ದಿಲ್ಲಿಯಲ್ಲಿ ತಲೆಯೆತ್ತಿದೆ ಭಾರತದ ಪ್ರಪ್ರಥಮ ಹೆಲಿಕಾಪ್ಟರ್ ನಿಲ್ದಾಣ
ಹೊಸದಿಲ್ಲಿ,ಫೆ.21: ರಾಷ್ಟ್ರ ರಾಜಧಾನಿಯಲ್ಲಿ ನಿರ್ಮಿಸಲಾಗಿರುವ ಭಾರತದ ಪ್ರಪ್ರಥಮ ಹೆಲಿಕಾಪ್ಟರ್ ನಿಲ್ದಾಣ ‘ಹೆಲಿಪೋರ್ಟ್’ ಮುಂದಿನವಾರದಿಂದ ಕಾರ್ಯಾರಂಭಿಸಲಿದೆ.
100 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೆಲಿಪೋರ್ಟ್‌ನ್ನು ಸರಕಾರಿ ಸ್ವಾಮ್ಯದ ಹೆಲಿಕಾಪ್ಟರ್ ಸೇವಾ ಸಂಸ್ಥೆ ಪವನ್‌ಹಂಸ್ ನಿರ್ಮಿಸಿದೆ. ಒಂದು ವರ್ಷಗಳ ಪ್ರಾಯೋಗಿಕ ಪರೀಕ್ಷೆಗಳ ಬಳಿಕ ಹೆಲಿಕಾಪ್ಟರ್ ನಿಲ್ದಾಣವು ಕಾರ್ಯಾರಂಭಕ್ಕೆ ಸನ್ನದ್ಧವಾಗಿದೆಯೆಂದು ಪವನ್‌ಹಂಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಬಿ.ಪಿ.ಶರ್ಮಾ ತಿಳಿಸಿದ್ದಾರೆ.
ಉತ್ತರ ದಿಲ್ಲಿಯ ರೋಹಿಣಿ ಪ್ರದೇಶದಲ್ಲಿರುವ ‘ಹೆಲಿಪೋರ್ಟ್’ ಏಕಕಾಲದಲ್ಲಿ 16 ಹೆಲಿಕಾಪ್ಟರ್‌ಗಳು ತಂಗುವ ಸಾಮರ್ಥ್ಯವನ್ನು ಹೊಂದಿದೆ ಹಾಗೂ 9 ‘ಪಾರ್ಕಿಂಗ್ ಬೇ’ಗಳಿವೆ. ಹೆಲಿಪೋರ್ಟ್‌ನ ಟರ್ಮಿನಲ್ ಕಟ್ಟಡವು 150 ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿದೆ.
ಹೆಲಿಪೋರ್ಟ್‌ನ ನಿರ್ವಹಣೆ ಜೊತೆಗೆ ಅಲ್ಲಿಗೆ ಆಗಮಿಸುವ ಹೆಲಿಕಾಪ್ಟರ್‌ಗಳ ನಿರ್ವಹಣೆ, ರಿಪೇರಿಯ ಹೊಣೆಯನ್ನು ಪವನ್‌ಹಂಸ್ ವಹಿಸಿಕೊಡಿದೆ. ಕಳೆದ ವರ್ಷದ ಫೆಬ್ರವರಿಯಿಂದ ಪವನ್‌ಹಂಸ್ ಈ ನಿಲ್ದಾಣದಿಂದ ಪ್ರಾಯೋಗಿಕ ಹಾರಾಟಗಳನ್ನು ನಡೆಸಿತ್ತು. ಈ ವರ್ಷದ ಮೇ ತಿಂಗಳಿಂದ ಹೆಲಿಪೋರ್ಟ್ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದೆಯೆಂದು ಶರ್ಮಾ ತಿಳಿಸಿದ್ದಾರೆ.
ಹೆಲಿಕಾಪ್ಟರ್‌ಗಳ ಮೂಲಕ ಉತ್ತರ ಪ್ರಾಂತದಲ್ಲಿ ಪ್ರಾದೇಶಿಕ ವಾಯುಮಾರ್ಗ ಸಂಪರ್ಕಕ್ಕೆ ರೋಹಿಣಿ ಹೆಲಿಪೋರ್ಟ್ ಉತ್ತೇಜನ ನೀಡಲಿದೆಯೆಂದವರು ಹೇಳಿದರು.