×
Ad

ಶಬರಿಮಲೆ ವಿವಾದ ಸಾಂವಿಧಾನಿಕ ಪೀಠಕ್ಕೆ ವರ್ಗಾವಣೆ: ಸುಪ್ರೀಂ ಇಂಗಿತ

Update: 2017-02-20 23:43 IST

ಹೊಸದಿಲ್ಲಿ,ಫೆ.20: ಕೇರಳದ ಪ್ರಸಿದ್ಧ ಯಾತ್ರಾಸ್ಥಳ ಶಬರಿಮಲೆಗೆ ನಿರ್ದಿಷ್ಟ ವಯೋಮಾನದ ಮಹಿಳೆಯರಿಗೆ ಪ್ರವೇಶ ನಿಷೇಧ ಕುರಿತ ಮೊಕದ್ದಮೆಯನ್ನು ತಾನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಲಿರುವ ಬಗ್ಗೆ ಸುಪ್ರೀಂಕೋರ್ಟ್ ಸೋಮವಾರ ಸೂಚನೆ ನೀಡಿದೆ. ಶಬರಿಮಲೆಗೆ ಭೇಟಿ ನೀಡುವ ಭಕ್ತಜನಸ್ತೋಮವನ್ನು ಒಂದು ಪ್ರತ್ಯೇಕ ‘ಪಂಗಡ’ವಾಗಿ ಪರಿಗಣಿಸಬೇಕೇ ಎಂಬುದನ್ನು ಆಗ ನಿರ್ಧರಿಸಲಾಗುವುದು ಎಂದು ಅದು ಹೇಳಿದೆ. ಒಂದು ವೇಳೆ ಹಾಗಾದಲ್ಲಿ, ತಮ್ಮ ಧಾರ್ಮಿಕ ಆಚರಣೆಗಳನ್ನು ನಡೆಸಲು ಅವರಿಗೆ ದೊರೆಯುವ ವಿಶೇಷ ಸವಲತ್ತುಗಳು, ಮಹಿಳೆಯರ ಧಾರ್ಮಿಕ ಸ್ವಾತಂತ್ರಕ್ಕೆ ಅಡ್ಡಿಯುಂಟು ಮಾಡುವುದೇ ಎಂಬುದರ ಬಗ್ಗೆಯೂ ಪರಾಮರ್ಶೆ ನಡೆಸಲಾಗುವುದೆಂದು ಸುಪ್ರೀಂಕೋರ್ಟ್ ತಿಳಿಸಿದೆ.

10ರಿಂದ 50 ವರ್ಷದೊಳಗಿನ ಸ್ತ್ರೀಯರಿಗೆ ಶಬರಿಮಲೆ ದೇಗುಲಕ್ಕೆ ಪ್ರವೇಶ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸುವ ತನ್ನ ತೀರ್ಪನ್ನು ನ್ಯಾಯಾಧೀಶರಾದ ದೀಪಕ್‌ಮಿಶ್ರಾ, ಆರ್.ಭಾನುಮತಿ ಹಾಗೂ ಅಶೋಕ್ ಭೂಷಣ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಕಾದಿರಿಸಿತು.
ಮೊಕದ್ದಮೆಗೆ ಸಂಬಂಧಿಸಿ ತಾನು ವರ್ಗಾಯಿಸುವ ಕಾನೂನುಸಂಬಂಧಿ ಪ್ರಶ್ನೆಗಳ ಬಗ್ಗೆ ತಮ್ಮ ಸಲಹೆ,ಸೂಚನೆಗಳನ್ನು ನೀಡುವಂತೆಯೂ ವಿವಿಧ ಅರ್ಜಿದಾರರು, ಮಹಿಳಾ ಸಂಘಟನೆಗಳು, ಆಯ್ಯಪ್ಪ ಭಕ್ತ ಸಂಘಟನೆಗಳು ಹಾಗೂ ಶಬರಿಮಲೆ ದೇಗುಲವನ್ನು ನಿರ್ವಹಿಸುತ್ತಿರುವ ತಿರುವಾಂಕೂರು ದೇವಸ್ವಂ ಮಂಡಳಿ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾವೆದಾರರು, ನ್ಯಾಯಪೀಠ ತಿಳಿಸಿದೆ.
ಶಬರಿಮಲೆಗೆ ನಿರ್ದಿಷ್ಟ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಇರುವ ನಿಷೇಧವನ್ನು ಎತ್ತಿಹಿಡಿದು, 1991ರಲ್ಲಿ ಕೇರಳ ಹೈಕೋರ್ಟ್ ತೀರ್ಪು ನೀಡಿದ್ದರೂ, ಈ ವಿಷಯದ ಬಗ್ಗೆ ಹೊಸದಾಗಿ ವಿಚಾರಣೆೆ ನಡೆಸುವುದಕ್ಕ್ಕೆ ಯಾವುದೇ ಅಡ್ಡಿಯಿಲ್ಲವೆಂದು ಸುಪ್ರೀಂ ನ್ಯಾಯಪೀಠ ಅಭಿಪ್ರಾಯಿಸಿದೆ.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News