ವಿಶ್ವಸನೀಯತೆಯ ಕೊರತೆಯಿಂದ ಕಳೆಗುಂದಿದ ಮೋದಿ : ಅಶೋಕ್ ಗೆಹ್ಲೋಟ್ ಟೀಕೆ

Update: 2017-02-21 13:57 GMT

ಲಕ್ನೋ,ಫೆ.21: ಪ್ರಧಾನಿ ನರೇಂದ್ರ ಮೋದಿ ತನ್ನ ವರ್ಚಸ್ಸನ್ನು ಮರಳಿಗಳಿಸಲು ಹತಾಶ ಯತ್ನ ಮಾಡುತ್ತಿದ್ದರೂ, ವಿಶ್ವಸನೀಯತೆಯ ಕೊರತೆಯು ಅವರನ್ನು ಕಾಡುತ್ತಿದೆಯೆಂದು ಉತ್ತರಪ್ರದೇಶ ಕಾಂಗ್ರೆಸ್ ಸಮಿತಿಯ ಮುಖ್ಯಸಮನ್ವಯಕಾರ ಅಶೋಕ್ ಗೆಹ್ಲೊಟ್ ತಿಳಿಸಿದ್ದಾರೆ.

 ‘‘ ಇಂದಿರಾಗಾಂಧಿ ಅವರ ಪ್ರಭಾ ವಲಯ ವಿಭಿನ್ನವಾದುದಾಗಿತ್ತು. ಆದರೆ ಮೋದಿಯ ಪ್ರಭಾ ವಲಯ ದಿನದಿಂದ ದಿನಕ್ಕೆ ಕುಂದುತ್ತಾ ಬಂದಿದೆ. ಮತದಾರರ ಆಕ್ರೋಶದ ಪರಿಣಾಮವಾಗಿ ಇಂದಿರಾ ಚುನಾವಣೆಯಲ್ಲಿ ಸೋಲನುಭವಿಸಿದರು. ಆದರೆ ಮತದಾರರು ಆಕೆಯನ್ನು ಮತ್ತೆ ಸ್ವೀಕರಿಸಿದರು’’ ಎಂದವರು ಲಕ್ನೋದಲ್ಲಿ ಸುದ್ದಿಗಾರರೊಂದಿಗೆ ತಿಳಿಸಿದರು.

‘‘ ಮೋದಿಯವರಿಗೆ ಒಳ್ಳೆಯ ಅವಕಾಶ ಕೂಡಿಬಂದಿತ್ತು. ಆದರೆ ಅದನ್ನವರು ಕಳೆದು ಕೊಂಡರು.ಮುರಳಿ ಮನೋಹರ್ ಜೋಶಿ ಹಾಗೂ ಎಲ್.ಕೆ.ಅಡ್ವಾಣಿಯವರಂತಹ ಹಿರಿಯರನ್ನು ಬಿಜೆಪಿಯಲ್ಲಿ ಮೂಲೆಗುಂಪು ಮಾಡಲಾಗಿದೆ. ಬಿಜೆಪಿ ಕಾರ್ಯಕರ್ತರಲ್ಲಿ ಉಸಿರುಗಟ್ಟಿದ ಭಾವನೆಯುಂಟಾಗಿದೆ’’ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿಯೂ ಆದ ಗೆಹ್ಲೊಟ್ ಟೀಕಿಸಿದರು.

ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು ‘‘ ಕಾಂಗ್ರೆಸ್ ಯಾವತ್ತೂ ಅಧಿಕಾರಕ್ಕಾಗಿ ಹಂಬಲಿಸಿಲ್ಲ. ಆದರೆ ಬಿಜೆಪಿಗೆ ದಿಲ್ಲಿ ಹಾಗೂ ಬಿಹಾರದ ವಿಧಾನಸಭಾ ಚುನಾವಣೆಗಳಲ್ಲಾದ ಗತಿಯೇ ಉತ್ತರಪ್ರದೇಶದಲ್ಲೂ ಆಗಲಿದೆ’’ ಎಂದು ಗೆಹ್ಲೋಟ್ ಭವಿಷ್ಯ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News