×
Ad

ಮಹಾ ಸರಕಾರಕ್ಕೆ ಬೆಂಬಲ ‘ತಾತ್ಕಾಲಿಕ’ : ಫಡ್ನವೀಸ್‌ಗೆ ಶಿವಸೇನೆ ಎಚ್ಚರಿಕೆ

Update: 2017-02-20 19:26 IST

ಮುಂಬೈ,ಫೆ.20: ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರಕ್ಕೆ ತಾನು ನೀಡುತ್ತಿರುವ ಬೆಂಬಲವು ‘ತಾತ್ಕಾಲಿಕ’ ಸ್ವರೂಪದ್ದೆಂದು ಸೋಮವಾರ ಶಿವಸೇನೆಯು ಸ್ಪಷ್ಟಪಡಿಸಿದ್ದು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಭವಿಷ್ಯವು ‘‘ ಅನಿಶ್ಚಿತವಾಗಿಯೇ ಉಳಿದಿದೆ’’ ಎಂದು ಎಚ್ಚರಿಕೆ ನೀಡಿದೆ.

   ಮಹಾರಾಷ್ಟ್ರದ ಪೌರಾಡಳಿತ ಸಂಸ್ಥೆಗಳ ಚುನಾವಣೆಗೆ ಇನ್ನೂ ಕೇವಲ ಒಂದು ದಿನ ಉಳಿದಿರುವಂತೆಯೇ, ಶಿವಸೇನೆಯು ಮುಖ್ಯಮಂತ್ರಿ ಫಡ್ನವೀಸ್ ವಿರುದ್ಧ ವಾಗ್ದಾಳಿ ನಡೆಸಿದೆ. ರಾಜ್ಯದ ಆಡಳಿತಾರೂಢ ಮೈತ್ರಿಕೂಟದ ಪಾಲುದಾರ ಪಕ್ಷಗಳಾದ ಬಿಜೆಪಿ ಹಾಗೂ ಶಿವಸೇನೆಯು, ಪೌರಾಡಳಿತ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧೆಗಿಳಿದಿದ್ದು, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪರಸ್ಪರ ಆರೋಪ, ಪ್ರತ್ಯಾರೋಪಗಳ ಕೆಸರೆರಚಾಟದಲ್ಲಿ ತೊಡಗಿದ್ದವು.

  ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿ ಇಂದು ಪ್ರಕಟವಾದ ಸಂಪಾದಕೀಯವು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ವಿರುದ್ಧ ಕಟು ಟೀಕಾಪ್ರಹಾರವನ್ನು ನಡೆಸಿದೆ. ‘‘ಮುಖ್ಯಮಂತ್ರಿಯವರ ಕುರ್ಚಿಯು ಶಿವಸೇನೆಯ ಬೆಂಬಲವನ್ನು ಅವಲಂಭಿಸಿದೆಯಾದರೂ, ಅವರು ಪ್ರತಿದಿನವೂ ಮುಂಬೈ ಬಗ್ಗೆ ಭರವಸೆಗಳನ್ನು ನೀಡುತ್ತಾ ತಿರುಗಾಡುತ್ತಿದ್ದಾರೆ. ತನ್ನ ಭವಿಷ್ಯವು ಅನಿಶ್ಚಿತವಾಗಿಯೇ ಉಳಿದಿದ್ದರೂ, ಮುಂಬೈನ ಭವಿಷ್ಯವನ್ನು ಬದಲಾಯಿಸಲು ಅವರು ಬಯಸುತ್ತಿದ್ದಾರೆ. ಮಹಾರಾಷ್ಟ್ರವು ಸ್ಥಿರವಾಗಿ ಉಳಿಯಬೇಕೆಂಬ ಏಕೈಕ ಉದ್ದೇಶದಿಂದ ಶಿವಸೇನೆ ತನಗೆ ಬೆಂಬಲ ನೀಡಿದೆಯೆಂಬುದನ್ನು ಅವರು ಮರೆಯಕೂಡದು’’ ಎಂದು ಸಂಪಾದಕೀಯ ಎಚ್ಚರಿಕೆ ನೀಡಿದೆ.

ನಗರದ ಓಣಿಓಣಿಗಳಲ್ಲಿ ತಿರುಗಾಡುತ್ತಾ ಮುಖ್ಯಮಂತ್ರಿಯವರು ‘ಮತ ಭಿಕೆ’್ಷ ಬೇಡುತ್ತಿವುದು, ಬಿಜೆಪಿಯು ಈಗಾಗಲೇ ರೇಸ್‌ನಲ್ಲಿ ಸೋತುಹೋಗಿರುವುದನ್ನು ಬೆಟ್ಟು ಮಾಡಿತೋರಿಸುತ್ತದೆ ಎಂದು ಅದು ಹೇಳಿದೆ.

 ‘‘ ಒಂದು ವೇಳೆ ಕಳೆದ ಎರಡೂವರೆ ವರ್ಷಗಳಿಂದ ಸರಕಾರವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುತ್ತಿದ್ದಲ್ಲಿ ಅವರು ಮತಗಳಿಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತಿರಲಿಲ್ಲ’’ ಎಂದು ಸಂಪಾದಕೀಯ ವ್ಯಂಗ್ಯವಾಡಿದೆ.

ಈ ಮಧ್ಯೆ ಯುವಸೇನಾದ ವರಿಷ್ಠ ಆದಿತ್ಯ ಠಾಕ್ರೆ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದು, ಒಂದು ನಿರ್ದಿಷ್ಟ ಪಕ್ಷದ ಅಭ್ಯರ್ಥಿಗಳು ನಕಲಿ ಚುನಾವಣಾ ಸಮೀಕ್ಷೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವ ಮೂಲಕ ಅಪಪ್ರಚಾರ ನಡೆಸುತ್ತಿದ್ದಾರೆಂದು ಆರೋಪಿಸಿದ್ದಾರೆ.

ಸುಳ್ಲು ಚುನಾವಣಾ ಸಮೀಕ್ಷೆಗಳನ್ನು ಹರಡುವ ಅಭ್ಯರ್ಥಿಗಳ ವಿರುದ್ಧ ಚುನಾವಣಾ ಆಯೋಗವು ಕ್ರಮ ಕೈಗೊಳ್ಳುವುದೆಂಬ ಆಶಾವಾದವನ್ನು ನಾನು ಹೊಂದಿದ್ದೇನೆ’’ ಎಂದವರು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News