ಮುಂಬೈ ಪಾಲಿಕೆ ಚುನಾವಣೆ : ಮತದಾರ ಪಟ್ಟಿಯಲ್ಲಿ ನಾಪತ್ತೆಯಾದ ಸಿಲೆಬ್ರಿಟಿಗಳು

Update: 2017-02-21 14:15 GMT

ಮುಂಬೈ, ಫೆ.21: ಶಿವಸೇನೆ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಪ್ರಬಲ ಸ್ಪರ್ಧೆಗೆ ಸಾಕ್ಷಿಯಾಗಿರುವ ಮುಂಬೈ ಮಹಾನಗರ ಪಾಲಿಕೆಗೆ ಮಂಗಳವಾರ ಮತದಾನವಾಗಿದ್ದು, ಶೇ.44ರಷ್ಟು ಮತದಾನವಾಗಿದೆ. ಆದರೆ ಮತದಾನಕ್ಕಾಗಿ ಮತಗಟ್ಟೆಗಳಿಗೆ ತೆರಳಿದ ಅನೇಕ ಮಂದಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೆ, ನಿರಾಶರಾಗಿ ಹಿಂತಿರುಗಬೇಕಾಯಿತು.

 ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೆ ಮತದಾನದಿಂದ ವಂಚಿತರಾದವರಲ್ಲಿ ಸಿನೆಮಾ ತಾರೆಯರು ಸೇರಿದಂತೆ ನಗರದ ಹಲವಾರು ಸಿಲೆಬ್ರಿಟಿಗಳೂ ಇದ್ದಾರೆ. ಖ್ಯಾತ ಯುವ ಬಾಲಿವುಡ್ ನಟ ವರುಣ್ ದೇವನ್ ಬಾಂದ್ರಾದ ಮತಗಟ್ಟೆಯೊಂದರಲ್ಲಿ ಮತಚಲಾವಣೆಗೆ ಆಗಮಿಸಿದಾಗ, ಮತದಾರ ಪಟ್ಟಿಯಲ್ಲಿ ಅವರ ಹೆಸರಿರದ ಕಾರಣ, ನಿರಾಶರಾಗಿ ವಾಪಸಾಗಬೇಕಾಯಿತು.

 ವೈವಿಧ್ಯಮಯ ಖಾದ್ಯ ತಯಾರಿಯ ಟಿವಿ ರಿಯಾಲಿಟಿ ಶೋಗಳಿಂದ ಜನಪ್ರಿಯರಾದ ಸಂಜೀವ್ ಕಪೂರ್‌ಗೂ ಕೂಡಾ ಮತದಾರ ಪಟ್ಟಿಯಲ್ಲಿ ಹೆಸರಿಲ್ಲದ್ದರಿಂದ ಮತದಾನ ಮಾಡಲಾಗಲಿಲ್ಲ.ಮುಂಬೈ ಬಿಜೆಪಿ ನಾಯಕಿ ಶೈನಾ ಎನ್.ಸಿ., ಮತದಾನ ಮಾಡುವ ಹುರುಪಿನಿಂದ ಮುಂಜಾನೆಯೇ ಬೈಸಿಕಲ್‌ನಲ್ಲಿ ತೆರಳಿದ್ದರಾದರೂ, ಮತದಾರ ಪಟ್ಟಿಯಲ್ಲಿ ತನ್ನ ಹೆಸರು ಕಾಣೆಯಾಗಿದ್ದರಿಂದ ಗೊಂದಲಕ್ಕೊಳಗಾಗಿದ್ದರು. ಆದರೆ ಮುದ್ರಿತ ಪಟ್ಟಿಯಲ್ಲಿನ ಲೋಪದಿದಾಗಿ ಹೀಗಾಗಿದ್ದು, ಚುನಾವಣಾಧಿಕಾರಿಗಳ ಸಹಕಾರದಿಂದ ಕೊನೆಗೂ ತನ್ನ ಹೆಸರನ್ನು ಪತ್ತೆಹಚ್ಚಲು ಸಾಧ್ಯವಾಯಿತೆಂದು ಅವರು ಟ್ವೀಟ್ ಮಾಡಿದ್ದಾರೆ.

 ಬಾಲಿವುಡ್‌ನ ಖ್ಯಾತ ನಿರ್ದೇಶಕ ಅನುಭವ್ ಸಿನ್ಹಾ 2014ರ ಲೋಕಸಭಾ ಚುನಾವಣೆಗೆ ಮತಚಲಾಯಿಸಿದ್ದರು. ಆದರೆ ಈ ಬಾರಿ ಮತಚಲಾಯಿಸಲು ಮತಗಟ್ಟೆಗೆ ಆಗಮಿಸಿದಾಗ ಮತದಾರಪಟ್ಟಿಯಲ್ಲಿ ಅವರ ಹೆಸರಿಲ್ಲದ ಕಾರಣ ಮತದಾನದಿಂದ ಅವ್ಜರು ವಂಚಿತರಾದರು. ಚುನಾವಣಾಧಿಕಾರಿಗಳು ಅವರ ಹೆಸರಿಗಾಗಿ ಹುಡುಕಾಡಿದರೂ, ತನ್ನ ಹೆಸರು ಪತ್ತೆಯಾಗಿಲ್ಲವೆಂದು ಸಿನ್ಹಾ ಟ್ವೀಟ್ ಮಾಡಿದ್ದಾರೆ.

ರಾಜ್ಯದ ಮತದಾರರ ಪಟ್ಟಿಯಲ್ಲಿ ದೊಡ್ಡ ಸಂಖ್ಯೆಯ ಮತದಾರರ ಹೆಸರು ಕಾಣೆಯಾಗಿರುವುದು ಇದೇ ಮೊದಲೇನಲ್ಲ. 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಸಹಸ್ರಾರು ಮಂದಿ ಯ ಹೆಸರು ನಾಪತ್ತೆಯಾಗಿರುವುದಕ್ಕಾಗಿ ಕ್ಷಮೆಯಾಚಿಸಿತ್ತು. ಪೌರಾಡಳಿತ ಚುನಾವಣೆಯನ್ನೂ ಚುನಾವಣಾ ಆಯೋಗವೇ ನಿರ್ವಹಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News