ನಿಮ್ಮನ್ನು ಹೊರಗೆ ಹಾಕುವುದು ಅವರಿಗೆ ಕಷ್ಟ ಸಾರ್...

Update: 2017-02-19 08:59 GMT

ಉತ್ತರಪ್ರದೇಶವೂ ಸೇರಿದಂತೆ ವಿವಿಧ ವಿಧಾನಸಭಾಚುನಾವಣೆಯಲ್ಲಿ ಮೋದಿ ಸೋಲುತ್ತಾರೆ. ಸೋಲದೆ ಇದ್ದರೆ ನಾನು ರಾಜಕೀಯದಿಂದ ನಿವೃತ್ತವಾಗುತ್ತೇನೆ ಎಂದು ಕಾಂಗ್ರೆಸ್‌ನ ಒಂದಾನೊಂದು ಕಾಲದ ಸಾಲಮೇಳದ ರೂವಾರಿ, ಸದ್ಯಕ್ಕೆ ಪತ್ರಿಕಾಗೋಷ್ಠಿಗಳ ಸರದಾರ ಜನಾರ್ದನಪೂಜಾರಿಯವರು ಘೋಷಿಸಿದ್ದೇ ಸರಿ, ಆವರೆಗೆ ರಾಜ್ಯದಲ್ಲಿ ಮಲಗಿದ್ದ ಅದರಲ್ಲೂ ಕರಾವಳಿಯಲ್ಲಿ ಗೊರಕೆ ಹೊಡೆಯುತ್ತಿದ್ದ ಇತರ ಕಾಂಗ್ರೆಸ್ ಮುಖಂಡರೆಲ್ಲ ಒಂದಾಗಿ ಉತ್ತರ ಪ್ರದೇಶದ ಕಡೆಗೆ ಹೊರಟರು. ಅದನ್ನು ನೋಡಿ ಪತ್ರಕರ್ತ ಎಂಜಲು ಕಾಸಿಯೂ ಅವರ ಜೊತೆಗೆ ಸೇರಿಕೊಂಡ.

‘‘ಸಾರ್...ಉತ್ತರ ಪ್ರದೇಶಕ್ಕೆ ಕಾಂಗ್ರೆಸ್ ಪರ ಪ್ರಚಾರ ಮಾಡಲು ಹೊರಟಿದ್ದೀರಾ?’’ ಎಂಜಲು ಕಾಸಿ ಕೇಳಿದರು.

‘‘ರಾಜ್ಯದ ಚುನಾವಣೆಯಲ್ಲೇ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದವರಲ್ಲ...ಇನ್ನು ಉತ್ತರ ಪ್ರದೇಶದಲ್ಲಿ ಪ್ರಚಾರ ಮಾಡಲು ನಮಗೆಂತದು ತಲೆ ಕೆಟ್ಟಿದಾ?’’ ಯಾರೋ ಒಬ್ಬ ಕಾಂಗ್ರೆಸ್ ಮುಖಂಡ ಕೇಳಿದರು.

 ‘‘ಮತ್ತೆಂತಕ್ಕೆ ಸಾರ್ ಉತ್ತರ ಪ್ರದೇಶಕ್ಕೆ ಹೊರಟದ್ದು...’’ ಕಾಸಿ ಕುತೂಹಲದಿಂದ ಕೇಳಿದ.

‘‘ಬಿಜೆಪಿ ಪರವಾಗಿ ಪ್ರಚಾರ ಮಾಡಿ ಬಿಜೆಪಿಯನ್ನು ಗೆಲ್ಲಿಸುವುದಕ್ಕೆ...’’

ಕಾಸಿ ಅರ್ಥವಾಗದೇ ಆ ನಾಯಕರನ್ನೇ ನೋಡತೊಡಗಿದ.

ನಾಯಕರು ನಗುತ್ತಾ ಹೇಳಿದರು ‘‘ಅಲ್ಲರೀ...ಆ ನರೇಂದ್ರ ಮೋದಿ ಗೆದ್ದರೆ ಜನಾರ್ದನ ಪೂಜಾರಿಯವರು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾರೆ. ಅದಕ್ಕಾಗಿ ನಾವು ಬಿಜೆಪಿಯ ಪರವಾಗಿ ಚುನಾವಣಾ ಪ್ರಚಾರಕ್ಕೆ ಹೋಗುತ್ತಿದ್ದೇವೆ. ಹಾಗಾದರೂ ಒಮ್ಮೆ ಈ ಪೂಜಾರಿ ಮನೆಯಲ್ಲಿ ಕೂರಲಿ ಮಾರಾಯ್ರೆ....ಎಂತ ಉಪದ್ರ..ಎಂತ ಉಪದ್ರ...ತಾನೂ ಚುನಾವಣೆಯಲ್ಲಿ ಗೆಲ್ಲುವುದಿಲ್ಲ...ನಮ್ಮನ್ನು ನಿಲ್ಲಲು ಬಿಡುವುದಿಲ್ಲ....ಜೊತೆಗೆ ಈಗ ಪ್ರೆಸ್‌ಮೀಟ್ ಮಾಡುವುದಕ್ಕೆ ನಮಗೆ ಪ್ರೆಸ್‌ಕ್ಲಬ್ ಸಿಕ್ಕುವುದೇ ಇಲ್ಲ ಮಾರಾಯ್ರೆ...ಅವರು ಅಲ್ಲೇ ಚಾಪೆ ಹಾಕಿ ಮಲಗಿ ಬಿಟ್ಟಿದ್ದಾರೆ. ನಮಗೆ ಪ್ರೆಸ್ ಮೀಟ್ ಮಾಡಲು ಇದೆ ಎಂದರೆ, ಇಡೀ ವರ್ಷದ್ದು ಜನಾರ್ದನ ಪೂಜಾರಿಯವರು ಬುಕ್ ಮಾಡಿದ್ದಾರೆ. ಮುಂದಿನ ವರ್ಷ ಬನ್ನಿ ಎಂದು ಪ್ರೆಸ್‌ಕ್ಲಬ್ ಮೆನೇಜರ್ ಹೇಳುತ್ತಾರೆ. ಎಂತ ಹಾಗಾದ್ರೆ ನಾವು ಪ್ರೆಸ್ ಮೀಟ್ ಮಾಡುವುದು ಬೇಡವಾ? ಅವರಿಗೆ ರಾಜಕೀಯವೂ ಗೊತ್ತಿಲ್ಲ. ರಾಜಕೀಯವನ್ನೂ ಬಿಡುವುದಿಲ್ಲ, ಪ್ರೆಸ್‌ಕ್ಲಬ್‌ನ್ನೂ ಬಿಡುವುದಿಲ್ಲ. ಈ ಬಾರಿ ಮೋದಿಯೇನಾದರೂ ಗೆದ್ದರೆ ಅವರು ರಾಜಕೀಯ ನಿವೃತ್ತಿ ಮಾಡುತ್ತಾರ ಎಂಬ ಆಸೆಯಲ್ಲಿ ಅವರನ್ನು ಗೆಲ್ಲಿಸುವುದಕ್ಕೆ ನಾವು ಬಸ್ ಹತ್ತಿರುವುದು...’’ ಈ ಬಾರಿ ಜನಾರ್ದನ ಪೂಜಾರಿಯವರು ರಾಜಕೀಯ ನಿವೃತ್ತಿಯಾಗುವುದು ಖಂಡಿತ ಅನ್ನಿಸಿತು ಕಾಸಿಗೆ. ನೇರವಾಗಿ ಜನಾರ್ದನ ಪೂಜಾರಿಯವರಲ್ಲಿಗೆ ಓಡಿದ. ಅವರು ಮನೆಯಲ್ಲಿಲ್ಲ. ಕಾಂಗ್ರೆಸ್ ಕಚೇರಿಗೆ ಹೋದರೆ ‘‘ಅವರನ್ನು ಒಳಗೆ ಸೇರಿಸದೆ ವರ್ಷ ಆಗಿದೆ’ ಎಂದು ಉತ್ತರ ಸಿಕ್ಕಿತು.

‘‘ವುತ್ತೆಲ್ಲಿ ಸಿಗುತ್ತಾರೆ?’’ ಕಾಸಿ ಕೇಳಿದ.

‘‘ಮತ್ತೆಲ್ಲಿರ್ತಾರೆ? ಪ್ರೆಸ್ ಕ್ಲಬ್‌ನ ಗೇಟಿನ ಪಕ್ಕದಲ್ಲಿ ಸಿಗಬಹುದು’’ ಯಾರೋ ತುಚ್ಛವಾಗಿ ಹೇಳಿದರು.

ಕಾಸಿ ಪ್ರೆಸ್‌ಕ್ಲಬ್ ಕಡೆಗೆ ಓಡಿದ. ಅಲ್ಲಿ ನೋಡಿದರೆ ಪ್ರೆಸ್ ಕ್ಲಬ್‌ನ ಪಕ್ಕದಲ್ಲೇ ಇರುವ ಮರದಡಿಯಲ್ಲಿ ಕುಳಿತಿದ್ದರು.

‘‘ಸಾರ್ ನೀವೇನು ಇಲ್ಲಿ....’’ ಕಾಸಿ ಕೇಳಿದ.

‘‘ನೋಡ್ರಿ...ಪ್ರೆಸ್ ಕ್ಲಬ್‌ನವರು ಪತ್ರಿಕಾಗೋಷ್ಠಿ ಮಾಡಲು ಹಾಲ್ ಕೊಡುವುದಿಲ್ಲ ಎಂದು ಹೇಳುತ್ತಾರೆ...ಸಿದ್ರಾಮಯ್ಯ ಅವರ ಜೊತೆಗೆ ಇವರೂ ಶಾಮೀಲಾಗಿದ್ದಾರೆ...’’ ಅಳಲು ಪೂಜಾರಿ ತೋಡಿಕೊಂಡರು.

‘‘ಯಾಕೆ ಸಾರ್...?’’

‘‘ನೋಡ್ರಿ...ಒಂದೆರಡು ತಿಂಗಳ ಪ್ರೆಸ್‌ಕ್ಲಬ್ ಬಾಡಿಗೆ ಕೊಡಲು ಬಾಕಿ ಇದೆ. ಒಂದು ಕಾಲದಲ್ಲಿ ನಾನು ಸಾಲಮೇಳ ಮಾಡಿದ ಪೂಜಾರಿ. ಈಗ ಕೆಲವು ತಿಂಗಳ ಮಟ್ಟಿಗೆ ನನಗೆ ಸಾಲವಾಗಿ ಹಾಲ್ ಕೊಡಿ. ಮತ್ತೆ ಅಧಿಕಾರಕ್ಕೆ ಬಂದ ಮೇಲೆ ತೀರಿಸುತ್ತೇನೆ ಎಂದು ಹೇಳಿದರೆ ನನ್ನನ್ನು ಅವಮಾನಿಸಿ ಕಳುಹಿಸಿದರು. ನಾನು ಬಿಡುವುದಿಲ್ಲ. ಈ ಮರದ ಕೆಳಗೇ ಕುಳಿತು ಪ್ರೆಸ್ ಮೀಟ್ ಮಾಡುವೆ’’

‘‘ಅಲ್ಲ ಸಾರ್...ನೀವಿನ್ನು ಅಧಿಕಾರಕ್ಕೆ ಬರುವುದು ನಂಬುವ ಮಾತೇ? ’’ ‘‘ನೋಡ್ರಿ...ಯಡಿಯೂರಪ್ಪ ಅವರು ಒಂದು ಸ್ಕೀಂ ಘೋಷಿಸಿದ್ದಾರೆ. ಅವರ ಪಕ್ಷಕ್ಕೆ ಯಾರಾದರೂ ಬಂದರೆ ಅವರಿಗೆ ಉನ್ನತ ಹುದ್ದೆ ಕೊಡುತ್ತಾರಂತೆ. ಅದೊಂದು ಚಾನ್ಸ್ ಕಾಣುತ್ತದೆ....ಆದರೆ...ಹೋಗುವುದಕ್ಕೆ ಆಗ್ತಾ ಇಲ್ಲ...’’

‘‘ಯಾಕೆ ಸಾರ್? ಬಿಜೆಪಿಯವರಿಗೂ ನೀವು ಬೇಡವಾ?’’ ಕಾಸಿ ಕೇಳಿದ.

‘‘ಅಲ್ಲರೀ...ನಾನು ಕಾಂಗ್ರೆಸ್‌ನಿಂದ ಇನ್ನೂ ವಜಾಗೊಂಡಿಲ್ಲ. ಕಾಂಗ್ರೆಸ್‌ನೋರು ಹೆದರು ಪುಕ್ಕರು. ಅವರು ನನ್ನನ್ನು ಪಕ್ಷದಿಂದ ವಜಾ ಮಾಡುವುದಕ್ಕೆ ಹೆದರುತ್ತಿದ್ದಾರೆ...ಧೈರ್ಯವಿದ್ದರೆ ಅವರು ನನ್ನನ್ನು ಕಾಂಗ್ರೆಸ್ ಪಕ್ಷದಿಂದ ಹೊರ ಹಾಕಲಿ...ನೋಡುವಾ...’’

‘‘ಅಂದರೆ ಅವರು ಹೊರ ಹಾಕಿದರೆ ಬಿಜೆಪಿಗೆ ಹೋಗುವುದು ಗ್ಯಾರಂಟಿಯಾ?’’

 ‘‘ಮತ್ತೆಂತ?’’ ಪೂಜಾರಿ ಕಣ್ಣು ಕೆಂಪು ಮಾಡಿ ಕೇಳಿದರು.

‘‘ಹಾಗಲ್ಲ...ಕಾಂಗ್ರೆಸ್‌ನೋರೆಲ್ಲ ನೀವು ರಾಜಕೀಯ ನಿವೃತ್ತಿಯಾಗುತ್ತೀರಿ ಎಂದು ನಂಬಿ ಮೋದಿಯನ್ನು ಗೆಲ್ಲಿಸಲು ಹೊರಟಿದ್ದಾರಲ್ಲ...’’ ಕಾಸಿ ಕೇಳಿದ.

‘‘ಈ ಕಾಂಗ್ರೆಸ್‌ನೋರು ಪ್ರಚಾರ ಮಾಡಿಯೇ ಅಲ್ಲವಾ ನಾನು ಕಳೆದ ಹತ್ತಿಪ್ಪತ್ತು ವರ್ಷಗಳಿಂದ ಸೋಲುತ್ತಾ ಬಂದಿರುವುದು. ಇವರು ಪ್ರಚಾರ ಮಾಡಿದರೆ ಗೆಲ್ಲುವ ಮೋದಿಯೂ ಸೋತು ಬಿಡುತ್ತಾನೆ. ಒಳ್ಳೆಯದಾಯಿತು ನನಗೆ...’’

‘‘ಹಾಗಾದರೆ ಕಾಂಗ್ರೆಸ್ ಬಿಡುವುದಕ್ಕೆ ನಿಮಗೆ ಮನಸ್ಸಿಲ್ಲವೇ?’’

‘‘ಧೈರ್ಯವಿದ್ದರೆ ಅವರೇ ಕಾಂಗ್ರೆಸ್‌ನೊಳಗಿಂದ ಹೊರಗೆ ಹಾಕಲಿ...’’

‘‘ನಿಮ್ಮನ್ನು ಹೊರಗೆ ಹಾಕುವುದು ಅವರಿಗೆ ಕಷ್ಟ ಸಾರ್...’’ ಕಾಸಿ ಹೇಳಿದ.

‘‘ಹೌದು...ನನ್ನನ್ನು ಹೊರಗೆ ಹಾಕಿದರೆ ಇಡೀ ಕಾಂಗ್ರೆಸ್ ಸರ್ವನಾಶವಾದೀತು...’’ ಪೂಜಾರಿ ಮೀಸೆ ತಿರುಗಿಸಿದರು.

‘‘ಹಾಗಲ್ಲ...ನೀವು ಕಾಂಗ್ರೆಸ್‌ನೊಳಗೆ ಇದ್ದರೆ ಅಲ್ಲವಾ ಹೊರಗೆ ಹಾಕುವುದು. ಒಳಗೆ ಬರದ ಹಾಗೆ ನೋಡಿಕೊಂಡರೆ ಆಯಿತು. ಇಲ್ಲಿನ ಕಾಂಗ್ರೆಸ್ ಬಚಾವು’’ ಎಂದ ಕಾಸಿ ಅಲ್ಲಿಂದ ಓಡ ತೊಡಗಿದ.

ಪೂಜಾರಿ ಸಿಟ್ಟಾಗಿ ಕಂಬಳದ ಕೋಣವನ್ನು ಓಡಿಸುವ ಹಾಗೆ ಕಾಸಿಯನ್ನು ಓಡಿಸುತ್ತಾ ‘‘ಸಿದ್ದರಾಮಯ್ಯನ ಏಜೆಂಟ್ ನೀನು...ಇನ್ನೊಮ್ಮೆ ಪ್ರೆಸ್‌ಮೀಟ್‌ಗೆ ಬಾ. ಕಲಿಸುತ್ತೇನೆ....’’ ಎಂದು ಚೀರಾಡತೊಡಗಿದರು.

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News