×
Ad

ರಾಜನ್ ಗವರ್ನರ್ ಆಗಿದ್ದ ಸಂದರ್ಭ ಮುದ್ರಿಸಿದ 2000 ರೂ. ನೋಟಿನಲ್ಲಿ ಇರುವುದು ಪಟೇಲ್ ಸಹಿ..!

Update: 2017-02-18 20:11 IST

ಹೊಸದಿಲ್ಲಿ, ಫೆ.18: ಹೊಸದಾಗಿ ಆರಂಭಿಸಲಾದ 2000 ರೂ. ನೋಟಿನ ಮುದ್ರಣ ಪ್ರಕ್ರಿಯೆ ರಘುರಾಮ್ ರಾಜನ್ ಆರ್‌ಬಿಐ ಗವರ್ನರ್ ಆಗಿದ್ದ ಸಂದರ್ಭದಲ್ಲೇ ಶುರುವಾಗಿತ್ತು. ಆದರೆ ಈ ನೋಟುಗಳು ಪ್ರಸ್ತುತ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿಯನ್ನು ಹೊಂದಿದ್ದವು.

ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ತನಿಖಾ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ.

    ಊರ್ಜಿತ್ ಪಟೇಲ್ ಅವರು ಮುಂದಿನ ಆರ್‌ಬಿಐ ಗವರ್ನರ್ ಎಂದು ಸರಕಾರ ಘೋಷಿಸಿದ ಮರುದಿನ , ಅಂದರೆ ಕಳೆದ ವರ್ಷದ ಆಗಸ್ಟ್ 22ರಂದು ನೋಟು ಮುದ್ರ ಣ ಕಾರ್ಯದ ಪ್ರಥಮ ಹಂತದ ಪ್ರಕ್ರಿಯೆಗೆ ಚಾಲನೆ ದೊರೆತಿತ್ತು ಎಂದು ನೋಟುಗಳ ಮುದ್ರಣ ಕಾರ್ಯ ನಡೆಸುವ ಎರಡು ಆರ್‌ಬಿಐ ಪ್ರೆಸ್‌ಗಳು ಮಾಹಿತಿ ನೀಡಿವೆ. ಅದಾಗ್ಯೂ, ಪಟೇಲ್ ಆರ್‌ಬಿಐ ಗವರ್ನರ್ ಹುದ್ದೆಯನ್ನು ವಹಿಸಿಕೊಂಡಿದ್ದು ಸೆಪ್ಟೆಂಬರ್ 4ರಂದು. ಹೊಸದಾಗಿ ಮುದ್ರಣಗೊಳ್ಳುವ ನೋಟುಗಳು ನಿರ್ಗಮಿತ ಗವರ್ನರ್ ಅವರ ಸಹಿಯನ್ನು ಯಾಕೆ ಒಳಗೊಂಡಿಲ್ಲ ಎಂಬ ಪ್ರಶ್ನೆ ಇಲ್ಲಿ ಮೂಡುತ್ತದೆ.

 ಹೊಸ ನೋಟುಗಳಲ್ಲಿ ರಾಜನ್ ಸಹಿ ಯಾಕಿಲ್ಲ ಮತ್ತು ಹೊಸ ನೋಟುಗಳನ್ನು ಚಲಾವಣೆಗೆ ತರುವ ನಿರ್ಧಾರ ಕೈಗೊಂಡ ತಂಡದಲ್ಲಿ ರಾಜನ್ ಇದ್ದರೇ ಎಂಬ ಪ್ರಶ್ನೆಯನ್ನು ಇ-ಮೇಲ್ ಮೂಲಕ ಆರ್‌ಬಿಐಗೆ ಮತ್ತು ವಿತ್ತ ಸಚಿವಾಲಯಕ್ಕೆ ಕಳಿಸಲಾಗಿತ್ತು. ಆದರೆ ಇದಕ್ಕೆ ಉತ್ತರ ಬಂದಿಲ್ಲ. ರಾಜನ್ ಅವರಿಗೂ ಕಳಿಸಲಾಗಿದ್ದ ಇದೇ ರೀತಿಯ ಪ್ರಶ್ನೆಗೂ ಉತ್ತರ ದೊರೆತಿಲ್ಲ. ಆದರೆ ಹಿಂದೂಸ್ತಾನ್ ಟೈಮ್ಸ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ರಾಜನ್ ಅವರಿನ್ನೂ ಅಧಿಕಾರದಲ್ಲಿದ್ದಾಗಲೇ ಹೊಸ ನೋಟುಗಳ ಮುದ್ರಣ ಕಾರ್ಯ ಆರಂಭಿಸಲಾಗಿತ್ತು.

 ಆರ್‌ಬಿಐ ಕಳೆದ ಡಿಸೆಂಬರ್‌ನಲ್ಲಿ ಸಂಸದೀಯ ಸಮಿತಿಯೆದುರು ನೀಡಿದ ಹೇಳಿಕೆಯಲ್ಲಿ , ಹೊಸ ನೋಟುಗಳನ್ನು ಮುದ್ರಿಸಲು ತನಗೆ 2016ರ ಜೂನ್ 7ರಂದು ಅನುಮತಿ ದೊರೆತಿತ್ತು . ಇದರಂತೆ, ಹೊಸ ನೋಟುಗಳ ಮುದ್ರಣ ಪ್ರಕ್ರಿಯೆ ಆರಂಭಿಸುವಂತೆ ಜೂನ್ ತಿಂಗಳಿನಲ್ಲಿ ಪ್ರೆಸ್‌ಗಳಿಗೆ ಸೂಚಿಸಲಾಗಿತ್ತು ಎಂದು ತಿಳಿಸಿತ್ತು.

 ಸಾಮಾನ್ಯವಾಗಿ ಹೊಸ ನೋಟುಗಳನ್ನು ಮುದ್ರಿಸುವಂತೆ ಆರ್‌ಬಿಐ ಆದೇಶಿಸಿದ ಕೂಡಲೇ ನೋಟುಗಳ ಮುದ್ರಣ ಪ್ರಕ್ರಿಯೆ ಆರಂಭವಾಗುತ್ತದೆ. ಆದರೆ ಇಲ್ಲಿ ಎರಡೂವರೆ ತಿಂಗಳ ಬಳಿಕ , ಅಂದರೆ ಆಗಸ್ಟ್ 22ರಂದು ಆರಂಭವಾಗಿದೆ.

  ನೋಟುಗಳ ಸುರಕ್ಷಾ ಲಕ್ಷಣಗಳಲ್ಲಿ ಸೂಚಿಸಿದ ಬದಲಾವಣೆಗಳನ್ನು ಮೊದಲಿಗೆ ಆರ್‌ಬಿಐ ಮಂಡಳಿ ಅನುಮೋದಿಸಿದ ಬಳಿಕ ಬಿಆರ್‌ಬಿಎನ್‌ಎಂಪಿಎಲ್(ಭಾರತೀಯ ರಿಸರ್ವ್ ಬ್ಯಾಂಕ್ ನೋಟು ಮುದ್ರಣ ಪ್ರೈ.ಲಿ)ನ ಆಡಳಿತ ಮಂಡಳಿಯಿಂದ ಅನುಮೋದನೆ ಪಡೆಯಲಾಗುತ್ತದೆ. ಬಳಿಕ ನೋಟುಗಳ ಮುದ್ರಣಾ ಕಾರ್ಯ ಆರಂಭಿಸಲಾಗುತ್ತದೆ ಎಂದು ಆರ್‌ಬಿಐ ಮತ್ತು ಬಿಆರ್‌ಬಿಎನ್‌ಎಂಪಿಎಲ್ ಆಡಳಿತ ಮಂಡಳಿಯ ಮಾಜಿ ಸದಸ್ಯ ವಿಪಿನ್ ಮಲಿಕ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News