×
Ad

ಖ್ಯಾತ ಹಿಂದಿ ಕಾದಂಬರಿಕಾರ ವೇದ್‌ಪ್ರಕಾಶ್ ಶರ್ಮ ನಿಧನ

Update: 2017-02-18 23:42 IST

ಹೊಸದಿಲ್ಲಿ, ಫೆ.18: ಖ್ಯಾತ ಹಿಂದಿ ಕಾದಂಬರಿಕಾರ ವೇದ್‌ಪ್ರಕಾಶ್ ಶರ್ಮ ಫೆ.17ರಂದು ಕೊನೆಯುಸಿರೆಳೆದರು. ಅವರಿಗೆ 62 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದ ಅವರು ಅನಾರೋಗ್ಯಕ್ಕೊಳಗಾಗಿದ್ದರು. 176 ಕಾದಂಬರಿಗಳನ್ನು ಬರೆದಿದ್ದ ಅವರು, ಕೆಲವು ಹಿಂದಿ ಸಿನೆಮಾಗಳಿಗೆ ಸಾಹಿತ್ಯವನ್ನೂ ರಚಿಸಿದ್ದರು. ಉತ್ತರಪ್ರದೇಶದ ಮೀರತ್‌ನಲ್ಲಿ ಜನಿಸಿದ್ದ ಶರ್ಮ, ಆರಂಭದ ದಿನಗಳಲ್ಲಿ ಗುಪ್ತನಾಮದಲ್ಲಿ 23 ಕಾದಂಬರಿ ಬರೆದು ಪ್ರಕಟಿಸಿದ್ದರು. 1973ರಲ್ಲಿ ತಮ್ಮ ‘ದಹೆಕ್ತೆ ಶಹರ್’ ಕಾದಂಬರಿಯಿಂದ ಪ್ರಸಿದ್ದಿಯನ್ನು ಪಡೆದರು. ‘ಖೈದಿ ನಂ.100, ವರ್ದಿ ವಾಲಾ ಗೂಂಡ’ ಮುಂತಾದ ಕಾದಂಬರಿಗಳು ಅತ್ಯಂತ ಹೆಚ್ಚು ಮಾರಾಟವಾದ ದಾಖಲೆಗೆ ಪಾತ್ರವಾಗಿದ್ದವು. ಆರಕ್ಕೂ ಹೆಚ್ಚು ಹಿಂದಿ ಸಿನೆಮಾಗಳಿಗೆ ಸಾಹಿತ್ಯ ರಚಿಸಿದ್ದು , ಇವರ ‘ಬಹು ಮಾಂಗೆ ಇನ್ಸಾಫ್’ ಕಾದಂಬರಿಯನ್ನು 1985ರಲ್ಲಿ ಹಿಂದಿಯಲ್ಲಿ ಸಿನೆಮಾ ಮಾಡಲಾಗಿತ್ತು. 1992ರ ‘ಅನಾಮ್’, 1995ರ ‘ಸಬ್ಸೆ ಬಡಾ ಖಿಲಾಡಿ’ ಸಿನೆಮಾದ ಕಥೆಗೆ ಇವರ ಕಾದಂಬರಿ ಮೂಲವಾಗಿತ್ತು. 1999ರಲ್ಲಿ ಬಿಡುಗಡೆಯಾದ ‘ಇಂಟರ್‌ನ್ಯಾಷನಲ್ ಖಿಲಾಡಿ’ ಸಿನೆಮಾದ ಸಾಹಿತ್ಯ ರಚನೆ ಇವರದಾಗಿತ್ತು. ಕೇಶವ ಪಂಡಿತ್ ಎಂಬ ಕಲ್ಪಿತ ವ್ಯಕ್ತಿತ್ವವನ್ನು ಆಧಾರವಾಗಿಟ್ಟುಕೊಂಡು ಹಲವಾರು ಕಾದಂಬರಿ ಮತ್ತು ಟಿವಿ ಧಾರಾವಾಹಿ ರಚಿಸಿದ್ದರು. 1992 ಮತ್ತು 94ರಲ್ಲಿ ಮೀರತ್ ರತ್ನ ಪ್ರಶಸ್ತಿ ಪಡೆದಿದ್ದರು. 1995ರಲ್ಲಿ ‘ನಟರಾಜ್ ಪುರಸ್ಕಾರ’ 2008ರಲ್ಲಿ ‘ನಟರಾಜ್ ಭೂಷಣ್’ ಪುರಸ್ಕಾರಕ್ಕೆ ಪಾತ್ರರಾಗಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News