ರಣರಂಗವಾದ ಗುಜರಾತ್ ವಿಧಾನಸಭೆ: ಶಾಸಕರ ಹೊಡೆದಾಟ, ಮೂವರಿಗೆ ಗಾಯ
ಗಾಂಧಿನಗರ, ಫೆ.23:ಗುಜರಾತ್ ವಿಧಾನಸಭೆ ಗುರುವಾರ ರಣರಂಗವಾಗಿದ್ದು, ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾರಾಮಾರಿ ನಡೆದು ಕನಿಷ್ಠ ಮೂವರು ಗಾಯಗೊಂಡಿದ್ದಾರೆ. ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿದ ಶಾಸಕರು, ಜೀವಬೆದರಿಕೆಯನ್ನೂ ಹಾಕಿದ ಘಟನೆ ನಡೆದಿದೆ.
ಅಮ್ರೇಲಿ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ವಿಚಾರವನ್ನು ಪ್ರಸ್ತಾಪಿಸಿದಾಗ, ಆಳುವ ಪಕ್ಷ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರ ನಡುವೆ ಉದ್ವಿಗ್ನ ಚರ್ಚೆ ನಡೆದು, ಹೊಡೆದಾಟಕ್ಕೆ ತಿರುಗಿತು.
ಉಭಯ ಪಕ್ಷಗಳ ಸದಸ್ಯರು ಸದನದ ಅಂಗಣಕ್ಕೆ ಧಾವಿಸಿ ಬಂದು ಮಾರಾಮಾರಿಯಲ್ಲಿ ತೊಡಗಿದರು. ಹೊಡೆದಾಟದಲ್ಲಿ ಬಲದೇವ್‌ಜಿ ಠಾಕೂರ್ ಸೇರಿದಂತೆ ಇಬ್ಬರು ಕಾಂಗ್ರೆಸ್ ಶಾಸಕರು, ಬಿಜೆಪಿ ಶಾಸಕ ಹಾಗೂ ಸಹಾಯಕ ಸಚಿವರಾದ ನಿರ್ಮಲಾ ವಾಧ್ವಾನಿಗೆ ಸಣ್ಣಪುಟ್ಟಗಾಯಗಳಾಗಿವೆ.
ಶಾಸಕರ ನಡುವೆ ಘರ್ಷಣೆ ಭುಗಿಲೆದ್ದ ಬಳಿಕ ಸ್ಪೀಕರ್ ರಮಣ್‌ಲಾಲ್ ವೋರಾ ಸದನವನ್ನು ಅಲ್ಪಸಮಯದವರೆಗೆ ಮುಂದೂಡಿದರು.
ಸದನವು ಮತ್ತೆ ಸೇರುತ್ತಿದ್ದಂತೆಯೇ, ಸ್ಪೀಕರ್ ಅವರು ಘರ್ಷಣೆಯನ್ನು ಆರಂಭಿಸಿದ್ದರೆನ್ನಲಾದ ಇಬ್ಬರು ಕಾಂಗ್ರೆಸ್ ಶಾಸಕರನ್ನು ಅಮಾನತುಗೊಳಿಸಿದರು.
ಗುಜರಾತ್ ವಿಧಾನಸಭೆಯಲ್ಲಿ ನಡೆದ ಶಾಸಕರ ಮಾರಾಮಾರಿ ಘಟನೆಯು, ಪ್ರಜಾಪ್ರಭುತ್ವಕ್ಕೆ ‘ಕರಾಳ ದಿನ’ವೆಂದು ಹಿರಿಯ ಕಾಂಗ್ರೆಸ್ ಶಾಸಕ ಶಕ್ತಿಸಿನ್ಹಾ ಗೋಯೆಲ್ ಬಣ್ಣಿಸಿದ್ದಾರೆ ಹಾಗೂ ಆಳುವ ಪಕ್ಷದ ಸದಸ್ಯರು, ಗೂಂಡಾಗಳಂತೆ ವರ್ತಿಸಿ ಪ್ರತಿಪಕ್ಷ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿದರು.
ಘಟನೆಯಲ್ಲಿ ಗಾಯಗೊಂಡಿರುವ ಕಾಂಗ್ರೆಸ್ ಶಾಸಕ ಬಲ್‌ದೇವ್‌ಜಿ ಠಾಕೂರ್, ಅವರು ತನ್ನ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಶಾಸಕರ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ತಿಳಿಸಿದರು.