1000 ರೂ. ಹೊಸ ನೋಟುಗಳ ಮುದ್ರಣದ ಯೋಜನೆ ಇಲ್ಲ

Update: 2017-02-22 07:55 GMT

  ಹೊಸದಿಲ್ಲಿ, ಫೆ.22: ಕಳೆದ ವರ್ಷ ನಿಷೇಧಗೊಂಡಿರುವ 1000 ಮುಖಬೆಲೆಯ ನೋಟುಗಳನ್ನು ಮತ್ತೆ ಮುದ್ರಿಸುವ ಕುರಿತು ಸರಕಾರ ಯಾವುದೇ ಯೋಜನೆ ಹಾಕಿಕೊಂಡಿಲ್ಲ. 500 ರೂ. ಹಾಗೂ 100 ರೂ. ಮುಖಬೆಲೆಯ ಹೊಸ ನೋಟುಗಳ ಮುದ್ರಣದ ಪ್ರಮಾಣ ಹೆಚ್ಚಿಸುವತ್ತ ಹೆಚ್ಚು ಗಮನ ನೀಡಲಾಗುತ್ತದೆ ಎಂದು ಕೇಂದ್ರ ಆರ್ಥಿಕ ವ್ಯವಹಾರ ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಟ್ವೀಟ್ ಮಾಡಿದ್ದಾರೆ.

ಕರೆನ್ಸಿ ಮುದ್ರಣ ಪ್ರೆಸ್‌ಗಳು ನೂತನ ಆವೃತ್ತಿಯ 1000 ನೋಟುಗಳನ್ನು ಮುದ್ರಿಸಲು ಆರಂಭಿಸುವೆ ಎಂಬ ವದಂತಿಯ ಹಿನ್ನೆಲೆಯಲ್ಲಿ ದಾಸ್ ಈ ಸ್ಪಷ್ಟನೆ ನೀಡಿದ್ದಾರೆ.

ಕೇಂದ್ರ ಸರಕಾರ ಕಳೆದ ವರ್ಷ ನವೆಂಬರ್‌ನಲ್ಲಿ ಕಪ್ಪುಹಣ, ಭ್ರಷ್ಟಾಚಾರ ಹಾಗೂ ಭಯೋತ್ಪಾದಕ ಚಟುವಟಿಕೆಯನ್ನು ಹತ್ತಿಕ್ಕುವ ಉದ್ದೇಶದಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿತ್ತು. ನೋಟು ನಿಷೇಧದ ಬಳಿಕ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 500 ಹಾಗೂ 2000 ರೂ.ಮುಖಬೆಲೆಯ ಹೊಸ ನೋಟುಗಳನ್ನು ಮುದ್ರಿಸಿತ್ತು. ಆದರೆ, ಮಾರುಕಟ್ಟೆಯಲ್ಲಿ ಹೆಚ್ಚು ಚಲಾವಣೆಯಲ್ಲಿದ್ದ 500 ಹಾಗೂ 1000 ರೂ.ಮುಖಬೆಲೆಯ ನೋಟುಗಳ ನಿಷೇಧದಿಂದ ಉಂಟಾಗಿರುವ ಕರೆನ್ಸಿ ಬಿಕ್ಕಟ್ಟನ್ನು ಸಂಪೂರ್ಣ ನಿವಾರಿಸಲು ಆರ್‌ಬಿಐಗೆ ಇನ್ನೂ ಸಾಧ್ಯವಾಗಿಲ್ಲ. ಈಗಲೂ ದೇಶದ ಹೆಚ್ಚಿನ ಎಟಿಎಂನಲ್ಲಿ ಸರಿಯಾಗಿ ನಗದು ಸಿಗುತ್ತಿಲ್ಲ.

ಎಟಿಎಂನಲ್ಲಿ ಕ್ಯಾಶ್ ಇಲ್ಲ ಎಂಬ ಕುರಿತ ದೂರಿನ ಬಗ್ಗೆ ಸರಕಾರ ಗಮನ ಹರಿಸಲಿದೆ ಎಂದು ಭರವಸೆ ನೀಡಿರುವ ದಾಸ್ ಜನರು ಸಹಕಾರ ನೀಡಬೇಕು. ಜನರು ತಮಗೆ ಅಗತ್ಯವಿರುವಷ್ಟು ಮಾತ್ರ ಹಣ ಹಿಂಪಡೆಯಬೇಕು. ಹೆಚ್ಚು ಹಣ ಹಿಂಪಡೆಯುವುದರಿಂದ ಉಳಿದವರಿಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News