×
Ad

ಚುಡಾಯಿಸಿದ ಕುಡುಕ ಪೊಲೀಸನನ್ನು ಥಳಿಸಿದ ಮಹಿಳೆ

Update: 2017-02-21 14:13 IST

ಅಹ್ಮದಾಬಾದ್,ಫೆ.21: ಮದ್ಯದ ಅಮಲಿನಲ್ಲಿ ತನ್ನನ್ನು ಚುಡಾಯಿಸಿದ್ದ ಎಎಸ್‌ಐ ಅನ್ನು ಮಹಿಳೆಯೋರ್ವಳು ಸಾರ್ವಜನಿಕರೆದುರೇ ಥಳಿಸಿದ್ದು, ಇದು ಇತ್ತೀಚಿಗೆ ಇನ್ನಷ್ಟು ಕಟ್ಟುನಿಟ್ಟುಗೊಂಡಿರುವ ಪಾನನಿಷೇಧ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೊಳಿ ಸುವ ಹೊಣೆ ಹೊತ್ತಿರುವ ಗುಜರಾತ್ ಪೊಲೀಸರಿಗೆ ಭಾರೀ ಮುಜುಗರವನ್ನುಂಟು ಮಾಡಿದೆ.

ಇಲ್ಲಿಯ ಉಧವ್ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿರುವ ಅಮೃತ್‌ಜಿ ಖಾಟುಜಿ ಪೆಟ್ಟು ತಿಂದ ವ್ಯಕ್ತಿಯಾಗಿದ್ದು, ಸೋಮವಾರ ಸಂಜೆ ಪೊಲೀಸರು ಆತನನ್ನು ಬಂಧಿಸಿ ಲಾಕಪ್‌ನಲ್ಲಿ ತಳ್ಳಿದ್ದಾರೆ.

ಅಮೃತ್‌ಜಿಯನ್ನು ರಾಜೇಂದ್ರ ನಗರ ಜಂಕ್ಷನ್‌ನಲ್ಲಿ ಸಂಚಾರ ನಿಯಂತ್ರಣ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕಂಠಪೂರ್ತಿ ಕುಡಿದಿದ್ದ ಆತ ಅಲ್ಲಿಯೇ ಸಮೀಪದಲ್ಲಿ ತರಕಾರಿ ಮಾರುತ್ತಿದ್ದ ಮಹಿಳೆಯ ಬಳಿ ತೆರಳಿ ಆಕೆಯನ್ನು ಅಶ್ಲೀಲ ಶಬ್ದಗಳಿಂದ ಚುಡಾಯಿಸಿದ್ದ.

ಸಿಟ್ಟು ನೆತ್ತಿಗೇರಿದ್ದ ಮಹಿಳೆ ಕೂಡಲೇ ಪೊಲೀಸಪ್ಪನ ಕೊರಳಪಟ್ಟಿ ಹಿಡಿದು ಸಾರ್ವಜನಿಕರೆದುರೇ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಸಮವಸ್ತ್ರವನ್ನು ಹಿಡಿದು ಎಳೆದಾಡಿದ್ದಾಳೆ. ಅಲ್ಲಿ ಸೇರಿದ್ದ ಜನರು ಪೊಲೀಸಪ್ಪನಿಗೆ ಗೇಲಿ ಮಾಡಿ ಮಹಿಳೆಯನ್ನು ಹುರಿದುಂಬಿಸಿದ್ದಾರೆ. ಆತನ ಪ್ಯಾಂಟ್ ಕಳಚಿ ಎಸೆಯುವಂತೆಯೂ ಸಲಹೆ ನೀಡಿದ್ದಾರೆ. ಪುಣ್ಯಕ್ಕೆ ಮಹಿಳೆ ಆ ಕೆಲಸಕ್ಕೆ ಕೈ ಹಾಕಿಲ್ಲ. ಹೀಗಾಗಿ ಅಷ್ಟರ ಮಟ್ಟಿಗೆ ಅಮೃತ್‌ಜಿಯ ಮಾನ ಉಳಿದುಕೊಂಡಿದೆ. ಸುಮಾರು 20 ನಿಮಿಷಗಳ ಕಾಲ ಈ ಪ್ರಹಸನ ನಡೆದಿತ್ತು.

ಇಡೀ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಕ್ರಮಕ್ಕೆ ಮುಂದಾದ ಪೊಲೀಸರು ಅಮೃತ್‌ಜಿಯನ್ನು ಬಂಧಿಸಿ ಪಾನ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಹಿಳೆಗೆ ಚುಡಾವಣೆ ಆರೋಪದಲ್ಲಿ ಪ್ರಕರಣ ದಾಖಲಿಸಿಕೊಳ್ಳಲು ಆಕೆಯ ದೂರು ಅಗತ್ಯವಾಗಿರುವುದರಿಂದ ಆಕೆಗಾಗಿ ಹುಡುಕಾಡು ತ್ತಿದ್ದಾರೆ.

ಅಮೃತ್‌ಜಿ ಕಳ್ಳಭಟ್ಟಿ ಮಾರಾಟಗಾರರು ಮತ್ತು ಪೊಲೀಸರ ನಡುವಿನ ಅಪವಿತ್ರ ಮೈತ್ರಿಯನ್ನೂ ಬಹಿರಂಗಗೊಳಿಸಿದ್ದಾನೆ. ನಿಕೋಲ್ ಪ್ರದೇಶದಲ್ಲಿ ಮಹಿಳೆಯೋರ್ವಳು ನಡೆಸುತ್ತಿರುವ ಅಕ್ರಮ ಗಡಂಗಿನಲ್ಲಿ ಆತ ಮದ್ಯಪಾನ ಮಾಡಿದ್ದ ಎಂಬ ಮಾಹಿತಿ ತಿಳಿದ ಬಳಿಕ ಪೊಲೀಸರು ಅಲ್ಲಿಗೆ ದಾಳಿ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಗಡಂಗು ಸಂಪೂರ್ಣ ಖಾಲಿಯಾಗಿದ್ದು ಪೊಲೀಸರಿಗೆ ಮದ್ಯವೂ ಸಿಕ್ಕಿಲ್ಲ, ಅದನ್ನು ಮಾರುತ್ತಿದ್ದ ಮಹಿಳೆಯೂ ಸಿಕ್ಕಿಲ್ಲ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News