ಎಚ್1-ಬಿ ವೀಸಾದಲ್ಲಿ ಪಾರದರ್ಶಕತೆ: ಅಮೆರಿಕಕ್ಕೆ ಭಾರತ ಆಗ್ರಹ
ಹೊಸದಿಲ್ಲಿ,ಫೆ.21: ಅಮೆರಿಕವು ತನ್ನ ವೀಸಾ ನೀಡಿಕೆ ವ್ಯವಸ್ಥೆಯಲ್ಲಿ ನಿಶ್ಚಿತತೆಯನ್ನು ಕಾಯ್ದುಕೊಳ್ಳಬೇಕೆಂದು ಭಾರತವು ಮಂಗಳವಾರ ಆಗ್ರಹಿಸಿದ್ದು, ಸುಸ್ಥಿರವಾದ ವಾತಾವರಣದಲ್ಲಿ ಮಾತ್ರವೇ ಉದ್ಯಮಗಳು ಪ್ರಗತಿ ಹೊಂದಲು ಸಾಧ್ಯವೆಂದು ಅದು ಪ್ರತಿಪಾದಿಸಿದೆ.
ಎಚ್1-ಬಿ ವೀಸಾ ನೀಡಿಕೆಗೆ ಸಂಬಂಧಿಸಿದ ನಿರ್ಬಂಧಗಳನ್ನು ಟ್ರಂಪ್ ಆಡಳಿತವು ಬಿಗಿಗೊಳಿಸಿರುವ ಹಿನ್ನೆಲೆಯಲ್ಲಿ ಉದ್ಭವಿಸಿರುವ ಸಮಸ್ಯೆಗಳ ಬಗ್ಗೆ ತಾನು ಅಮೆರಿಕ ಕಾಂಗ್ರೆಸ್‌ನ ಸಂಸದರ ಜೊತೆ ಚರ್ಚಿಸಿರುವುದಾಗಿ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
‘‘ ಉದ್ಯಮಗಳು ಯಾವತ್ತೂ ನಿಶ್ಚಿತತೆ ಹಾಗೂ ಪಾರದರ್ಶಕತೆಯ ವಾತಾವರಣದಲ್ಲಿ ಉನ್ನತಿಯನ್ನು ಹೊಂದುತ್ತವೆ. ಹೀಗಾಗಿ ವೀಸಾ ನೀಡಿಕೆಯ ವಿಷಯದಲ್ಲಿಯೂ ಖಚಿತತೆ ಹಾಗೂ ಪಾರದರ್ಶಕತೆ ಇರುವುದನ್ನು ನಾವು ಬಯಸುತ್ತಿದ್ದೇವೆ’’ ಎಂದು ನಿರ್ಮಲಾ ಹೊದಿಲ್ಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಎಚ್1-ಬಿ ವೀಸಾ ಸಮಸ್ಯೆಯನ್ನು ಬಗೆಹರಿಸುವಲ್ಲಿ ಅಮೆರಿಕದ ಕಾಂಗ್ರೆಸ್ ಸದಸ್ಯರು ತಮ್ಮ ಪಾತ್ರವನ್ನು ವಹಿಸುವರೆಂಬ ವಿಶ್ವಾಸವನ್ನು ನಿರ್ಮಲಾ ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು.
ಸೀತಾರಾಮನ್ ಅವರು ವಿಶ್ವಸಂಸ್ಥೆಯ ವರದಿಯೊಂದರ ಬಿಡುಗಡೆಗೊಳಿಸಿದ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡುತ್ತಿದ್ದರು. ಭಾರತಕ್ಕೆ ಆಗಮಿಸಿದ್ದ ಅಮೆರಿಕದ ನಿಯೋಗದ ನೇತೃತ್ವವನ್ನು ಅಮೆರಿಕನ್ ಪ್ರತಿನಿಧಿ ಸಭೆಯ ನ್ಯಾಯಾಂಗ ಸಮಿತಿಯ ಅಧ್ಯಕ್ಷರಾದ ಬಾಬ್ ಗೂಡ್‌ಲ್ಯಾಟ್ ವಹಿಸಿದ್ದರು.
ಅಮೆರಿಕವು ಎಚ್1-ಬಿ ವೀಸಾ ವ್ಯವಸ್ಥೆಯಲ್ಲಿ ಮಾರ್ಪಾಡುಗಳನ್ನು ಮಾಡುವ ಪ್ರಸ್ತಾಪವನ್ನು ಮಂಡಿಸಿರುವುದು ಭಾರತದ ಮಾಹಿತಿತಂತ್ರಜ್ಞಾನ ವಲಯದಲ್ಲಿ ಆತಂಕವನ್ನು ಮೂಡಿಸಿದೆ. ಭಾರತದ ಐಟಿ ವಲಯವು ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ ಶೇ.9.3ರಷ್ಟು ಕೊಡುಗೆ ನೀಡುತ್ತಿದ್ದು, 30.70 ಲಕ್ಷಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿದೆ.