×
Ad

ಪರಸ್ಪರ ಸಮ್ಮತಿಯ ತಲಾಕ್ ಪ್ರಕರಣಗಳಲ್ಲಿ ಹೇಳಿಕೆಗಳನ್ನು ಆಧರಿಸಿ ತೀರ್ಪು ನೀಡುವುದರಲ್ಲಿ ತಪ್ಪಿಲ್ಲ: ಹೈಕೋರ್ಟ್

Update: 2017-02-21 20:59 IST

ಅಹ್ಮದಾಬಾದ್,ಫೆ.21: ಪರಸ್ಪರ ಸಮ್ಮತಿಯ ತಲಾಕ್ ಪ್ರಕರಣಗಳಲ್ಲಿ ದಂಪತಿಗಳ ಹೇಳಿಕೆಗಳನ್ನು ಆಧರಿಸಿ ತೀರ್ಪು ನೀಡುವುದರಲ್ಲಿ ತಪ್ಪಿಲ್ಲ ಎಂದು ಗುಜರಾತ್ ಉಚ್ಚ ನ್ಯಾಯಾಲಯವು ಅಭಿಪ್ರಾಯ ವ್ತಕ್ತಪಡಿಸಿದೆ.

1984ರ ಕೌಟುಂಬಿಕ ನ್ಯಾಯಾಲಯ ಕಾಯ್ದೆಯ ಕಲಂ 7ರಡಿ ವಿಚ್ಛೇದನ ಘೋಷಣೆಯನ್ನು ಕೋರಿದ್ದ ಮೊಕದ್ದಮೆಯಲ್ಲಿ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯವು ವಜಾಗೊಳಿಸಿತ್ತು. ತಲಾಕ್ ನೀಡಲಾಗಿದೆ ಎಂದು ಪತಿ-ಪತ್ನಿ ಒಪ್ಪಿಕೊಂಡಿದ್ದು, ತಲಾಕ್ ತಮಗೆ ಸಮ್ಮತವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಿದ್ದರು.

ದಂಪತಿ ಹಲವು ವರ್ಷಗಳಿಂದಲೂ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಮತ್ತು ಮೂರು ಬಾರಿ ತಲಾಕ್ ಹೇಳಿದ್ದಕ್ಕೆ ಯಾವುದೇ ವಿವಾದವಿಲ್ಲ ಎನ್ನುವುದನ್ನು ಬೆಟ್ಟು ಮಾಡಿದ ನ್ಯಾ.ಸೋನಿಯಾ ಗೋಕಾನಿ ಅವರು, ಅಧಿಕೃತಗಳ ದಾಖಲೆಗಳನ್ನು ಸಿದ್ಧಪಡಿಸಲು ಅವರಿಗೆ ನ್ಯಾಯಾಲಯದ ಆದೇಶದ ಅಗತ್ಯವಿದೆ. ಹಿಂದು ವಿವಾಹ ಕಾಯ್ದೆಯ 13-ಬಿ ಕಲಂನಂತಹ ಯಾವುದೇ ನಿಯಮ ಅವರಿಗೆ ಲಭ್ಯವಿಲ್ಲದ್ದರಿಂದ ಅವರು ಈ ಮಾರ್ಗವನ್ನು ಹಿಡಿದಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 13-ಬಿ ಕಲಂನಡಿ ಪರಸ್ಪರ ಒಪ್ಪಿಕೊಂಡು ವಿಚ್ಛೇದನಕ್ಕೆ ಸಲ್ಲಿಸಲಾಗುವ ಅರ್ಜಿಯು ನ್ಯಾಯಾಲಯದಲ್ಲಿ ತ್ವರಿತವಾಗಿ ಇತ್ಯರ್ಥಗೊಳ್ಳುತ್ತದೆ.

ಸಿಸಿಪಿಯ ನಿಯಮ 6ರ ಆದೇಶ 12ರಡಿ ಅರ್ಜಿಯನ್ನು ಸಲ್ಲಿಸದೆಯೂ ದಂಪತಿ ಈಗಾಗಲೇ ಹಲವಾರು ವರ್ಷಗಳಿಂದ ಪ್ರತ್ಯೇಕವಾಗಿ ವಾಸವಾಗಿದ್ದಾರೆ ಎಂಬ ಅಂಶವನ್ನು ಗಮನದಲ್ಲಿಟ್ಟುಕೊಂಡು ಈ ವಿಷಯದಲ್ಲಿ ಎಚ್ಚರಿಕೆಯಿಂದ ಮುಂದುವರಿಯುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶ ನೀಡಿದ ಉಚ್ಚ ನ್ಯಾಯಲಯವು, ಅದು ಸ್ವಯಂ ಈ ನಿಯಮವನ್ನು ಬಳಿಸಿಕೊಂಡು ಪ್ರಕರಣವನ್ನು ಇತ್ಯರ್ಥಗೊಳಿಸಬಹುದಾಗಿತ್ತು ಎಂದು ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News