×
Ad

ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣ:ತಲೆಮರೆಸಿಕೊಂಡ ಆರೋಪಿಗಳ ಬಂಧನ ಪ್ರಯತ್ನಗಳನ್ನು ಬಹಿರಂಗಗೊಳಿಸಿ

Update: 2017-02-19 17:45 IST

ಹೊಸದಿಲ್ಲಿ,ಫೆ.19: ಮಹಾತ್ಮಾ ಗಾಂಧಿ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಾದ ಗಂಗಾಧರ ದಹಾವತೆ, ಸೂರ್ಯದೇವ ಶರ್ಮಾ ಮತ್ತು ಗಂಗಾಧರ ಯಾದವ ಅವರ ಬಂಧನಕ್ಕಾಗಿ ದಿಲ್ಲಿ ಪೊಲೀಸರು ಯಾವ ಪ್ರಯತ್ನಗಳನ್ನು ಮಾಡಿದ್ದರು? ಒಡಿಶಾದ ಹೇಮಂತ ಪಂಡಾ ಎನ್ನುವವರು ಸಲ್ಲಿಸಿರುವ ಆರ್‌ಟಿಐ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಮಾಹಿತಿ ಆಯೋಗ(ಸಿಐಸಿ)ವು ಈ ಪ್ರಶ್ನೆಯನ್ನು ದಿಲ್ಲಿ ಪೋಲಿಸ್‌ನ ಮುಂದಿರಿಸಿದೆ. ತಾನೋರ್ವ ಸಂಶೋಧಕನಾಗಿದ್ದು, ಮಹಾತ್ಮಾ ಗಾಂಧಿಯವರ ಹತ್ಯೆಗೆ ಸಂಬಂಧಿಸಿದ ದಾಖಲೆಗಳ ಅಧ್ಯಯನಕ್ಕೆ ಆಸಕ್ತಿ ಹೊಂದಿದ್ದೇನೆ ಎಂದು ಪಂಡಾ ಆಯೋಗಕ್ಕೆ ತಿಳಿಸಿದ್ದಾರೆ.

ನ್ಯಾಷನಲ್ ಆರ್ಕೀವ್ಸ್ ಇಂಡಿಯಾದಲ್ಲಿ ಲಭ್ಯ ದಾಖಲೆಗಳು ಸೇರಿದಂತೆ ಹತ್ಯೆಗೆ ಸಂಬಂಧಿಸಿದ ದಾಖಲೆಗಳನ್ನು ತಾನು ಅಧ್ಯಯನ ಮಾಡಿದ್ದೇನೆ, ಆದರೆ ದಿಲ್ಲಿ ಪೊಲೀಸರು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅಂತಿಮ ಆರೋಪ ಪಟ್ಟಿ ಮತ್ತು ನಾಥುರಾಮ ಗೋಡ್ಸೆಯನ್ನು ಗಲ್ಲಿಗೇರಿಸಲು ಹೊರಡಿಸಿದ್ದ ಆದೇಶ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಪ್ರಕರಣದಲ್ಲಿಯ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಮತ್ತು ಅವರ ಬಂಧನಕ್ಕಾಗಿ ಯಾವ ಪ್ರಯತ್ನಗಳನ್ನು ನಡೆಸಲಾಗಿತ್ತು, ಮೇಲ್ಮನವಿ ವಿಚಾರಣೆಯಲ್ಲಿ ಇಬ್ಬರು ಆರೋಪಿಗಳನ್ನು ಖುಲಾಸೆಗೊಳಿಸಲು ಕಾರಣಗಳೇನಾಗಿದ್ದವು ಮತ್ತು ಅಂತಿಮ ಆರೋಪಪಟ್ಟಿ ಹಾಗೂ ಗೋಡ್ಸೆಗೆ ಗಲ್ಲುಶಿಕ್ಷೆ ಜಾರಿ ಆದೇಶದ ಪ್ರತಿ ದಾಖಲೆಗಳಿಂದ ನಾಪತ್ತೆಯಾಗಿವೆಯೇ ಎಂಬ ಮೂರು ಪ್ರಶ್ನೆಗಳಿಗೆ ಉತ್ತರವನ್ನು ಪಾಂಡೆ ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News