೊಂದನ್ನು ಕಾಣಿಕೆಯಾಗಿ ನೀಡಿ- ಕೆಂಪು ಗೂಟದ ಕಾರು ನಿಮ್ಮನ್ನು ಬಿಡುವುದಿಲ್ಲ ಎಂದು ಆಶೀರ್ವದಿಸಿದ್ದರು. ಇದೀಗ ಲಕ್ನೊ ನಗರಪಾಲಿಕೆ ಮೇಯರ್ ಆಗಿ ತಮ್ಮ ದ್ವಿತೀಯ ಅವಧಿಯನ್ನು ಪೂರೈಸಲಿರುವ ಮೇಯರ್ ದಿನೇಶ್ ಶರ್ಮರಿಗೆ, ದೇವಮಾನವರ ಆಶೀರ್ವಾದದ ಬಲದಿಂದ ರಾಜ್ಯದ ಮುಖ್ಯಮಂತ್ರಿಯಾಗುವ ಯೋಗ ಕೂಡಿಬರಲಿದೆ ಎಂಬ ನಿರೀಕ್ಷೆ ಹಲವರಲ್ಲಿದೆ.
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಲಕ್ನೊ ನಗರಪಾಲಿಕೆ ಮೇಯರ್ ದಿನೇಶ್ ಶರ್ಮ ಸಾಧ್ಯತೆಯಿದೆ ಎಂಬ ಮಾತು ಕೇಳಿಬರುತ್ತಿದೆ. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ 53ರ ಹರೆಯದ ಶರ್ಮ, ಪ್ರಧಾನಿ ಮೋದಿಯ ನಂಬಿಕಸ್ತನಷ್ಟೇ ಅಲ್ಲ, ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಿಯಾಗಿರುವ ಆರೆಸ್ಸೆಸ್‌ನ ಬೆಂಬಲ ಕೂಡಾ ಪಡೆದವರು. ಆರೆಸ್ಸೆಸ್ ಮುಖಂಡ ದೀನದಯಾಳ್ ಉಪಾಧ್ಯಾಯರು ಶರ್ಮರ ತಂದೆಯ ಆಪ್ತರಾಗಿದ್ದು ಹಲವಾರು ಬಾರಿ ಅವರ ಮನೆಗೆ ಭೇಟಿ ನೀಡಿದ್ದರು.
ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿಯಾಗಲು ಅಖಿಲೇಶ್ ಯಾದವ್, ಮಾಯಾವತಿಗಿಂತಲೂ ಹೆಚ್ಚಿನ ಸಮರ್ಥರು ಬಹಳಷ್ಟು ಮಂದಿ ಇರುವಾಗ ಮುಖ್ಯಮಂತ್ರಿಯಾಗಿ ನನ್ನನ್ನು ಬಿಂಬಿಸುತ್ತಾರೆ ಎಂದು ನನಗನಿಸುವುದಿಲ್ಲ ಎಂದು ಶರ್ಮ ಹೇಳುತ್ತಾರೆ. ನಾನೋರ್ವ ಪಕ್ಷದ ಸಾಮಾನ್ಯ ಕಾರ್ಯಕರ್ತ. ಇಂದು ಅರುಣ್ ಜೇಟ್ಲೀ ಸುದ್ದಿಗೋಷ್ಠಿ ನಡೆಸಿದಾಗ ನಾನು ಸಭೆಯ ಮೂಲೆಯಲ್ಲಿ ಕುಳಿತಿದ್ದೆ ಎನ್ನುತ್ತಾರೆ ಶರ್ಮ.
ಶರ್ಮ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೂ ಆಪ್ತರಾಗಿದ್ದವರು. ಬಿಜೆಪಿ ಯುವ ವಿಭಾಗದ ಸ್ಥಳಿಯ ಘಟಕಾಧ್ಯಕ್ಷರಾಗಿ ಎರಡು ಬಾರಿ ನೇಮಕಗೊಂಡಿದ್ದರು. ದಶಕದ ಹಿಂದೆ ಶರ್ಮ ನಗರಪಾಲಿಕೆ ಮೇಯರ್ ಚುನಾವಣೆಗೆ ನಿಂತಾಗ ಅವರ ಪರ ಪ್ರಚಾರ ಕಾರ್ಯ ನಡೆಸಿದ್ದೇ ವಾಜಪೇಯಿ ನಡೆಸಿದ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿತ್ತು.
ರಾಜ್ಯದಲ್ಲಿ ಕಾಂಗ್ರೆಸ್-ಎಸ್ಪಿ ಮೈತ್ರಿಯನ್ನು ಟೀಕಿಸುವ ಅವರು, ಅಖಿಲೇಶ್‌ರ ತಂದೆಗೇ ಇದು ಸರಿಯಲ್ಲ ಎಂದು ಅನಿಸಿರುವಾಗ , ರಾಜ್ಯದ ಜನತೆಗೆ ಸರಿ ಅನಿಸೀತೇ ಎಂದು ಪ್ರಶ್ನಿಸುತ್ತಾರೆ.
‘ಕೆಲಸವೇ ಹೇಳುತ್ತದೆ ’ ಎಂಬ ಎಸ್ಪಿ ಪಕ್ಷದ ಘೋಷಣೆಯನ್ನು ಉಲ್ಲೇಖಿಸಿದ ಶರ್ಮ, ತಾನು ಹೆಚ್ಚಿನ ಕಾರ್ಯ ಏನೂ ಮಾಡಿಲ್ಲ ಎಂದು ಮನವರಿಕೆಯಾಗಿದ ಕಾರಣ ಅಖಿಲೇಶ್ ಈ ರೀತಿಯ ಜಾಹೀರಾತಿಗೆ ಮುಂದಾಗಬೇಕಿದೆ ಎಂದು ಟೀಕಿಸಿದರು.
ರಾಹುಲ್ ಅವರ ಜೊತೆಗಾರಿಕೆಯಿಂದ ಅಖಿಲೇಶ್ ಕೂಡಾ ತಮ್ಮ ಲಯ ತಪ್ಪುತ್ತಿದ್ದಾರೆ. ರ್ಯಾಲಿಯಲ್ಲಿ ಪಾಲ್ಗೊಳ್ಳುತ್ತಿರುವ ಅವರು, ಒಳ್ಳೆಯ ದಿನ ಬಂದಿತೇ ಎಂದು ಕೇಳಿದಾಗ ಜನ - ಇಲ್ಲ ಎನ್ನುತ್ತಿದ್ದಾರೆ. ವಾಸ್ತವವಾಗಿ ಜನರು ಅಖಿಲೇಶರ ಕಾರ್ಯವೈಖರಿಯನ್ನು ನೋಡಿ ಈ ರೀತಿ ಹೇಳುತ್ತಿದ್ದಾರೆ ಎಂಬುದು ಅವರಿಗೆ ತಿಳಿದಿಲ್ಲ ಎಂದು ವ್ಯಂಗ್ಯವಾಡಿದರು.
ನೋಟು ಅಮಾನ್ಯ ಪ್ರಕ್ರಿಯೆಯ ಕಾರಣ ಮರಣಹೊಂದಿದ ವಿಷಯವನ್ನು ರಾಜಕೀಯಗೊಳಿಸಲು ರಾಹುಲ್-ಅಖಿಲೇಶ್ ಪ್ರಯತ್ನಿಸುತ್ತಿದ್ದಾರೆ. ಆದರೆ ಎಲ್ಲಾ ಸಾವು ಕೂಡಾ ದುರದೃಷ್ಟಕರವಾದುದು. ರಾಹುಲ್ ಮತ್ತು ಅಖಿಲೇಶ್‌ರಿಂದಾಗಿ ಯೂರಿಯಾ ಮತ್ತು ಸೀಮೆ ಎಣ್ಣೆಗಾಗಿ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಎಷ್ಟು ಜನ ಮರಣ ಹೊಂದಿದ್ದಾರೆ ಎಂಬ ಲೆಕ್ಕ ಅವರು ಕೊಡುತ್ತಾರೆಯೇ ಎಂದು ಶರ್ಮ ಪ್ರಶ್ನಿಸಿದರು. ಮುಸ್ಲಿಮ್ ಧಾರ್ಮಿಕ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಅಥವಾ ಎಸ್ಪಿ ಪಕ್ಷಕ್ಕೆ ಓಟು ನೀಡಿ ಎನ್ನುತ್ತಿರುವುದು ಸರಿಯೇ. ಉತ್ತರಪ್ರದೇಶವು ಈಗ ಫತ್ವಾದ ಆಧಾರದಲ್ಲಿ ಮುನ್ನಡೆಯಬೇಕೇ ಎಂದು ಪ್ರಶ್ನಿಸಿದರು.