ಈ ಜಿಲ್ಲೆಯಲ್ಲಿ ಹೆಣ್ಣುಮಗು ಜನಿಸಿದಾಗೆಲ್ಲ ಹಸಿರು ಸಿರಿ ಹೆಚ್ಚುತ್ತದೆ
Update: 2017-02-19 23:52 IST
ಶ್ರೀಗಂಗಾನಗರ, ಫೆ.19: ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯಲ್ಲಿ ಪ್ರತಿ ಬಾರಿ ಹೆಣ್ಣುಮಗುವೊಂದು ಜನಿಸಿದಾಗೆಲ್ಲ ಜಿಲ್ಲೆಯ ಹಸಿರು ಸಿರಿ ಹೆಚ್ಚುತ್ತದೆ. ಹೆಣ್ಣುಮಕ್ಕಳ ಜನನವನ್ನು ಉತ್ತೇಜಿಸುವ ಮತ್ತು ಪರಿಸರ ಸಂರಕ್ಷಣೆಯ ಉದ್ದೇಶ ಹೊಂದಿರುವ ಜಿಲ್ಲಾಡಳಿತದ ವಿಶೇಷ ಅಭಿಯಾನದ ಮೇರೆಗೆ ಕಳೆದ ಎರಡು ತಿಂಗಳುಗಳಲ್ಲಿ ಹೆಣ್ಣುಮಗು ಜನಿಸಿದಾಗೆಲ್ಲ ಹೊಸ ಸಸಿಗಳನ್ನು ನೆಡಲಾಗಿದ್ದು, ಇವುಗಳ ಸಂಖ್ಯೆ ಈಗ 5,000 ದಾಟಿದೆ.
ನವಜಾತ ಶಿಶುವಿನ ಹೆತ್ತವರಿಗೆ ಐದು ಸಸಿಗಳನ್ನು ಜಿಲ್ಲಾಡಳಿತವು ಒದಗಿಸುತ್ತಿದೆ. ಮಗು ಹುಟ್ಟಿದ ಸಂಭ್ರಮದಲ್ಲಿ ಸಸಿಗಳನ್ನು ನೆಡುವ ಕುಟುಂಬ ಮತ್ತು ಜಿಲ್ಲಾಡಳಿತ ಅವುಗಳ ಪೋಷಣೆಯನ್ನು ಜಂಟಿಯಾಗಿ ನಿರ್ವಹಿಸುತ್ತವೆ.
ಶ್ರೀನಗರ ಜಿಲ್ಲೆಯಲ್ಲಿ ಮಕ್ಕಳ ಲಿಂಗಾನುಪಾತ ಕಡಿಮೆಯಿದ್ದು, ಪ್ರತಿ ಸಾವಿರ ಗಂಡುಮಕ್ಕಳಿಗೆ 854 ಹೆಣ್ಣುಮಕ್ಕಳಿದ್ದಾರೆ. ಈ ಅಭಿಯಾನವು ಸರಿಯಾದ ಸಂದೇಶವನ್ನು ರವಾನಿಸುವಲ್ಲಿ ನೆರವಾಗುತ್ತದೆ ಎಂದು ಜಿಲ್ಲಾಧಿಕಾರಿ ಜ್ಞಾನರಾಮ ಆಶಿಸಿದ್ದಾರೆ.